ದಾವಣಗೆರೆ, ಮೇ 2 – ಜಿಲ್ಲಾ ಉಸ್ತುವಾರಿ ಸಚಿವ ರನ್ನು ಮಾಡಲು ಶಾಸಕರನ್ನು ಸೇರಿಸಿ ಸಭೆ ಮಾಡುವು ದೆಂದರೆ ಓತಿಕ್ಯಾತ ಮೈ ಮೇಲೆ ಬಿಟ್ಟುಕೊಂಡಂತೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ವ್ಯಾಖ್ಯಾನಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡುತ್ತಿದ್ದ ಅವರು, ಜಿಲ್ಲೆಯಲ್ಲಿ ಆರು ಜನ ಬಿಜೆಪಿ ಶಾಸಕರಿದ್ದರೂ ಸಚಿವ ಸ್ಥಾನ ಸಿಕ್ಕಿಲ್ಲ. ಇದಕ್ಕಾಗಿ ಶಾಸಕರ ಸಭೆ ಕರೆ ಯುವ ಬಗ್ಗೆ ಪ್ರಶ್ನಿಸಿದಾಗ ಈ ಉತ್ತರ ನೀಡಿದ್ದಾರೆ. ಜಿಲ್ಲೆಯಲ್ಲಿ ಆರು ಜನ ಶಾಸಕರಿ ದ್ದಾರೆ. ಆರು ಜನ ಕುಳಿತು ಚರ್ಚಿಸಿ ಇಂತಹವರಿಗೇ ಸಚಿವರನ್ನಾಗಿ ಮಾಡಲಿ ಎಂದು ಹೇಳಲಿ. ಈ ಆರು ಜನರು ಹಾಗೂ ನಾನು ಯಡಿಯೂರಪ್ಪನವರ ಮುಂದೆ ಹೋಗಿ ಬೇಡಿಕೆ ಇಡುತ್ತೇವೆ ಎಂದು ಸಿದ್ದೇಶ್ವರ ಹೇಳಿದರು.
ಆದರೆ, ಈ ಬಗ್ಗೆ ನಾಲ್ಕೈದು ಬಾರಿ ಹೇಳಿದರೂ ಶಾಸಕರು ನಿರ್ಧಾರಕ್ಕೆ ಬಂದಿಲ್ಲ. ಹೀಗಾಗಿ ಸಚಿವ ಸ್ಥಾನಕ್ಕೆ ಬೇಡಿಕೆ ಇಡುತ್ತಿಲ್ಲ ಎಂದು ಸಿದ್ದೇಶ್ವರ ತಿಳಿಸಿದರು.
ಆರು ಜನರ ಸಭೆಯನ್ನು ನೀವೇ ಕರೆಯಬಹುದಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಓತಿಕ್ಯಾತ ಬೇಲಿಯ ಮೇಲಿರುತ್ತದೆ. ಅದನ್ನು ನಾನೇಕೆ ಮೈ ಮೇಲೆ ಬಿಟ್ಟುಕೊಳ್ಳಬೇಕು? ಓತಿಕ್ಯಾತ ಹಾಕಿಕೊಂಡು ಕುಣಿಯಬೇಕೇ? ಎಂದು ಮರು ಪ್ರಶ್ನಿಸಿದರು.
ಸಭೆ ನಡೆಸದಂತೆ ನಿರಾಣಿ, ಕತ್ತಿಗೆ ಹೇಳುವೆ : ಮುರುಗೇಶ್ ನಿರಾಣಿ ಹಾಗೂ ಉಮೇಶ್ ಕತ್ತಿ ಅವರು ನನ್ನ ಸ್ನೇಹಿತರು. ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಬೇಸರವಿದೆ. ಆದರೆ, ಇದಕ್ಕಾಗಿ ಅವರು ಸಭೆ ನಡೆಸದಂತೆ ನಾನು ಹೇಳುತ್ತೇನೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ. ಅವರು ನಡೆಸಿದ ಸಭೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕುರಿತದ್ದೇನೂ ಅಲ್ಲ. ಯಡಿ ಯೂರಪ್ಪ ಪ್ರಶ್ನಾತೀತ ನಾಯಕರು.
