ಕೊರೊನಾ ಕಾರಣದಿಂದ ನಾನಾ ಜನರಿಗೆ ನಾನಾ ರೀತಿಯ ಸಮಸ್ಯೆಗಳಾಗಿವೆ. ಆದರೆ, ಅವೆಲ್ಲವೂ ಈಗ ಬಗೆಹರಿಯುವ ಹಾದಿಯಲ್ಲಿವೆ! ಕೇಂದ್ರ ಹಣಕಾಸು ಸಚಿವರು 20 ಲಕ್ಷ ಕೋಟಿ ರೂ.ಗಳನ್ನೇ ಹರಿಸಿ ಬಿಟ್ಟಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಲಾಕ್ಡೌನ್ ಅನ್ನೇ ಸಡಿಲಿಸಿ ರಾಜ್ಯಾದ್ಯಂತ ಬಸ್ ಓಡಿಸಲು ಬಿಟ್ಟಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯವೂ ಕೊರೊನಾ ಕಾರಣದಿಂದ ದೇಶದಲ್ಲಿ ಸಾಯುವವರ ಸಂಖ್ಯೆ ಕೇವಲ ಲಕ್ಷಕ್ಕೆ 0.2 ಎಂದು ತಿಳಿಸಿದೆ. ಇನ್ನೇನು ಹೊಡೀರಿ ಚಪ್ಪಾಳೆ, ಬಂದವು ಅಚ್ಛೇ ದಿನ್ ಎನ್ನುವ ಪರಿಸ್ಥಿತಿ ಇದೆ!!
ಇಂತಹ ಶುಭ ಸಂದರ್ಭದಲ್ಲಿ ಒಂದಿಷ್ಟು ತಮಾಷೆಯ ಮಾತನಾಡೋಣ ಎಂಬ ವಿಚಾರ ಬಂದಿದ್ದರಿಂದ ಈ ಲೇಖನ. ಅಂದ ಹಾಗೆ ಇದು ತಮಾಷೆಯ ನನ್ನ ಮೊದಲ ಪ್ರಯತ್ನ. ನಗು ಬರದೇ ಇದ್ದರೆ ದಯವಿಟ್ಟು ಹೊಟ್ಟೆಗೆ ಹಾಕಿಕೊಳ್ಳಿ, ಆಕಸ್ಮಾತ್ ಹೊಟ್ಟೆ ಖಾಲಿ ಇದ್ದರೆ. ಏಕೆಂದರೆ ಕೇಂದ್ರ ಸರ್ಕಾರ ಪ್ರತಿ ಮನೆಗೂ ರಾಶಿ ರಾಶಿ ಅಕ್ಕಿ ಹರಿಸಿ ಎಲ್ಲರ ಹೊಟ್ಟೆ ತುಂಬಿಸಿದೆ ಎಂದು ನಾನಾದರೂ ಅಂದುಕೊಂಡಿದ್ದೇನೆ.
ಮೊದಲ ತಮಾಷೆ, ನಮ್ಮ ಸರ್ಕಾರ ಕೊರೊನಾ ಸೋಂಕಿತರು ಕಂಡು ಬಂದ ಸ್ಥಳದ ಸುತ್ತ ಕಂಟೈನ್ಮೆಂಟ್ ವಲಯ ಸ್ಥಾಪಿಸುತ್ತಿದೆ. ದಾವಣಗೆರೆ ನಗರದಲ್ಲಿ ಕೊರೊನಾ ಸೋಂಕು ಶತಕ ದಾಟಿ, ಕಂಟೈನ್ಮೆಂಟ್ ಸ್ಥಳಗಳ ಸಂಖ್ಯೆ ದಶಕಕ್ಕೆ ಮುಟ್ಟಿದೆ. ಒಂದು ಕಡೆ ಜನರನ್ನು ಓಡಾಡಲು ಬಿಟ್ಟು, ಮತ್ತೊಂದೆಡೆ ದಿನಕ್ಕೊಂದು ಪ್ರದೇಶವನ್ನು ಸೀಲ್ಡೌನ್ ಮಾಡುವುದು ಭರ್ಜರಿ ತಮಾಷೆಯಾಗಿದೆಯಲ್ಲವೇ?
