ದಾವಣಗೆರೆ, ಮೇ 27 – ಕೊರೊನಾ ಸೋಂಕು ಹೋಗುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕೊರೊನಾ ಒಂದೆರಡು ತಿಂಗಳು ಇರುತ್ತದೆ ಎಂದುಕೊಂಡಿದ್ದೆವು. ಆದರೆ, ಅದು ಹೋಗುವ ಲಕ್ಷಣಗಳಿಲ್ಲ ಎಂದು ಹೇಳಿದ್ದಾರೆ.
ಕೊರೊನಾ ಎಷ್ಟು ತಿಂಗಳಿರುತ್ತದೋ ಗೊತ್ತಿಲ್ಲ. ಹೀಗಾಗಿ ಕೊರೊನಾ ಜೊತೆಗೇ ಆರ್ಥಿಕ ಅಭಿವೃದ್ಧಿ ಕೂಡ ಮಾಡಬೇಕಿದೆ. ಅಭಿವೃದ್ಧಿ ಕಾರ್ಯಗಳನ್ನು ತೆಗೆದುಕೊಳ್ಳುವ ದೃಷ್ಟಿಯಿಂದ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಎಲ್ಲೂ ಸಾಮಾಜಿಕ ಅಂತರ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಬಿಬಿಎಂಪಿ ಬಸ್ಗಳಲ್ಲಿ ಸಾಮಾಜಿಕ ಅಂತರ ನಿರ್ವಹಣೆ ಆಗದೇ ಇರುವ ಕುರಿತು ಪ್ರಶ್ನಿಸಿದಾಗ ಅವರು ಈ ಉತ್ತರ ನೀಡಿದ್ದಾರೆ.
ಬೈಕ್ಗಳಲ್ಲಿ ಇಬ್ಬರು – ಮೂವರು ಹೋಗುತ್ತಿದ್ದಾರೆ. ವಿಮಾನಗಳಲ್ಲಿ ಸಾಮಾಜಿಕ ಅಂತರವಿಲ್ಲ.
ಸಾಮಾಜಿಕ ಜೀವನ ಆರಂಭವಾದ ನಂತರ ಈಗ ಎಲ್ಲಿಯೂ ಸಾಮಾಜಿಕ ಅಂತರ ನಿರ್ವಹಣೆಯಾಗುತ್ತಿಲ್ಲ. ಹೀಗಿರುವಾಗ §ಯಾಕಣ್ಣ ಬಸ್ ಮೇಲೆ ಸಿಟ್ಟು?¬ ಎಂದವರು ಪ್ರಶ್ನಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಈಗಿರುವಂತೆ ಶೇ.30ರಷ್ಟು ಸೀಟುಗಳನ್ನು ಮಾತ್ರ ತುಂಬಿ ಬಸ್ ನಿರ್ವಹಿಸಿದರೆ ಭಾರೀ ನಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಬರುವ ಜೂನ್ 1ರಿಂದ ಕೆಂಪು ವಲಯವಲ್ಲದ ಪ್ರದೇಶಗಳಲ್ಲಿ ಹೆಚ್ಚು ಜನರು ಪ್ರಯಾಣಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿದ್ದೇವೆ ಎಂದು ಹೇಳಿದರು.