ಕೆಲಸ ಕಾರ್ಯಗಳಿಗೆ ತೆರಳಲು ಜನತೆಯ ಕಳವಳ
ದಾವಣಗೆರೆ, ಜೂ. 10- ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಘೋಷಿಸಲಾಗಿದ್ದ ಲಾಕ್ಡೌನ್ ಬಹುತೇಕ ಸಡಿಲಗೊಂಡಿದೆ. ನಗರದಲ್ಲಿಯೂ ಆರ್ಥಿಕ ವಹಿವಾಟು ಮೊದಲಿನಂತಾಗಿದೆ. ಎಲ್ಲಾ ಖಾಸಗಿ, ಸರ್ಕಾರಿ ಕಚೇರಿಗಳೂ ಕಾರ್ಯ ನಿರ್ವಹಿಸುತ್ತಿವೆ.
ಆದರೆ ನಗರ ಸಾರಿಗೆ ಬಸ್ಸುಗಳು ಇಲ್ಲದೇ ಇರುವುದು ಕಾರ್ಮಿಕರಿಗೆ, ನೌಕರರಿಗೆ ಕಷ್ಟವಾಗುತ್ತಿದೆ.
ದಾವಣಗೆರೆ ನಗರದಲ್ಲಿ ಒಂದೊಂದು ಇಲಾಖೆಯೂ ಒಂದೊಂದು ಮೂಲೆಯಲ್ಲಿವೆ. ಜಿಲ್ಲಾಧಿಕಾರಿ ಕಚೇರಿ ಹರಿಹರ ರಸ್ತೆಯಲ್ಲಿದ್ದು, ಗಾಂಧಿ ವೃತ್ತದಿಂದ ಐದು ಕಿ.ಮೀ.ಗೂ ಹೆಚ್ಚು ದೂರವಿದೆ. ಜಿಲ್ಲಾ ಪಂಚಾಯ್ತಿ ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿದ್ದರೆ. ತಾಲ್ಲೂಕು ಪಂಚಾಯ್ತಿ ಅದರ ವಿರುದ್ಧ ದಿಕ್ಕಿನಲ್ಲಿ ಅಂದರೆ ಬೇತೂರು ರಸ್ತೆಯ ವೆಂಕಟೇಶ್ವರ ವೃತ್ತದ ಬಳಿ ಇದೆ.
ಈ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ಪ್ರಥಮ ದರ್ಜೆ ಅಧಿಕಾರಿಗಳಿಗೆ ಸರ್ಕಾರ ವಾಹನ ಸೌಲಭ್ಯ ನೀಡುತ್ತದೆ. ಆದರೆ ಕೆಳ ಹಂತದ ಸಿಬ್ಬಂದಿಗಳು ಕಚೇರಿಗೆ ತೆರಳುವುದೇ ಸವಾಲಿನ ಕೆಲಸವಾಗಿದೆ.
ಆಟೋಗಳಿಗೆ ಪ್ರಯಾಣಿಕರ ಮಿತಿ ನಿಗದಿ ಮಾಡಿರುವುದರಿಂದ ಅವರೂ ಸಹ ದುಪ್ಪಟ್ಟು ಹಣ ವಸೂಲಿ ಮಾಡಲಾರಂಭಿಸಿದ್ದಾರೆ. ಆರಂಭದ ನಾಲ್ಕು ದಿನಗಳಲ್ಲಿ ಆಟೋ ಪ್ರಯಾಣಿಕರಿಗೆ ಸೀಮಿತವಾಗಿದ್ದ ಸಾಮಾಜಿಕ ಅಂತರ, ಇದೀಗ ಮರೆಯಾಗಲಾರಂಭಿಸಿದೆ. ನಗರದ ಹೊರ ವಲಯಗಳಿಂದ ಬರುವ ಅಪೇ ಆಟೋಗಳಿಗೆ ಕೈ ತೋರಿಸಿದರೆ ಎಷ್ಟು ಜನರನ್ನು ಬೇಕಾದರೂ ತುಂಬಿಕೊಳ್ಳಬಹುದು. ಇದರಿಂದಾಗಿ ಆಟೋ ಹತ್ತಲೂ ಸಹ ಪ್ರಯಾಣಿಕರು ಭಯ ಪಡುವಂತಾಗಿದೆ.
