ಮೂರು ಪಾಸಿಟಿವ್, ಮತ್ತೊಂದು ಸಾವು

ದಾವಣಗೆರೆ, ಜೂ. 3 – ಬುಧವಾರ ಜಿಲ್ಲೆಯಲ್ಲಿ ಮೂರು ಕೊರೊನಾ ಸೋಂಕು ಪ್ರಕರಣಗಳು ಕಂಡು ಬಂದಿದ್ದು, ಇವರ ಪೈಕಿ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾದಿಂದ ಮೃತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಪಿ-2415 ಸೋಂಕಿತರ ಸಂಪರ್ಕಕ್ಕೆ ಬಂದಿದ್ದ 80 ವರ್ಷದ ಮಹಿಳೆಗೂ ಕೊರೊನಾ ತಗುಲಿತ್ತು. ಕಳೆದ ತಿಂಗಳು ಮೇ 29ರಂದು ಜ್ವರ, ಕೆಮ್ಮು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಸಿ.ಜಿ. ಆಸ್ಪತ್ರೆಗೆ ಕರೆ ತರಲಾಗಿತ್ತಾದರೂ, ಆ ವೇಳೆಗೆ ಅವರು ಮೃತಪಟ್ಟಿದ್ದರು. ಈಗ ಅವರು ಕೊರೊನಾ ಸೋಂಕು ಹೊಂದಿರುವುದು ದೃಢಪಟ್ಟಿದೆ.

ಪಿ-2415 ಜೊತೆ ಸಂಪರ್ಕ ಹೊಂದಿದ್ದ 23 ವರ್ಷದ ಇನ್ನೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಅವರಿಗೆ ಪಿ-3862 ಸಂಖ್ಯೆ ನೀಡಲಾಗಿದೆ. 23 ವರ್ಷದ ವ್ಯಕ್ತಿಯು ಮೃತ ಮಹಿಳೆಯ ಮೊಮ್ಮಗ. ಅಜ್ಜಿ ಹಾಗೂ ಮೊಮ್ಮಗ ಜಾಲಿ ನಗರದ ಇ.ಡಬ್ಲ್ಯೂ.ಎಸ್. ಕಾಲೋನಿಗೆ ಸೇರಿದವರಾಗಿದ್ದಾರೆ.

  • ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ  80 ವರ್ಷದ ಮಹಿಳೆ ಸಾವು
  • ಮೃತರ ಸಂಖ್ಯೆ ಐದಕ್ಕೆ ಏರಿಕೆ
  • ಸಕ್ರಿಯ ಸೋಂಕಿತರ ಸಂಖ್ಯೆ 27ಕ್ಕೆ ಇಳಿಕೆ

ಉಳಿದಂತೆ ರಾಜಸ್ಥಾನದ ಅಜ್ಮೀರ್‌‌ ನಿಂದ ಕಳೆದ ಮೇ 23ರಂದು ಮರಳಿದ್ದ ವ್ಯಕ್ತಿಯೊಬ್ಬರಲ್ಲಿ ಸೋಂಕಿರುವುದು ಕಂಡು ಬಂದಿದೆ. ಅವರು ಮೇ 27ರಂದು ತಪಾಸಣೆಗೆ ಒಳಗಾಗಿದ್ದರು. 

ಅವರಿಗೆ ಪಿ-3977 ಸಂಖ್ಯೆ ನೀಡಲಾಗಿದೆ. ಮಾಗಾನಹಳ್ಳಿ ಬಳಿಯ ಮಹಾವೀರ್ ಬಡಾವಣೆಯ ನಿವಾಸಿಯಾಗಿದ್ದಾರೆ. ಇದೇ ದಿನದಂದು 13 ಜನರು ಕೊರೊನಾದಿಂದ ಗುಣಮುಖರಾಗಿ ಮರಳಿದ್ದಾರೆ. ಜಿಲ್ಲೆಯಲ್ಲಿ ಈಗ ಸಕ್ರಿಯ ಸೋಂಕಿತರ ಸಂಖ್ಯೆ 27ಕ್ಕೆ ಇಳಿಕೆಯಾಗಿದೆ.

error: Content is protected !!