ಬೆಂಬಲ ಬೆಲೆಯೊಂದಿಗೆ 200 ರೂ. ಬೋನಸ್‌ ನೀಡಿ ಭತ್ತ, ಮೆಕ್ಕೆಜೋಳ ಖರೀದಿಸಲು ಒತ್ತಾಯ

ದಾವಣಗೆರೆ, ಮೇ 27- ರಾಜ್ಯದಲ್ಲಿ ಮೆಕ್ಕೆಜೋಳದ ಬೆಲೆ ಕುಸಿದಿದ್ದು ಕೋವಿಡ್-19 ಲಾಕ್‌ಡೌನ್‌ನಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ.  ಭತ್ತ ಹಾಗೂ ಮೆಕ್ಕೆಜೋಳವನ್ನು ಸಹ ಸರ್ಕಾರ ಬೆಂಬಲ ಬೆಲೆ ಜೊತೆಗೆ 200 ರೂ. ಬೋನಸ್‌ ನೀಡಿ ಖರೀದಿಸುವಂತೆ ಭಾರತೀಯ ರೈತ ಒಕ್ಕೂಟವು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.

ತುಂಗ, ಭದ್ರಾ, ಕಾವೇರಿ, ಕೃಷ್ಣ ಬಯಲಿಗೆಲ್ಲ ಹಾಗೂ ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಭತ್ತದ ಬೆಳೆ ಬರುತ್ತಿದ್ದು, ಲಾಕ್‌ಡೌನ್‌ ಪರಿಸ್ಥಿತಿಯಿಂದಾಗಿ ಭತ್ತದ ಬೆಲೆ ತೀವ್ರ ಕುಸಿತ ಕಂಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದೇ ದಿನಾಂಕ 20 ರಿಂದ ಭಾರತ ಆಹಾರ ನಿಗಮ ಪಂಜಾಬ್‌ ಮತ್ತು ಹರಿಯಾಣದಲ್ಲಿ ಖರೀದಿ ಆರಂಭಿಸಿದೆ. ಕ್ವಿಂಟಾಲ್‌ಗೆ 50 ರೂ. ಬೋನಸ್‌ ಬೇರೆ ಕೊಡುತ್ತಿದೆ. ಜೂನ್ 30 ರವರೆಗೆ ಈ ಪ್ರಕ್ರಿಯೆ ನಡೆಯಲಿದೆ.

ಹರಿಯಾಣದಂತಹ ಚಿಕ್ಕ ರಾಜ್ಯದಲ್ಲಿ 2000 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಹಿಂದೆ 1978 ರಲ್ಲಿಯೇ ಭಾರತ ಆಹಾರ ನಿಗಮ ಕರ್ನಾಟಕದಲ್ಲಿ ಹೈಬ್ರಿಡ್‌ ಜೋಳ, ರಾಗಿಯ ಖರೀದಿಸಿದೆ. ರಾಜ್ಯದಲ್ಲಿ ಕುಂಟು ನೆಪ ಹೇಳದೆ ಖರೀದಿಗೆ ಮುಂದಾಗಲಿ ಎಂದು ಒಕ್ಕೂಟ ಆಗ್ರಹಿಸಿದೆ.

ಈ ಸಂಬಂಧ ನಿನ್ನೆ ನಗರಕ್ಕಾಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರನ್ನು ಭೇಟಿ ಮಾಡಿದ ಒಕ್ಕೂಟಕದ ಅಧ್ಯಕ್ಷ ಶಾಮನೂರಿನ ಹೆಚ್.ಆರ್. ಲಿಂಗರಾಜ್, ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಶಾಸಕ ಎಸ್. ಎ. ರವೀಂದ್ರನಾಥ್ ಸಮ್ಮುಖದಲ್ಲಿ ಸಚಿವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಹನುಮಂತಪ್ಪ, ಪುನೀತ್, ಮಂಜುನಾಥ್, ಮಹೇಶ್, ಶಶಿಧರ್ ಮತ್ತಿತರರಿದ್ದರು.

error: Content is protected !!