ಡೆಂಗ್ಯೂ, ಚಿಕುನ್‌ಗುನ್ಯ ತಡೆಗೆ ಅಗತ್ಯ ಕ್ರಮಕ್ಕೆ ವಿಬಿಡಿಇ ಸೂಚನೆ

ದಾವಣಗೆರೆ, ಮೇ 23- ಮೇ 16 ರಾಷ್ಟ್ರೀಯ ಡೆಂಗ್ಯೂ ವಿರೋಧಿ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಲ್ಲಿ ಡೆಂಗ್ಯೂ ಮತ್ತು ಚಿಕುನ್‌ಗುನ್ಯ ವೈರಸ್ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳನ್ನು ಇಲಾಖೆ ತಿಳಿಸಿದೆ.

ಡೆಂಗ್ಯೂ/ಚಿಕುನ್‌ಗುನ್ಯ ವೈರಸ್‌ನಿಂದ ಉಂಟಾಗುವ ಜ್ವರಗಳು ರಕ್ತಪರೀಕ್ಷೆಯಿಂದ ಮಾತ್ರ ಪತ್ತೆ ಹಚ್ಚಬಹುದು. ಹಗಲಿನಲ್ಲಿ ಕಚ್ಚುವ ಸೋಂಕಿನ ಈಡಿಸ್ ಸೊಳ್ಳೆಗಳಿಂದ ಈ ಜ್ವರ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈಡಿಸ್ ಸೊಳ್ಳೆಗಳು ಮನೆಯಲ್ಲಿನ ಸ್ವಚ್ಛ ನೀರಿನ ಸಂಗ್ರಹಗ ಳಲ್ಲಿ ಉತ್ಪತ್ತಿಯಾಗುತ್ತದೆ. ನಿಮ್ಮ ಮನೆಯಲ್ಲಿನ ತೊಟ್ಟಿ, ಬ್ಯಾರೆಲ್, ಡ್ರಮ್‌ಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಿ, ಪುನಹ ನೀರು ತುಂಬಿ ಎಲ್ಲಾ ನೀರಿನ ಶೇಖರಣೆಗಳನ್ನು ಮುಚ್ಚಿಡಬೇಕು.

ಮನೆ ಮತ್ತು ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ, ಘನ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಪರಿಸರವನ್ನು ಸ್ವಚ್ಛವಾಗಿಡಿ. ಸೊಳ್ಳೆಗಳು ಕಚ್ಚದಂತೆ ಮೈತುಂಬಾ ಬಟ್ಟೆ ಧರಿಸಿ, ಸೊಳ್ಳೆ ಪರದೆ, ಸೊಳ್ಳೆ ಬತ್ತಿ, ಮುಲಾಮು ದ್ರಾವಣಗಳನ್ನು ಉಪಯೋಗಿಸಿ. ಡೆಂಗ್ಯೂ, ಚಿಕುನ್‌ಗುನ್ಯ ರೋಗಿಗಳು ತಪ್ಪದೇ ಸೊಳ್ಳೆಪರದೆಯನ್ನು ಉಪಯೋಗಿಸುವುದು. ರಕ್ತ ಪರೀಕ್ಷೆ ಮತ್ತು ಚಿಕಿತ್ಸೆ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ. ಈಡಿಸ್ ಲಾರ್ವ ಸಮೀಕ್ಷೆಗಾಗಿ ನಿಮ್ಮ ಮನೆಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಸ್ವಯಂ ಸೇವಕರಿಗೆ ಸಹಕಾರ ನೀಡಿ ಅವರ ಸಲಹೆಗಳನ್ನು ಪಾಲಿಸಿರಿ. ಯಾವುದೇ ಜ್ವರ ಇರಲಿ, ನಿರ್ಲಕ್ಷಿಸದೆ ತಕ್ಷಣ ವೈದ್ಯರ ಸಲಹೆ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಶುಲ್ಕರಹಿತ ಸಹಾಯವಾಣಿ 104 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಬಿಡಿಇ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!