ಶಿವಮೊಗ್ಗ, ಜೂ.18- ಗಾಜನೂರಿನಲ್ಲಿರುವ ತುಂಗಾ ಜಲಾಶಯ ಗುರುವಾರ ಭರ್ತಿಯಾಗಿದ್ದು, 4 ಕ್ರೆಸ್ಟ್ ಗೇಟ್‌ಗಳ ಮೂಲಕ 2000 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.
ತುಂಗಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ 7000 ಕ್ಯೂಸೆಕ್ಸ್‌ನಷ್ಟು ನೀರು ಹರಿದುಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ತಲಾ 500 ಕ್ಯೂಸೆಕ್ಸ್ ನಂತೆ 4 ಗೇಟ್‌ಗಳ ಮೂಲಕ 2000 ಕ್ಯೂಸೆಕ್ಸ್ ನೀರು ನದಿಗೆ ಮತ್ತು ವಿದ್ಯುತ್ ಉತ್ಪಾದನೆಗೆ 4750 ಕ್ಯೂಸೆಕ್ಸ್ ನೀರನ್ನು ಹರಬಿಡಲಾಗಿದೆ. ಜಲಾಶಯ ತುಂಬಲು ಇನ್ನು 1 ಅಡಿ ಬಾಕಿ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನೀರನ್ನು ಹೊರಬಿಡಲಾಗಿದೆ.
588.24 ಮೀಟರ್ ಸಾಮರ್ಥ್ಯದ ಗಾಜನೂರು ಜಲಾಶಯದಲ್ಲೀಗ ನೀರಿನ ಮಟ್ಟ 587.69 ಮೀಟರ್ ಇದ್ದು, ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡುತ್ತಿರುವುದರಿಂದ ತುಂಗಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ.
ಇದರಿಂದ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಲಿದ್ದು, ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ತಿಳಿಸಲಾಗಿದೆ. ಅತ್ತ ಲಿಂಗನಮಕ್ಕಿ ಜಲಾಶ ಯಕ್ಕೂ 13.500 ಕ್ಯೂಸೆಕ್ಸ್ ಒಳಹರಿವು ಇದ್ದು, ಭದ್ರಾ ಜಲಾಶಯಕ್ಕೆ 3,145 ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ.
ಕಳೆದ 24 ಗ೦ಟೆಗಳ ಅವಧಿಯಲ್ಲಿ ಶಿವಮೊಗ್ಗದಲ್ಲಿ 6.80 ಮಿ.ಮೀ., ಭದ್ರಾವತಿ 4.20 ಮಿ.ಮೀ., ತೀರ್ಥಹಳ್ಳಿ 33.60 ಮಿ.ಮೀ., ಸಾಗರ 17.0 ಮಿ.ಮೀ. 4, ಶಿಕಾರಿಪುರ 11.60 ಮಿ.ಮೀ., ಸೊರಬ 14.20 ಮಿ.ಮೀ., ಹೊಸನಗರ 37.60 ಮಿ.ಮೀ.ರಷ್ಟು ಮಳೆಯಾಗಿದೆ.
ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯಕ್ಕೂ ಬರುವ ನೀರಿನ ಒಳಹರಿವು ಹೆಚ್ಚಳವಾಗುತ್ತಿದ್ದು, ಅಚ್ಚುಕಟ್ಟಿನ ರೈತರಿಗೆ ಸಂತಸ ತಂದಿದೆ. ಸಹಜವಾಗಿ ಜುಲೈ ಕೊನೆಯ ವಾರ ಅಥವಾ ಆಗಸ್ಟ್‌ನಲ್ಲಿ ತುಂಗಾ ಜಲಾಶಯ ಭರ್ತಿಯಾಗುತ್ತಿತ್ತು. ಆದರೆ, ಈ ವರ್ಷ 1 ತಿಂಗಳ ಮೊದಲೇ ಭರ್ತಿಯಾಗಿರುವುದು ಎಲ್ಲರಿಗೂ ಹರ್ಷ ತಂದಿದೆ.