ರಾತ್ರಿಯೂ ಬಸ್ ಓಡಿಸಲು ನಿರ್ಧಾರ: ಸವದಿ

ದಾವಣಗೆರೆ, ಮೇ 27- ದೂರದ ಊರುಗಳಿಗೆ ಪ್ರಯಾಣ ಮಾಡಲು ರಾತ್ರಿ ಬಸ್ ಬಿಡಲು ಹಾಗೂ ಎಸಿ ಬಸ್‌ಗಳಿಗೂ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ನಗರದ ಕೆಎಸ್‍ಆರ್‍ಟಿಸಿ ವಿಭಾಗೀಯ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳಿಗೆ ಆಗಿರುವ ಹಾನಿ ತಗ್ಗಿಸಲು ಆಡಳಿತಾತ್ಮಕ ವೆಚ್ಚಗಳನ್ನು ಕಡಿತಗೊಳಿಸುವ ಅಗತ್ಯವಿದೆ ಎಂದು ತಿಳಿಸಿದರು.

ಬೇಡಿಕೆಗೆ ಅನುಗುಣವಾಗಿ ರಾತ್ರಿ ಬಸ್ ಸಂಚಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಎ.ಸಿ.ಯೇತರ ಬಸ್‌ಗಳು ಮಾತ್ರ ಈಗ ಕಾರ್ಯ ನಿರ್ವಹಿಸುತ್ತಿವೆ. ವಿಮಾನಗಳು ಎ.ಸಿ.ಯೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ನಾವೂ ಸಹ ಅದೇ ಮಾನದಂಡದಲ್ಲಿ 24-25 ಡಿಗ್ರಿ ಸೆಲ್ಸಿಯಸ್ ತಾಪಮಾನದೊಂದಿಗೆ ಎ.ಸಿ. ಬಸ್‌ಗಳನ್ನು ಬಿಡಲು ತೀರ್ಮಾನಿಸಿದ್ದೇವೆ ಎಂದು ಸಚಿವರು ಹೇಳಿದರು.

ಕೆಎಸ್‍ಆರ್‍ಟಿಸಿ ನಾಲ್ಕು ನಿಗಮಗಳಿಂದ ಈ ತಿಂಗಳವರೆಗೆ 1,800 ಕೋಟಿ ರೂ. ನಷ್ಟ ಆಗಿದೆ. ಇನ್ನೂ ಹೀಗೆ ಮುಂದುವರೆದರೆ ಏನೆಲ್ಲ ಕ್ರಮ ಕೈಗೊಳ್ಳ ಬೇಕೆಂದು ಚಿಂತಿಸಬೇಕಿದೆ. ಅಧಿಕಾರಿ-ನೌಕರರ ಸಂಬಳಕ್ಕೆ 326 ಕೋಟಿ  ರೂ. ಅವಶ್ಯಕತೆ ಇದೆ. ಆದ್ದರಿಂದ ನಿಗಮಗಳ ಆಡಳಿತಾತ್ಮಕ ವೆಚ್ಚವನ್ನು  ಕಡಿತಗೊಳಿಸಲು ಕ್ರಮ ವಹಿಸಬೇಕಿದೆ ಎಂದರು.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇದಕ್ಕಾಗಿ ಬಸ್ಸಿನಲ್ಲಿ ಶೇ.52 ಸೀಟಿಂಗ್ ಮಾತ್ರ ಹಾಕಿಕೊಳ್ಳಬೇಕು. ಇದರಿಂದ 54 ಜನರು ಕೂರುವ ಬಸ್ಸಿನಲ್ಲಿ 30 ಜನರಿಗೆ ಮಾತ್ರ ಅವಕಾಶ ನೀಡಬೇಕಿದೆ. ಈ ಕಾರಣದಿಂದ ಆದಾಯ ಕುಂಠಿತವಾಗಿದೆ. ಎಸಿ ಬಸ್‍ಗಳಿಗೆ ಅವಕಾಶ ಇಲ್ಲ. ಅಂತರರಾಜ್ಯ ಓಡಾಟ ಇಲ್ಲ. ಜೊತೆಗೆ ಬೆಳಗಿನ ವೇಳೆಗೆ ಮಾತ್ರ ಸೀಮಿತ ಗೊಂಡಿರುವುದು ಕೂಡ ಆದಾಯ ಕುಂಠಿತಕ್ಕೆ ಕಾರಣಗಳಾಗಿವೆ. ಇವೆಲ್ಲ ಸಮಸ್ಯೆಗಳಿಗೆ ಪರಿ ಹಾರೋಪಾಯ ಕಂಡುಕೊಂಡು ಆದಾಯ ಹೆಚ್ಚಿಸುವ ಪ್ರಯತ್ನ ಮಾಡಬೇಕಿದೆ ಎಂದರು.

ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ.ಪ್ರಭಾಕರ ರೆಡ್ಡಿ ಮಾತನಾಡಿ, ಪ್ರತಿ ಕಿ.ಮೀಗೆ 34 ರೂ. ಖರ್ಚು ಬರುತ್ತಿದ್ದರೆ. 24 ರೂ. ಆದಾಯವಿದೆ. 10 ರೂ. ನಷ್ಟ
ಸಂಭವಿಸುತ್ತಿದೆ. ಪ್ರಸ್ತುತ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ಬಸ್ ಓಡಿಸುತ್ತಿರುವುದರಿಂದ ಶೇ 15 ರಿಂದ 20 ಅಂದರೆ 1 ಕೋಟಿ ಆದಾಯ ಮಾತ್ರ ಬರುತ್ತಿದೆ. 