ನಾಳೆಯಿಂದ ನಗರ ಸಾರಿಗೆ ಬಸ್ಗಳ ಸಂಖ್ಯೆ ಹೆಚ್ಚಳ : ನಗರ ಸಾರಿಗೆ ಬಸ್ಗಳ ಸಂಖ್ಯೆಯನ್ನು ನಾಳೆಯಿಂದ ಹೆಚ್ಚಿಸುವುದಾಗಿ ಕೆ.ಎಸ್.ಆರ್.ಟಿ.ಸಿ. ದಾವಣಗೆರೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾರ್ ತಿಳಿಸಿದ್ದಾರೆ.
ಸದ್ಯ 15 ನಗರ ಸಾರಿಗೆ ಬಸ್ಸುಗಳನ್ನು ಓಡಿಸಲಾಗುತ್ತಿದೆ. ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿದೆ. ಕಂಟೈನ್ ಮೆಂಟ್ ಝೋನ್ಗಳ ಸಂಖ್ಯೆ ಹೆಚ್ಚಾಗಿರುವುದು ಜನರು ಪ್ರಯಾಣಿಸದೇ ಇರುವುದಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಿಸಿದರು. ನಾಳೆಯಿಂದ 25 ಬಸ್ಸುಗಳನ್ನು ಓಡಿಸಲು ಕ್ರಮ ಕೈಗೊಳ್ಳಲಾಗು ವುದು. ಹಂತ ಹಂತವಾಗಿ ಮತ್ತಷ್ಟು ಬಸ್ಸುಗಳನ್ನು ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬಾಡಿಗೆ ಆಟೋ ಮಾಡಿಕೊಂಡು ದಿನ ನಿತ್ಯ ಕಚೇರಿ ಕೆಲಸಕ್ಕೆ ಬಂದು ಹೋಗುವುದು ಅಸಾಧ್ಯವಾದ ಮಾತು. ಇನ್ನು ದ್ವಿಚಕ್ರ ವಾಹನ ಓಡಿಸಲು ಬಾರದ ಮಹಿಳಾ ನೌಕರರ ಪಾಡಂತು ಹೇಳತೀರದ್ದಾಗಿದೆ. ಬಸ್ಸುಗಳು, ಆಟೋಗಳಿಲ್ಲದೆ ಕಚೇರಿಯಲ್ಲಿರುವ ನೌಕರರ ಸಹಕಾರ ಪಡೆಯುವುದು ಅನಿವಾರ್ಯವಾಗಿದೆ.
ಸಿಟಿ ಬಸ್ಗಳನ್ನೇ ಅವಲಂಬಿಸಿರುವ ಬಡ ಶಿಕ್ಷಕರಿಗೂ ಸಹ ಸಂಕಟ ಶುರುವಾಗಿದೆ. ಶಾಲೆಗಳಿಗೆ ತೆರಳಲು ಸರ್ಕಾರ ಶಿಕ್ಷಕರಿಗೆ ಆದೇಶಿಸಿದ್ದು, ಶಿಕ್ಷಕರು ಶಾಲೆಗಳಿಗೆ ತೆರಳಲು ಬಸ್ಸುಗಳು ಬೇಕಿದೆ. ಇನ್ನು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ನರ್ಸ್ಗಳು, ಆಯಾಗಳು, ಬ್ಯಾಂಕ್, ಹೋಟೆಲ್, ಬಟ್ಟೆ ಅಂಗಡಿ, ಬಂಗಾರದ ಅಂಗಡಿಗಳಲ್ಲಿ ಕಾರ್ಯನಿರ್ವಹಿಸುವ ಕೆಲಸಗಾರರು ಕಾರ್ಯಕ್ಷೇತ್ರಗಳಿಗೆ ತೆರಳಲು ಇದೀಗ ತುರ್ತಾಗಿ ನಗರ ಸಾರಿಗೆ ಬಸ್ಸುಗಳ ಅಗತ್ಯವಿದೆ.
ಖಾಸಗಿ ನಗರ ಸಾರಿಗೆ ಬಸ್ಸುಗಳನ್ನು ಓಡಿಸಲು ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗಿದೆ. ಇತ್ತ ಇಲ್ಲಿವರೆಗೆ 15 ಸರ್ಕಾರಿ ನಗರ ಸಾರಿಗೆ ಬಸ್ಸುಗಳು ಓಡುತ್ತಿದ್ದು, ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿದೆ. ಆದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾರ್ ಹೇಳಿದ್ದಾರೆ.