ಏನ್ರಿ ತಮಾಷೆಗೆ ನಗು ಬರಲಿಲ್ಲವೇ. ಇನ್ನೊಂದು ಪ್ರಯತ್ನ ಮಾಡುವೆ…ವಿದೇಶಗಳಲ್ಲಿ ಕೊರೊನಾ ಪ್ರಕರಣ ಹರಡಿದ್ದು ನೋಡಿದಾಗ ಅರ್ಥವಾಗುವುದೇನೆಂದರೆ ಇದನ್ನು ತಡೆಯುವುದು ಬಹಳ ಕಷ್ಟ. ದೇಶದಲ್ಲಿ ಲಾಕ್ ಓಪನ್ ಆದ ಮೇಲೆ ನೂರಾರು ನಗರಗಳಲ್ಲಿರುವ ಕೊರೊನಾ, ಅಲ್ಲಿನ ಹತ್ತಾರು ಬಡಾವಣೆಗಳಿಗೆ ತಲುಪುವುದು ಕಷ್ಟವಾಗದು. ಆಗ, ಒಂದೊಂದೇ ಬಡಾವಣೆ ಸೀಲ್ಡೌನ್ ಮಾಡುತ್ತಾ ಹೋದರೆ ಇಡೀ ನಗರ ಪ್ರದೇಶಗಳೇ ಸೀಲ್ಡೌನ್ ಆಗುತ್ತವೆ! ಎಲ್ಲರೂ ಸೀಲ್ ಆಗಿ ಕುಳಿತರೆ ದೇಶ ನಡೆಸುವವರು ಯಾರು?
ಯಾಕೆ ನಗು ಬರಲಿಲ್ಲವೇ? ಸರಿ ಬಿಡಿ, ಇನ್ನೊಂದು ಹೇಳುತ್ತೇನೆ. ಇಡೀ ರಾಜ್ಯದಲ್ಲಿ ಜನರು ತಿರುಗಾಡಬಹುದು ಎಂದು ಹೇಳಲಾಗಿದೆ. ಕೊರೊನಾ ಸೋಂಕಿತರಲ್ಲಿ ಬಹುತೇಕರು ಲಕ್ಷಣಗಳಿಲ್ಲದವರು ಎಂದು ಅಂಕಿ, ಅಂಶಗಳು ಹೇಳುತ್ತಿವೆ. ಅಂದರೆ, ಲಕ್ಷಣವಿಲ್ಲದ ಸೋಂಕಿತರು ಇಡೀ ರಾಜ್ಯ ಅಲೆಯಬಹುದು. ಆದರೆ, ಒಬ್ಬನೇ ಒಬ್ಬ ಸೋಂಕಿತ ಕಂಡು ಬಂದ ಕಾರಣಕ್ಕೆ ಕಂಟೈನ್ಮೆಂಟ್ ವಲಯದ ಜನರು ಬಂಧಿಯಾಗಿರಬೇಕು.
ಏನ್ರಿ ಇದೂ ನಗು ತರಿಸಲಿಲ್ಲವೇ? ಸರಿ ಇನ್ನೊಂದು ತಮಾಷೆ ಮಾತಿದೆ. ಒಂದೆಡೆ ನಮ್ಮ ರಾಜ್ಯದ ಮುಖ್ಯಮಂತ್ರಿ ಪರ ರಾಜ್ಯಗಳ ಜನರು ಬರಬಾರದು ಎಂದು ಅಂತರ್ ರಾಜ್ಯ ಬಸ್ ಬಂದ್ ಮಾಡಿದ್ದಾರೆ. ಇನ್ನೊಂದೆಡೆ ಕೇಂದ್ರ ಸರ್ಕಾರ ಶ್ರಮಿಕರಿಗಾಗಿ ವಿಶೇಷ ರೈಲು ಬಿಡುತ್ತದೆ. ಕೇಂದ್ರದ ನಿಯಮಗಳ ಪ್ರಕಾರ ಯಾವ ರಾಜ್ಯಕ್ಕೆ ರೈಲು ಹೋಗುತ್ತದೋ ಆ ರಾಜ್ಯದ ಅನುಮತಿಯ ಅಗತ್ಯವೇ ಇಲ್ಲ! ಅಂದರೆ ಮುಖ್ಯಮಂತ್ರಿ ಬಸ್ ತಡೆಯಬಹುದು, ರೈಲು ಮಾತ್ರ ತಡೆಯಲಾಗದು!! ಈಗಲೂ ನಗು ಬರಲಿಲ್ಲವೇ? ಕಷ್ಟ ಕಣ್ರಿ.
