ಮಲೇಬೆನ್ನೂರು, ಮೇ 19- ಪಟ್ಟಣದಲ್ಲಿ ಲಾಕ್ಡೌನ್ ಬಹುತೇಕ ಸಡಿಲಿಕೆ ಆಗಿದ್ದು, ವ್ಯಾಪಾರ-ವಹಿವಾಟುಗಳು ನಿಧಾನ ವಾಗಿ ಸಹಜ ಸ್ಥಿತಿಯತ್ತ ಬರಲಾರಂಭಿಸಿವೆ.
ಜಿಲ್ಲೆಯಲ್ಲಿ ಲಾಕ್ಡೌನ್ ನಿಬಂಧನೆಗಳನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸಿದ ಕೀರ್ತಿಗೆ ಪಾತ್ರರಾಗಿರುವ ಇಲ್ಲಿನ ಪುರಸಭೆಯವರು ಇದೀಗ ಲಾಕ್ಡೌನ್ ಸಡಿಲಿಕೆ ಮಾಡಿದ್ದರೂ ಪಟ್ಟಣಕ್ಕೆ ಬಂದು-ಹೋಗುವವರ ಬಗ್ಗೆ ನಿಗಾ ವಹಿಸಿದ್ದಾರೆ.
ಪಟ್ಟಣಕ್ಕೆ ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಿಂದ ಯಾರೇ ಬಂದರೂ ಅವರ ಆರೋಗ್ಯ ತಪಾಸಣೆ ಮತ್ತು ಕ್ವಾರಂಟೈನ್ಗೆ ಒತ್ತು ನೀಡಿರುವ ಪುರಸಭೆ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಕೇಂದ್ರ ಹಾಗೂ ಆಶಾ ಕಾರ್ಯಕರ್ತೆಯರು ಕೊರೊನಾ ಕಾಲಿಡದಂತೆ ಎಚ್ಚರ ವಹಿಸಿದ್ದಾರೆ.
ಇದುವರೆಗೆ ಓಪನ್ ಆಗದ ಕಟಿಂಗ್ ಷಾಪ್, ಬ್ಯೂಟಿ ಪಾರ್ಲರ್, ಬೀದಿ ಬದಿ ವ್ಯಾಪಾರಿಗಳು, ಹೋಟೆಲ್ ಮಾಲೀಕರ ಜೊತೆ ಮಂಗಳವಾರ ಸಭೆ ನಡೆಸಿದ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ಅವರು, ಕೆಲವು ಷರತ್ತುಗಳೊಂದಿಗೆ ಬುಧವಾರದಿಂದ ಓಪನ್ ಮಾಡಲು ಅನುಮತಿ ನೀಡಿದ್ದಾರೆ. ಕಟಿಂಗ್ ಷಾಪ್, ಬ್ಯೂಟಿ ಪಾರ್ಲರ್ಗಳಲ್ಲಿ ಒಬ್ಬರಾದ ನಂತರ ಒಬ್ಬರನ್ನು ಒಳಗೆ ಬಿಟ್ಟುಕೊಂಡು ಕೆಲಸ ಮಾಡಬೇಕು. ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ ಎಂದು ಹೇಳಿದರು.
ಪುರಸಭೆ ಕಾರ್ಯ ನಿರ್ವಹಣಾಧಿಕಾರಿ ಗಳು ಹೋಟೆಲ್ಗಳಲ್ಲಿ ತಿಂಡಿ, ಊಟವನ್ನು ಪಾರ್ಸೆಲ್ ಮಾತ್ರ ಕೊಡಬೇಕು, ಸಾಮಾಜಿಕ ಅಂತರ ಕಾಪಾಡಬೇಕೆಂಬ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಚೇತರಿಕೆ ಆಗಬೇಕು : ವ್ಯಾಪಾರ-ವಹಿವಾಟುಗಳು ಇನ್ನೂ ಚೇತರಿಕೆ ಆಗಬೇಕಿದೆ. ಹಳ್ಳಿ ಜನರು ಪಟ್ಟಣಕ್ಕೆ ಬರಲು ಇನ್ನೂ ಭಯ ಪಡುತ್ತಿದ್ದಾರೆ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ ಆಗುತ್ತಿಲ್ಲ ಎಂದು ಹಣ್ಣಿನ ವ್ಯಾಪಾರಿ ರಾಜು ಮತ್ತು ಬಟ್ಟೆ ಅಂಗಡಿ ವ್ಯಾಪಾರಿ ನಿಟ್ಟೂರಿನ ಕಲ್ಲೇಶ್ ತಿಳಿಸಿದರು.
