ಕೊರೊನಾದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸವಾಲು, ಲೋಪ ಇಲ್ಲದಂತೆ ಯಶಸ್ವಿಗೊಳಿಸಲು ಶಾಸಕ ರೆಡ್ಡಿ ನಿರ್ದೇಶನ

ಹರಪನಹಳ್ಳಿ, ಜೂ.22- ಕೊರೊನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ   ಎಸ್ಸೆಸ್ಸೆಲ್ಸಿ ಪರೀಕ್ಷೆ ಒಂದು ಸವಾಲಾಗಿದ್ದು, ಲೋಪವಿಲ್ಲದಂತೆ ಪರೀಕ್ಷೆಯನ್ನು ಯಶಸ್ವಿಗೊಳಿಸಿ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಶಿಕ್ಷಣ ಇಲಾಖಾಧಿಕಾರಿ ಹಾಗೂ ಸಿಬ್ಬಂದಿಗೆ ತಿಳಿಸಿದರು. 

ಪಟ್ಟಣದ ತಾಲ್ಲೂಕು ಪಂಚಾಯಿತಿಯ  ರಾಜೀವ್ ಗಾಂಧಿ ಸಭಾಂಗಣದಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಕೆಲವೊಂದು ರಾಜ್ಯಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ರದ್ದುಗೊಳಿಸಿದ್ದಾರೆ. ಆದರೆ, ನಾವು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿ ಚೆನ್ನಾಗಿ ಪರೀಕ್ಷೆ ಬರೆದು ಸುರಕ್ಷಿತವಾಗಿ ಮನೆಗೆ ತೆರಳುವಂತೆ ಕ್ರಮ ಕೈಗೊಳ್ಳಿ ಎಂದು ಅವರು ಹೇಳಿದರು. ಪರೀಕ್ಷಾ ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸಾ ಬಾಕ್ಸ್, ಶುದ್ಧ ಕುಡಿಯುವ ನೀರು, ಸ್ಯಾನಿಟೈಜರ್, ಮಾಸ್ಕ್, ಸ್ಕ್ಯಾನಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಶಿಕ್ಷಣ ಸಂಯೋಜಕ ಉದಯಶಂಕರ್ ಮಾತನಾಡಿ, 898 ವಿದ್ಯಾರ್ಥಿಗಳು ಕಾಲು ನಡಿಗೆಯಲ್ಲಿ ಬರುತ್ತಾರೆ, 157 ವಿದ್ಯಾರ್ಥಿಗಳು ಸೈಕಲ್ ಮೇಲೆ, 1507 ಜನರು ಪಾಲಕರ ವಾಹನದಲ್ಲಿ, 561 ಜನರು ಆಟೋದಲ್ಲಿ, 18 ಜನರು ಶಾಲಾ ವಾಹನದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬರುವುದಾಗಿ, 38 ಜನರಿಗೆ ಮಾತ್ರ ಹಾಸ್ಟೆಲ್ ವ್ಯವಸ್ಥೆ ಬೇಕು ಎಂದು ನಮಗೆ ತಿಳಿಸಿದ್ದಾರೆ.

379 ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಬರುವುದಾಗಿ ಹೇಳಿದ್ದಾರೆ. 239 ವಿದಾರ್ಥಿಗಳಿಗೆ ಮಾತ್ರ ಪರೀಕ್ಷಾ ಕೇಂದ್ರಕ್ಕೆ ಬರಲು ಖಾಸಗಿ ಬಸ್ಸುಗಳನ್ನು ಮಾಡಿದ್ದೇವೆ ಎಂದು ಅವರು ಹೇಳಿದರು.

ಬ್ಲಾಕ್ ಸಂಪನ್ಮೂಲ ವ್ಯಕ್ತಿ ಗಿರಜ್ಜಿ ಮಂಜುನಾಥ ಮಾಹಿತಿ ನೀಡಿ,  ಪರೀಕ್ಷಾ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಗಮನಿಸಲು ಪ್ರತಿ ಕೇಂದ್ರಕ್ಕೆ ದೈಹಿಕ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದೆ. ಸಿಬ್ಬಂದಿ ಮೊಬೈಲ್ ಸ್ವಾಧೀನಕ್ಕೆ ಸ್ವಾಧೀನಾಧಿಕಾರಿಗಳಾಗಿ ಸಿಆರ್‌ಪಿಗಳನ್ನು ನೇಮಕ ಮಾಡಲಾಗುವುದು, ಒಂದು ಕೊಠಡಿಗೆ 18-20 ವಿದ್ಯಾರ್ಥಿಗಳನ್ನು ಮಾತ್ರ ಕೂಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಮಂಜಾನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ವೀರಭದ್ರಯ್ಯ, ಇಓ ಅನಂತರಾಜು, ಸಮಾಜ ಕಲ್ಯಾಣಾಧಿಕಾರಿ ಆನಂದ ಡೊಳ್ಳಿನ, ಸಿಪಿಐ ಕೆ.ಕುಮಾರ್, ಬೆಸ್ಕಾಂ ಎಇಇ ಭೀಮಪ್ಪ, ಜಯಪ್ಪ, ಇಸಿಓ ಜಯ ಮಾಲತೇಶ್‌ ಇದ್ದರು.

error: Content is protected !!