ಕರೆ ಮಾಡಿ ಸಾಲ ನೀಡುತ್ತಿರುವ ಬ್ಯಾಂಕುಗಳು
ಕೊರೊನಾ ಪ್ಯಾಕೇಜ್ ಮೂಲಕ ಸಣ್ಣ ಉದ್ಯಮಗಳಿಗೆ ಸರಳ ಕ್ರಮದಲ್ಲಿ ಸಾಲ ನೀಡಲು ಕ್ರಮ
ದಾವಣಗೆರೆ, ಜೂ. 2 – ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಕಂಗೆಟ್ಟಿರುವ ಆರ್ಥಿಕತೆಗೆ ಉತ್ತೇಜನ ನೀಡಲು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರ, ಈಗ ಸಣ್ಣ ಉದ್ಯಮಗಳ ಪುನರಾರಂಭಕ್ಕಾಗಿ ತ್ವರಿತವಾಗಿ ಸಾಲ ವಿತರಣೆಯನ್ನು ಆರಂಭಿಸಿದೆ.
ಇದರ ಅಂಗವಾಗಿ ಜೂನ್ 1ರ ಒಂದೇ ದಿನದಂದು ದೇಶದಲ್ಲಿ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ 3,200 ಕೋಟಿ ರೂ.ಗಳ ಸಾಲವನ್ನು ನೀಡಲಾಗಿದೆ. ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ತುರ್ತು ಸಾಲ ಯೋಜನೆ) ಮೂಲಕ ಸಾಲ ನೀಡಲಾಗಿದೆ. ಸಣ್ಣ ಉದ್ಯಮಗಳು ಹಣಕಾಸು ಹರಿವಿನ ಸಮಸ್ಯೆಗೆ ಸಿಲುಕಬಾರದು ಎಂದು ಈ ಕ್ರಮ ತೆಗೆದುಕೊಳ್ಳಲಾಗಿದೆ.
ಕೇಂದ್ರ ಸರ್ಕಾರ ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ 50 ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ಸಹ ಘೋಷಿಸಿದೆ. ಸಾಲದ ನೆರವು ತಲುಪುವಂತಾಗಲು ಬ್ಯಾಂಕುಗಳಿಗೆ ಸಾಲದ ಗುರಿಯನ್ನೂ ಸಹ ನಿಗದಿ ಪಡಿಸಲಾಗಿದೆ. ಹೀಗಾಗಿ ಬ್ಯಾಂಕುಗಳೇ ಕಾರ್ಖಾನೆಗಳ ಮಾಲೀಕರಿಗೆ ಕರೆ ಮಾಡಿ ಸಾಲ ನೀಡುತ್ತೇವೆ ಬನ್ನಿ ಎಂದು ಆಹ್ವಾನಿಸುತ್ತಿವೆ! ಈ ಬೆಳವಣಿಗೆಯನ್ನು ಬ್ಯಾಂಕಿಂಗ್ ಮೂಲಗಳು ಖಚಿತ ಪಡಿಸಿವೆ.
ಈಗಾಗಲೇ ಕಾರ್ಖಾನೆಗಳನ್ನು ನಡೆಸುತ್ತಿರುವವರು ಬ್ಯಾಂಕುಗಳಿಂದ ಪಡೆದ ಸಾಲಕ್ಕೆ ಹೆಚ್ಚುವರಿಯಾಗಿ ಶೇ.20ರವರೆಗಿನ ಸಾಲವನ್ನು ಯಾವುದೇ ಅಡಮಾನ ಇಲ್ಲದೇ ನೀಡಲು ಸರ್ಕಾರ ಸೂಚನೆ ನೀಡಿದೆ. ಸಾಲದ ಅಗತ್ಯ ಇರುವ ಸಣ್ಣ ಉದ್ಯಮಗಳು ಸಾಮಾನ್ಯ ಮಾಹಿತಿಯನ್ನು ನೀಡುವುದರೊಂದಿಗೆ ಈ ಹೆಚ್ಚುವರಿ ಸಾಲ ಪಡೆಯಬಹುದಾಗಿದೆ.
