ಸಂಚಾರಿ ನಿಯಮದಲ್ಲಿ ವಿನಾಯಿತಿ ನೀಡಲು ಎ.ನಾಗರಾಜ್ ಮನವಿ
ದಾವಣಗೆರೆ, ಜೂ.12- ಸಂಚಾರಿ ನಿಯಮಗಳನ್ನು ಸಾರ್ವ ಜನಿಕರು ಉಲ್ಲಂಘಿಸುತ್ತಿದ್ದಾರೆಂದು ನಗರದ ಪೊಲೀಸರು ನಗರದ ಪ್ರಮುಖ ಸ್ಥಳಗಳಲ್ಲಿ ದಂಡ ವಿಧಿಸುತ್ತಿರುವುದಕ್ಕೆ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ದೂರಿನ ಮೇರೆಗೆ ಇಂದು ಬೆಳಿಗ್ಗೆ ನಗರದ ಡಾ|| ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪೊಲೀಸರು ವಾಹನಗಳನ್ನು ತಡೆದು ದಂಡ ವಿಧಿಸುತ್ತಿರುವುದನ್ನು ಕಂಡು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕೋವಿಡ್ ಮಾರ್ಗಸೂಚಿ ಅನ್ವಯದಂತೆ ದಂಡ ವಿಧಿಸದೇ ಹೆಲ್ಮೆಟ್, ಹೊಗೆ ತಪಾಸಣಾ ಸರ್ಟಿಫಿಕೇಟ್ ಮತ್ತಿತರೆ ಕಾರಣಗಳನ್ನು ನೀಡಿ ದಂಡ ವಿಧಿಸುತ್ತಿರುವುದನ್ನು ಪ್ರಶ್ನಿಸಿದರು.
ಕೆಲವು ವ್ಯಾಪಾರಸ್ಥರು ತಮ್ಮ ಸ್ಥಳಗಳಲ್ಲಿ ಕೆಲಸಗಾರರಿಗೆ ಒಂದೇ ಬೈಕ್ ಮತ್ತು ಹೆಲ್ಮೆಟ್ ಉಪಯೋಗಿಸುತ್ತಿದ್ದು, ಇದರಿಂದ ಕೋವಿಡ್ ಹರಡುವ ಭೀತಿ ಇರಲಿದೆ.
ಇದನ್ನು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಮನಿಸಿ, ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂಬುದಕ್ಕೆ ವಿನಾಯಿತಿ ನೀಡಿ, ಕೋವಿಡ್ ಮಾರ್ಗಸೂಚಿಯಂತೆ ಕಡ್ಡಾಯ ಮಾಸ್ಕ್ ಮತ್ತು ಪರಸ್ಪರ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮವನ್ನು ಪಾಲಿಸದೇ ಇರುವವರಿಗೆ ದಂಡ ಹಾಕಲಿ ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ಸಾರ್ವಜನಿಕರು ದುಡಿಮೆ ಇಲ್ಲದೇ ಸಾಕಷ್ಟು ತೊಂದರೆಗೆ ಈಡಾಗಿದ್ದು, ಇದೀಗ ದಂಡ ವಿಧಿಸಿದರೆ ಅನಾನುಕೂಲ ವಾಗಲಿದೆ. ಇನ್ನೊಂದು 3-4 ತಿಂಗಳು ಸಂಚಾರಿ ನಿಯಮದಲ್ಲಿ ವಿನಾಯಿತಿ ಅವಕಾಶ ಕಲ್ಪಿಸು ವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.