ದಾವಣಗೆರೆ, ಜೂ.19- ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ತೀರ್ಮಾನವನ್ನು ಹಿಂಪಡೆಯಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷ ಹಾಗೂ ರೈತ-ಕೃಷಿ ಕಾರ್ಮಿಕ ಸಂಘಟನೆ ಜಂಟಿಯಾಗಿ ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಇತ್ತೀಚೆಗೆ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನಿಸಿರುವುದು ಆತಂಕಕಾರಿ ವಿಷಯ. ಇದು ರೈತ ಮತ್ತು ಜನ ವಿರೋಧಿ ನೀತಿಯಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಆಶಯಗಳಲ್ಲಿ ಭೂ ಸುಧಾರಣೆಯೂ ಒಂದು. ಸ್ವಾತಂತ್ರ್ಯಾ ನಂತರ ಬಂದ ಪ್ರಜಾಪ್ರಭುತ್ವವು ಜೀತ ಪದ್ಧತಿಯನ್ನು ರದ್ದುಗೊಳಿಸಿತು. ಒಂದೆಡೆ ಭೂರಹಿತ ರೈತರ ಹೋರಾಟ, ಇನ್ನೊಂದೆಡೆ ಜಮೀನುಗಳಿಂದ ಮುಕ್ತಿ ಪಡೆದ ಜೀತಗಾರರು ಮತ್ತು ಗೇಣಿದಾರರಿಗೆ ನಗರಗಳಲ್ಲಿ ಉದ್ಯೋಗ ನೀಡಲು ಅಸಾಧ್ಯ ಪರಿಸ್ಥಿತಿ ಇದ್ದ ಸಂದರ್ಭದಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಘೋಷಣೆಯೊಂದಿಗೆ 1960-70ರ ದಶಕಗಳಲ್ಲಿ ಭೂ ಸುಧಾರಣಾ ಕಾಯಿದೆಯನ್ನು ಜಾರಿಗೆ ತರಲಾಯಿತು. ಇದು ದೇಶದ ಕೋಟ್ಯಾಂತರ ಭೂ ಹೀನರಿಗೆ ಜೀವನ ಭದ್ರತೆಯನ್ನು ಕಲ್ಪಿಸಿ ಅನುಕೂಲ ಮಾಡಿದಂತಾಗಿತ್ತು. ಇಂತಹ ಮಹತ್ವದ ತೀರ್ಮಾನವನ್ನು ಈ ಕೋವಿಡ್ -19ರ ಸಂಕಷ್ಟದ ಸಂದರ್ಭದಲ್ಲಿ ಯಾವುದೇ ಜನಾಭಿಪ್ರಾಯ ಪಡೆಯದೇ, ಚುನಾಯಿತ ವಿಧಾನ ಸಭೆಯಲ್ಲಿ ಚರ್ಚಿಸದೆ, ತರಾತುರಿಯಲ್ಲಿ ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ಮುಂದಾಗುತ್ತಿರುವುದು ಸಂಪೂರ್ಣವಾಗಿ ಅಪ್ರಜಾತಾಂತ್ರಿಕ ಕ್ರಮವಾಗಿದೆ ಎಂದು ಖಂಡಿಸಿದರು.
ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ, ರೈತರಿಗೆ ವಿದ್ಯುತ್ ಸಬ್ಸಿಡಿ ಕಡಿತ ಮಾಡುವ ಕೇಂದ್ರದ ವಿದ್ಯುಚ್ಛಕ್ತಿ ಕಾಯ್ದೆಯ ತಿದ್ದುಪಡಿ, ಬೀಜ ಕಾಯಿದೆ, ಗುತ್ತಿಗೆ ಕೃಷಿ ಮುಂತಾದ ಕಾಯಿದೆಗಳು ಕೃಷಿ ಕ್ಷೇತ್ರವನ್ನು ಬಡ ರೈತರಿಂದ ಕಸಿದುಕೊಂಡು ದೊಡ್ಡ ಕಾರ್ಪೊರೇಟ್ ಬಂಡವಾಳಶಾಹಿಗಳಿಗೆ ಹಸ್ತಾಂತರ ಮಾಡುವ ಹುನ್ನಾರ ಎಂಬುದು ಸ್ಪಷ್ಟವಾಗುತ್ತಿದೆ. ಇದು ನಮ್ಮ ದೇಶದ ರೈತರ ಮೇಲೆ ಮಾತ್ರವಲ್ಲದೆ ಆಹಾರ ಮತ್ತು ಕೃಷಿ ಉತ್ಪನ್ನಗಳನ್ನು ಬಳಸುವ ಎಲ್ಲರ ಮೇಲೂ ಗಂಭೀರ ಪರಿಣಾಮ ಬೀರಲಿದೆ. ಇಂತಹ ರೈತ ವಿರೋಧಿ ಜನ ವಿರೋಧಿ ತೀರ್ಮಾನವನ್ನು ಸರ್ಕಾರವು ಈ ಕೂಡಲೇ ಹಿಂಪಡೆಯಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಂಜುನಾಥ ಕೈದಾಳೆ, ಡಾ. ಸನತ್ ಕುಮಾರ್, ಬಿ.ಆರ್. ಅರ್ಪಣ, ಮಂಜುನಾಥ್ ಕುಕ್ಕುವಾಡ, ಮಧು ತೊಗಲೇರಿ, ಲೋಕೇಶ್ ನೀರ್ಥಡಿ, ನಾಗರಾಜ್ ನಲ್ಕುದುರೆ, ತಿಪ್ಪೇಸ್ವಾಮಿ ಅಣಬೇರು, ಭಾರತಿ, ಸೌಮ್ಯ, ಸ್ಮಿತಾ, ಲಕ್ಷ್ಮಣ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.