ದಾವಣಗೆರೆ, ಮೇ 29- ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾಗಿರುವ ಆಟೋ ಚಾಲಕರಿಗೆ ರಾಜ್ಯ ಸರ್ಕಾರ 1610 ಕೋಟಿ ರೂ. ವಿಶೇಷ ಪ್ಯಾಕೇಜ್ ಪ್ರಕಟಿಸಿ 20 ದಿನ ಕಳೆದರೂ ಫಲಾನುಭವಿಗಳ ಖಾತೆಗೆ ಒಂದು ನಯಾ ಪೈಸೆ ಜಮಾ ಆಗಿಲ್ಲ, ಕೇವಲ ಘೋಷಣೆಗಳಿಗೆ ಮಾತ್ರ ಸರ್ಕಾರ ಸೀಮಿತವಾಗಿದೆ ಎಂದು ಜಿಲ್ಲಾ ಮಹಾತ್ಮ ಗಾಂಧಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಹೆಚ್. ತಿಮ್ಮಣ್ಣ ಆರೋಪಿಸಿದ್ದಾರೆ.
ಕಾಸಿಲ್ಲದೆ ಪ್ಯಾಕೇಜ್ ಘೋಷಿಸಿ ಶ್ರಮಿಕರ ಜೀವನದಲ್ಲಿ ಚೆಲ್ಲಾಟವಾಡುತ್ತಿದ್ದು, ಹೆಸರಿಗೆ ಮಾತ್ರ ವಿಶೇಷ ಪ್ಯಾಕೇಜ್ ಎಂದು ಘೋಷಿಸಿ ರಾಜ್ಯ ಸರ್ಕಾರ ಕೈತೊಳೆದುಕೊಂಡಿದೆ. ಸೇವಾ ಸಿಂಧು ಆಪ್ನಲ್ಲಿ ಅರ್ಜಿಗಳನ್ನು ತುಂಬುವಾಗ ಇಲ್ಲ- ಸಲ್ಲದ ನಿಯಮಗಳನ್ನು ಸಾರಿಗೆ ಇಲಾಖೆಯವರು ಹೇಳಿ ಆಟೋ ಚಾಲಕರನ್ನು ದಿಕ್ಕುತಪ್ಪಿಸಿ, ವಾಪಸ್ ಕಳುಹಿಸುತ್ತಿದ್ದಾರೆ. ಹೀಗಾದರೆ ಯಾವಾಗ ಪರಿಹಾರ ಸಿಗುತ್ತದೆ. ಮುಖ್ಯಮಂತ್ರಿಗಳು ಬಡ ಆಟೋ ಚಾಲಕರ ಖಾತೆಗೆ ಶೀಘ್ರವೇ ಹಣ ಪಾವತಿಸಬೇಕು ಎಂದು ತಿಮ್ಮಣ್ಣ ಒತ್ತಾಯಿಸಿದ್ದಾರೆ.