ಸಾವರ್ಕರ್‌ಗೆ ಭಾರತ ರತ್ನ ವಿರೋಧ ಹಿನ್ನೆಲೆ
ದಾವಣಗೆರೆ, ಮೇ 23- ಸಾರ್ವಕರ್‍ಗೆ ಭಾರತ ರತ್ನ ನೀಡಬಾರದು ಎಂದು ಮಾಧ್ಯಮಗಳಲ್ಲಿ ನೀಡಿರುವ ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸಬೇಕು ಎಂದು ತಮಗೆ ಎಚ್ಚರಿಕೆಯ ಬೆದರಿಕೆ ಪತ್ರ ಅನಾಮಧೇಯ ವ್ಯಕ್ತಿಯಿಂದ ಪುನಃ ನಿನ್ನೆ ಬಂದಿರುವುದಾಗಿ ಕೆಪಿಸಿಸಿ ಮಾಧ್ಯಮ ವಕ್ತಾರ ಡಿ. ಬಸವರಾಜ್ ಆತಂಕ ವ್ಯಕ್ತಪಡಿಸಿದ್ದಾರೆ.
ಹೀಗೆ ಪದೇ ಪದೇ ಇಲ್ಲಿವರೆಗೂ ಸುಮಾರು 4 ಬೆದ ರಿಕೆ ಪತ್ರಗಳು ತನಗೆ ಬಂದಿವೆ. ಇಂದು ಐಜಿಪಿ ಅವರ ಬಳಿ ತೆರಳಿ ದೂರು ನೀಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೂ ತಂದಿರುವು ದಾಗಿ ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಅಕ್ಟೋಬರ್ ನಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮಹಾರಾಷ್ಟ್ರ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಹಿಂದುತ್ವ ಪ್ರತಿಪಾದಕ ಸಾರ್ವಕರ್ ಗೆ ಮರಣೋತ್ತರವಾಗಿ ಭಾರತ ರತ್ನ ನೀಡುವ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಬಗ್ಗೆ ಪ್ರಸ್ತಾಪಿಸಿತ್ತು. ಈ ಹಿನ್ನೆಲೆಯಲ್ಲಿ ತಾನು ವಿರೋಧ ವ್ಯಕ್ತಪಡಿಸಿದ್ದೆ. ಅಂದಿನಿಂದಲೂ ನನಗೆ ಬೆದರಿಕೆಯ ಕರೆ ಬರುತ್ತಿವೆ ಎಂದು ವಿವರಿಸಿದರು.
ನಿನ್ನೆ ಬಂದಿರುವ ಬೆದರಿಕೆಯ ಪತ್ರದೊಂದಿಗೆ ಸಾರ್ವಕರ್ ಪುಸ್ತಕವನ್ನಿಟ್ಟು ಮೇ 28ರೊಳಗಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮುಂದಾಗುವ ಘಟನೆಯ ಬಗ್ಗೆ ಎಚ್ಚರಿಕೆ ಎಂದು ಬರೆಯಲಾಗಿದೆ. ಈ ರೀತಿ ಬೆದರಿಕೆಯೊಡ್ಡುತ್ತಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿ ಕ್ರಮ ಜರುಗಿಸುವಂತೆ ಪೋಲಿಸರಲ್ಲಿ ಮನವಿ ಮಾಡಲಾಗಿದೆ. ಆದರೂ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಕೆ. ಚಮನ್ ಸಾಬ್, ಮಂಜುನಾಥ್, ನಾಗರಾಜ್, ರಾಘು ದೊಡ್ಡಮನಿ, ಡಿ. ಶಿವಕುಮಾರ್, ಉದಯ್ ಕುಮಾರ್ ಇದ್ದರು.