ಓಕೆ. ಮುಂದಿನದು ಹೇಳುತ್ತೇನೆ. ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ರಾಜ್ಯದಲ್ಲಿ ಜನರು ಮುಕ್ತವಾಗಿ ಸಂಚರಿಸಬಹುದು. ಅಂದರೆ, ಪಕ್ಕದ ರಾಜ್ಯದವರು ನಡೆದುಕೊಂಡು ನಮ್ಮ ರಾಜ್ಯದ ಗಡಿಯನ್ನು ದಾಟಿದರೆ ಎಲ್ಲಿಗೆ ಬೇಕಾದರೂ ತಲುಪಬಹುದು. ನೂರಾರು ಕಿ.ಮೀ. ನಡೆದೇ ಸಾಗುವ ನಮ್ಮ ಶ್ರಮಿಕ ಸಹೋದರರಿಗೆ ಗಡಿ ದಾಟುವುದು ಕಷ್ಟವೇ?
ಅಯ್ಯೋ ನಿಮಗೆ ಇನ್ನೂ ನಗು ಬರಲಿಲ್ಲವೇ? ಇದು ಕೊನೆ ಪ್ರಯತ್ನ ಸ್ವಾಮಿ. ಕೇಂದ್ರ ಸರ್ಕಾರ ಆರ್ಥಿಕತೆಗೆ ಬರೋಬ್ಬರಿ 20 ಲಕ್ಷ ಕೋಟಿ ರೂ. ಕೊಡುಗೆ ಕೊಟ್ಟಿದೆ. ಇಷ್ಟು ಧಾರಾಳಿಗಳು ಡೀಸೆಲ್ ದರ ಏಕೆ ಏರಿಸಬೇಕಿತ್ತು? ಕಚ್ಚಾ ತೈಲದ ಬೆಲೆ ದಾಖಲೆ ಹಂತಕ್ಕೆ ಕುಸಿದಿದೆ ಎಂದರೆ ವಿಶ್ವದೆಲ್ಲೆಡೆ ಆರ್ಥಿಕತೆ ದಬಾಕಿಕೊಂಡಿದೆ ಎಂದೇ ಅರ್ಥ. ಇಂತಹ ಸಂದರ್ಭದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೇಂದ್ರ ದಾಖಲೆ ಮಟ್ಟದ 13 ರೂ.ಗಳವರೆಗಿನ ತೆರಿಗೆ ಹೇರದೇ ಹೋಗಿದ್ದರೆ, ಅದು ಆರ್ಥಿಕತೆಗೆ ನೆರವಾಗುತ್ತಿತ್ತು. 20 ಲಕ್ಷ ಕೋಟಿ ರೂ. ಕೊಡಲಿಕ್ಕೆ ಸಿದ್ಧವಾಗಿದ್ದವರು, ಡೀಸೆಲ್ – ಪೆಟ್ರೋಲ್ ಮೇಲಿನ ತೆರಿಗೆಗೆ ಕೈ ಹಾಕಿದ್ದು ಏಕೆ? ಇದು ತಮಾಷೆಯಲ್ಲವೇ…?
ಅಯ್ಯೋ ಸ್ವಾಮಿ ಇನ್ನೂ ನಗು ಬರಲಿಲ್ಲವೇ. ಇನ್ನು ನನ್ನಿಂದಾಗದು. ತಮಾಷೆ ಮಾಡಲು ಹೋಗಿ ನಾನೇ ತಮಾಷೆಗೆ ಗುರಿಯಾದಂತಾಯಿತು. ನಿಮ್ಮ ಅಮೂಲ್ಯ ಸಮಯ ಪೋಲು ಮಾಡಿದ್ದಕ್ಕೆ ಕ್ಷಮೆ ಇರಲಿ. ಮುಂದಿನ ಬಾರಿ ತಮಾಷೆಗೆ ಸರಿಯಾಗಿ ಸಿದ್ಧತೆ ಮಾಡಿಕೊಂಡೇ ಬರುತ್ತೇನೆ.
(ಅಂದ ಹಾಗೆ ಕೊನೆ ಮಾತೂ ತಮಾಷೆಗೆ ಹೇಳಿದ್ದು!)
ಎಸ್.ಎ. ಶ್ರೀನಿವಾಸ್
[email protected]