ಮುಂದಿನ ಮೂರು ವರ್ಷಗಳ ಕಾಲ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಸಿದ್ದೇಶ್ವರ ಹೇಳಿದ್ದಾರೆ. ಪಕ್ಷದೊಳಗೆ ಯಾವುದೇ ‘ಧಗ ಧಗ’ ಇಲ್ಲ. ವ್ಯವಸ್ಥೆ ಚೆನ್ನಾಗಿದೆ. ಕೊರೊನಾ ನಂತರ ಮಂತ್ರಿ ಮಂಡಲ ವಿಸ್ತರಣೆಯಾಗಲಿದೆ ಎಂದೂ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಕದಲ್ಲೇ ಇದ್ದ ಶಾಸಕ ಎಸ್.ವಿ.ರಾಮಚಂದ್ರ ಅವರನ್ನು ಉದ್ದೇಶಿಸಿ ಮಾತನಾಡಿದ ಸಂಸದರು, ರಾಮಣ್ಣನೇ ಬೇಕಾದರೆ ಸಭೆ ಕರೆಯಲಿ ಎಂದು ಹೇಳಿದರು. ಇದರಿಂದ ನಯವಾಗಿ ಹಿಂದೆ ಸರಿದ ರಾಮಚಂದ್ರ, ನಾವೆಲ್ಲರೂ ಸಿದ್ದೇಶ್ವರ ಅವರ ಮಾರ್ಗದರ್ಶನದಲ್ಲೇ ನಡೆಯುತ್ತೇವೆ ಎಂದು ತಿಳಿಸಿದರು.
ಆಗ ಮಾತನಾಡಿದ ಸಂಸದ ಸಿದ್ದೇಶ್ವರ, ನನ್ನ ಮೇಲೆ ಸಿಟ್ಟು ಮಾಡಿದವರು ಹಾಗೂ ನನ್ನ ಬಗ್ಗೆ ಏಕವಚನ ಮಾತನಾಡಿದವರ ಪರವಾಗಿಯೂ ಕೆಲಸ ಮಾಡಿದ್ದೇನೆ. ನಾನು ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ಭಾವಿಸಿದ್ದೇನೆ ಎಂದೂ ಹೇಳಿದರು.
ಮುಂದುವರೆದು ಮಾತನಾಡಿದ ಅವರು, ನಮ್ಮ ಜಿಲ್ಲೆಯವರೇ ಸಚಿವರಾದರೆ ಅಭಿವೃದ್ಧಿಯಾಗುತ್ತದೆ ಎಂಬುದು ಭ್ರಾಂತಿ. ಶಿವಮೊಗ್ಗದವರು ಮುಖ್ಯಮಂತ್ರಿ ಯಾದರೆ ಬೆಂಗಳೂರು ಅಭಿವೃದ್ಧಿಯಾಗುವುದಿಲ್ಲವೇ? ಬೆಂಗಳೂರಿನ ಅಭಿವೃದ್ಧಿಗೆ ಬೆಂಗಳೂರಿನವರೇ ಮುಖ್ಯಮಂತ್ರಿಯಾಗಬೇಕೇ? ಎಂದು ಹೇಳಿದರು.
ಜಿಲ್ಲೆಯವರೊಬ್ಬರನ್ನು ಪರಿಷತ್ ಸದಸ್ಯರನ್ನಾಗಿ ಮಾಡಲು ಪ್ರಯತ್ನಿಸುವುದಾಗಿ ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿದ್ದೇಶ್ವರ, ಜಿಲ್ಲೆಯಲ್ಲಿ ಆರು ಜನ ಶಾಸಕರಿದ್ದರೂ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿ ಸ್ಥಾನಗಳು ದೊರೆತಿಲ್ಲ ಎಂಬುದು ತಿಳಿದಿದೆ. ಈ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯರನ್ನು ನೇಮಿಸಲು ಪ್ರಯತ್ನ ನಡೆಸುವುದಾಗಿ ಹೇಳಿದರು.