ಬ್ಯಾಂಕುಗಳು ಈಗಾಗಲೇ ಸಾಲ ಪಡೆದಿರುವ ವರಿಗೆ ಹೆಚ್ಚುವರಿ ಸಾಲ ನೀಡುತ್ತವೆ. ಹೀಗಾಗಿ ಸಾಲ ನೀಡುವುದು ಹಾಗೂ ಪಡೆಯುವ ಪ್ರಕ್ರಿಯೆಗೆ ಹೆಚ್ಚು ತೊಡಕೇನೂ ಆಗದು. ಕೊರೊನಾ ಕಾರಣದಿಂದಾಗಿ, ಉದ್ಯಮ ಪುನರಾರಂಭಿಸಲು ಸಂಕಷ್ಟ ಎದುರಿಸುತ್ತಿರುವವರಿಗೆ ನೆರವಾಗಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಶ್ರುತ್ ಶಾಸ್ತ್ರಿ ತಿಳಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ತಿಂಗಳೇ ಸಣ್ಣ ಉದ್ಯಮಗಳ ನೆರವಿನ ಪ್ಯಾಕೇಜ್ ಬಗ್ಗೆ ಘೋಷಣೆ ಮಾಡಿದ್ದರು. ಆದರೆ, ಸಾಲ ನೀಡುವ ಕುರಿತ ಅಗತ್ಯ ವಿವರಗಳು ಬ್ಯಾಂಕ್ ಶಾಖೆಗಳಿಗೆ ತಲುಪಿರ ಲಿಲ್ಲ. ಈಗ ಬ್ಯಾಂಕುಗಳಿಗೆ ಎಲ್ಲಾ ಅಗತ್ಯ ಮಾಹಿತಿ ತಲುಪಿದ್ದು ಸಾಲ ವಿತರಣೆ ಆರಂಭವಾಗಿದೆ.
ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗಾರಿಕಾ ಚಟುವಟಿಕೆಗಳು ಸಾಕಷ್ಟು ಕ್ಷೀಣಿಸಿದ್ದವು. ಈಗ ಲಾಕ್ಡೌನ್ ಸಡಿಲಿಕೆ ಯಿಂದಾಗಿ ಕೈಗಾರಿಕೆಗಳು ಮತ್ತೆ ಚಾಲನೆ ಗೊಳ್ಳುವತ್ತ ಹೆಜ್ಜೆ ಹಾಕಬೇಕಿದೆ. ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ ಹೆಚ್ಚೇನೂ ಸಾಲ ವಿತರಣೆ ನಡೆದಿಲ್ಲ. ಜೂನ್ ತಿಂಗಳಲ್ಲಿ ಸಾಲ ವಿತರಣೆ ಪ್ರಕ್ರಿಯೆ ಚುರುಕಾಗಬಹುದಾಗಿದೆ ಎಂಬ ಮಾತುಗಳು ಬ್ಯಾಂಕಿಂಗ್ ವಲಯದಲ್ಲಿ ಕೇಳಿ ಬರುತ್ತಿವೆ.
ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿದ್ದ ಕೈಗಾರಿಕೆಗಳು ಅಡಮಾನ ರಹಿತ ಸಾಲದಿಂದಾಗಿ ತಮ್ಮ ಕಾರ್ಮಿಕರಿಗೆ ವೇತನ ಪಾವತಿಸುವುದು, ಬಾಡಿಗೆ ನೀಡುವುದು ಹಾಗೂ ವೆಚ್ಚವನ್ನು ನಿಭಾಯಿಸುವುದು ಸಾಧ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ಭಾವಿಸಿದೆ.
ಸರ್ಕಾರದ ಕ್ರಮದಿಂದ ಕೈಗಾರಿಕೆ ಹಾಗೂ ಕಾರ್ಮಿಕರಷ್ಟೇ ಅಲ್ಲದೇ ಬ್ಯಾಂಕುಗಳೂ ಸಹ ಚಟುವಟಿಕೆಗಳನ್ನು ಹೆಚ್ಚಿಸಲು ಸಹಕಾರಿಯಾದಂ ತಾಗಿದೆ. ಬ್ಯಾಂಕುಗಳೂ ಸಹ ಕೈಗಾರಿಕೆಗಳ ಜೊತೆ ಚುರುಕಾಗುವ ಕಾಲ ಬಂದಂತಾಗಿದೆ.