ಕಂಟೈನ್‌ಮೆಂಟ್ ಝೋನ್‌ನಲ್ಲಿ ಹಾಲು, ತರಕಾರಿ, ದಿನಸಿ ಕಿಟ್ ವಿತರಿಸಲು ಆಗ್ರಹ

ದಾವಣಗೆರೆ, ಜೂ. 9 – ಕಂಟೈನ್‌ಮೆಂಟ್‌ ವಲಯದಲ್ಲಿರುವ ಜನರಿಗೆ ಜಿಲ್ಲಾಡ ಳಿತ ಹಾಲು, ತರಕಾರಿ, ದಿನಸಿ ಕಿಟ್‌ಗಳನ್ನು ವಿತರಿಸಬೇಕು ಎಂದು ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಎ.ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ನಗರದಲ್ಲಿ ಕೊರೊನಾ ಹಾವಳಿ ದಿನ ದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜಿಲ್ಲಾಡಳಿತ, ಪಾಲಿಕೆ ಸೋಂಕು ನಿಯಂತ್ರಣಕ್ಕಾಗಿ ಶ್ರಮಿಸುತ್ತಿವೆ. ಆದರೆ ಕಂಟೈನ್‌ ಮೆಂಟ್ ಜೋನ್‌ಗಳಲ್ಲಿರುವ ಜನತೆಯ ಹಿತ ಕಾಯುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಜಾಲಿನಗರ, ಬಸವರಾಜ ಪೇಟೆ, ಭಾಷಾನಗರ ಮತ್ತಿತರ ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ಕಳೆದ ಎರಡು ತಿಂಗಳಿನಿಂದ ಜನತೆ ಕೆಲಸಕ್ಕೂ ಹೋಗದೆ ಮನೆಯಲ್ಲಿದ್ದಾರೆ. ಅಲ್ಲಿನ ಪಾಲಿಕೆ ಸದಸ್ಯರು ಕೈಲಾದಷ್ಟು ಕಿಟ್ ನೀಡಿ ನೆರವು ನೀಡಿದ್ದಾರೆ. ಆದರೆ ಅದು ಸಾಕಾಗುತ್ತಿಲ್ಲ. ಅಲ್ಲಿನ ಜನರು ಪಾಲಿಕೆ ಸದಸ್ಯರು ಕಂಡರೆ ಒಂದಿಷ್ಟು ವಿಷ ಕೊಡಿ ಎಂದು ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಪ್ರದೇಶದಲ್ಲಿ ಔಷಧಿ ಬೇಕಾದರೆ ತಂದು ಕೊಡುವವರೂ ಇಲ್ಲವಾಗಿದೆ. ಕೂಡಲೇ ಸ್ಪಂದಿಸದಿದ್ದರೆ ಮುಂದಿನ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆ ಎಂದು ಎಚ್ಚರಿಸಿದರು.

ನಗರದಲ್ಲಿ ಈಗಾಗಲೇ 3 ಕೊರೊನಾ ಪರೀಕ್ಷಾ ಲ್ಯಾಬ್ ಗಳಿದ್ದು ರಾಪಿಡ್ ಟೆಸ್ಟ್ ನಡೆಸದೆ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ ಎಂದು ನಾಗರಾಜ್ ಅಭಿಪ್ರಾಯಿಸಿದರು.

ಪಾಲಿಕೆ ಸದಸ್ಯ ದೇವರಮನೆ ಶಿವ ಕುಮಾರ್, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ವೈದ್ಯರು ಕೊರೊನಾ  ನಿಯಂತ್ರಣ ಕ್ಕಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕಂಟೈನ್‌ ಮೆಂಟ್ ಝೋನ್ ಮತ್ತಷ್ಟು ಬಿಗಿ ಮಾಡಲಿ. ಆದರೆ ಅಲ್ಲಿನ ಜನರ ನೆರವಿಗೆ ಕೂಡಲೇ ಧಾವಿಸಲಿ ಎಂದು ಹೇಳಿದರು.

ಮತ್ತೋರ್ವ ಸದಸ್ಯ ಚಮನ್ ಸಾಬ್, ಕ್ವಾರಂಟೈನ್‌ ಕೇಂದ್ರಗಳಲ್ಲಿ ಸರಿಯಾದ ಊಟ, ವ್ಯವಸ್ಥೆ ಇಲ್ಲ. ಇದರಿಂದ ಜನತೆ ಕ್ವಾರಂಟೈನ್‌ಗೆ ತೆರಳಲು ಭಯ ಪಡುವಂತಾಗಿದೆ ಎಂದರು.

ವಿನಾಯಕ, ಮಂಜುನಾಥ್, ಬಸಾಪುರ ಹರೀಶ್, ಸತೀಶ್ ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!