ಇನ್ನು ಶಾಲಾ-ಕಾಲೇಜುಗಳು ಆರಂಭವಾದರೆ ಸಾಮಾಜಿಕ ಅಂತರವೂ ಕಷ್ಟ ಆಗುತ್ತದೆ. ಹೆಚ್ಚು ಬಸ್‍ಗಳನ್ನು ಬಿಡಬೇಕಾಗುತ್ತದೆ. ಆದರೆ ಸಾಮಾಜಿಕ ಅಂತರದ ನಿಯಮ ಅನುಸರಿಸಿ ಹೆಚ್ಚು ಬಸ್ ಬಿಟ್ಟಷ್ಟು ನಷ್ಟ ಹೆಚ್ಚು ಆಗುತ್ತದೆ. ಜೊತೆಗೆ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ, ಲಾಕ್‍ಡೌನ್ ಇನ್ನಷ್ಟು ಸಡಿಲಗೊಂ ಡಲ್ಲಿ ಬಸ್ ಬಳಸುವವರ ಸಂಖ್ಯೆ ಹೆಚ್ಚಾದರೆ ನಿರ್ವಹಿಸುವುದು ಕಷ್ಟ. ಈಗ ಜನರೇ ಹೆಚ್ಚು ಬರುತ್ತಿಲ್ಲ, ಹಾಗಾಗಿ ಸಾಮಾಜಿಕ ಅಂತರ ಸಾಧ್ಯವಾಗುತ್ತಿದೆ ಎಂದರು.

ಕೆಎಸ್‍ಆರ್‍ಟಿಸಿ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್, ದಾವಣಗೆರೆ ವಿಭಾಗದ ಕುರಿತು ಪ್ರಗತಿ ಮಾಹಿತಿ ನೀಡಿ, ಅಂತರರಾಜ್ಯ ಮತ್ತು ಬೆಂಗಳೂರಿಗೆ ತೆರಳುವ ಬಸ್ಸುಗಳಿಂದ ಲಾಭ ಇದೆ. ಈ ಕಾರ್ಯಾಚರಣೆ ಆರಂಭವಾದ ಮೇಲೆ ಸ್ವಲ್ಪ ಸುಧಾರಣೆ ಕಾಣಬಹುದು. ನಿಗಮದಲ್ಲಿ ಸಾಕಷ್ಟು ಜನರು ಹೊರ ಗುತ್ತಿಗೆ ಆಧಾರದಲ್ಲಿ ನೌಕರರು ಇದ್ದು, ಅಗತ್ಯವಿರುವ ಇಲಾಖೆಗಳಿಗೆ ಇವರನ್ನು ನಿಯೋಜಿಸುವ ಮೂಲಕ ಆಡಳಿತಾತ್ಮಕ ವೆಚ್ಚ ತಗ್ಗಿಸಬಹುದು ಎಂದರು.

ಸಂಸದ ಜಿ.ಎಂ ಸಿದ್ದೇಶ್ವರ್ ಮಾತನಾಡಿ, ಚನ್ನಗಿರಿಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ನಿರ್ಮಿಸಲು ಜಾಗ ಹುಡುಕಬೇಕು. ಮಾಯಕೊಂಡದಲ್ಲಿ ಜಾಗ ಇದ್ದು ಇಲ್ಲಿ ಒಂದು ಕೆಎಸ್‍ಆರ್‍ಟಿಸಿ ಡಿಪೋ ಆಗಬೇಕು. ಹಾಗೂ ಸಂತೆಬೆನ್ನೂರು ಮತ್ತು ತ್ಯಾವಣಗಿಯಲ್ಲಿ ನಿಲ್ದಾಣ ನಿರ್ಮಾಣ ಆಗಬೇಕಿದೆ. 14 ಕೋಟಿ ರೂ. ವೆಚ್ಚದಲ್ಲಿ ಹರಿಹರ ಬಸ್‍ನಿಲ್ದಾಣ ಉನ್ನತೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನೇಕ ಹಳ್ಳಿಗಳಿಗೆ ಬಸ್ ಬೇಕೆಂದು ಬೇಡಿಕೆ ಇದೆ. ಅಲ್ಲಿಗೆ ಬಸ್‍ಗಳನ್ನು ಬಿಡಬೇಕು ಎಂದರು.

ಸಚಿವರು ಪ್ರತಿಕ್ರಿಯಿಸಿ ದಾವಣಗೆರೆ ವಿಭಾಗಕ್ಕೆ 63 ಹೊಸ ಬಸ್‍ಗಳನ್ನು ನೀಡ ಲಾಗಿದೆ. ಇನ್ನು ಮುಂದೆ ಅವು ಕಾರ್ಯಾರಂಭ ಮಾಡಲಿವೆ. ಸ್ಮಾರ್ಟ್ ಸಿಟಿ ಯೋಜನೆ ಯಡಿಯ ಬಸ್ ನಿಲ್ದಾಣಗಳ ಕಾಮಗಾರಿ ಗಳನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊ ಳಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ನಗರಾಭಿವೃದ್ದಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ, ಪಾಲಿಕೆ ಮಹಾಪೌರ ಬಿ.ಜಿ.ಅಜಯಕುಮಾರ್, ಎಸ್‍ಪಿ ಹನುಮಂತರಾಯ, ಪರಿಸರ ಮತ್ತು ಸಿಬ್ಬಂದಿ ನಿರ್ದೇಶಕಿ ಕವಿತಾ ಎಸ್ ಮನ್ನಿಕೇರಿ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಶಿವಕುಮಾರಯ್ಯ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!