ಅಕ್ಕಿಗೆ ಬೇಡಿಕೆ ಇಲ್ಲ : ಪಟ್ಟಣದಲ್ಲಿ ಪ್ರಮುಖ ವ್ಯಾಪಾರ ಕೇಂದ್ರಗಳಾದ ರೈಸ್ ಮಿಲ್ಗಳಲ್ಲಿ ಅಕ್ಕಿಗೆ ಬೇಡಿಕೆ ಇಲ್ಲದಿರುವುದು ಭತ್ತದ ದರ ಕುಸಿಯಲು ಕಾರಣವಾಗಿದೆ. ಜೊತೆಗೆ ವ್ಯಾಪಾರ-ವಹಿವಾಟು ಇಲ್ಲದಂತಾ ಗಿದೆ ಎಂದು ರೈಸ್ ಮಿಲ್ ಮಾಲೀಕರಾದ ಬಿ. ಚಿದಾನಂದಪ್ಪ, ಬಿ.ಎಂ ವಾಗೀಶ್ಸ್ವಾಮಿ, ಯಕ್ಕನಹಳ್ಳಿ ಬಸವರಾಜಪ್ಪ ಅವರು ಆತಂಕ ವ್ಯಕ್ತಪಡಿಸಿದರು. ಮದುವೆ ಸೇರಿದಂತೆ, ಇನ್ನಿತರೆ ಸಭೆ-ಸಮಾರಂಭಗಳು ಇಲ್ಲದಿರುವುದು ಮತ್ತು ಹೋಟೆಲ್ಗಳು ಬಂದ್ ಆಗಿದ್ದರಿಂದ ಅಕ್ಕಿಗೆ ಬೇಡಿಕೆ ಇಲ್ಲದಂತಾಗಿದೆ. ಅಲ್ಲದೆ ಸರ್ಕಾರ ಜನರಿಗೆ ನ್ಯಾಯಬೆಲೆ ಅಂಗಡಿ ಮೂಲಕ ಸಾಕಷ್ಟು ಅಕ್ಕಿ ನೀಡಿದೆ. ಹಾಗಾಗಿ ಅಕ್ಕಿ ಖರೀದಿ ಮಾಡುವವರ ಸಂಖ್ಯೆ ಕಳೆದೆರಡು ತಿಂಗಳಿಂದ ಬಹಳ ಕಡಿಮೆ ಇತ್ತು. ಈಗ ಲಾಕ್ಡೌನ್ ಸಡಿಲಿಕೆ ಆಗಿದ್ದರೂ ಮದುವೆ, ಸಭೆ, ಸಮಾರಂಭಗಳಿಗೆ ನಿರ್ಬಂಧ ಇರುವುದರಿಂದ ದೊಡ್ಡ ಪ್ರಮಾಣದಲ್ಲಿ ಅಕ್ಕಿ ಸೇಲ್ ಆಗುವುದು ಕಷ್ಟ ಎಂದು ಅವರು ಹೇಳಿದರು.
ಖರೀದಿ ಸರಳವಾಗಬೇಕು : ಸರ್ಕಾರ ರೈತರ ಖರೀದಿ ಕೇಂದ್ರ ತೆರೆದರೆ ಸಾಲದು, ರೈತರಿಗೆ ಅನುಕೂಲವಾಗುವಂತೆ ನಿಯಮಗಳನ್ನು ರೂಪಿಸಿದರೆ ಮಾತ್ರ ರೈತರು ಖರೀದಿಗಳತ್ತ ಬರುತ್ತಾರೆ. ಇಲ್ಲದಿದ್ದರೆ ಸಿಕ್ಕಷ್ಟು ಬೆಲೆಗೆ ವ್ಯಾಪಾರಿಗಳಿಗೆ ಭತ್ತವನ್ನು ವ್ಯಾಪಾರ ಮಾಡುತ್ತಾರೆಂದು ಎಪಿಎಂಸಿ ನಿರ್ದೇಶಕ ಜಿ. ಮಂಜುನಾಥ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರ ಭತ್ತಕ್ಕೆ ನೀಡಿರುವ ಬೆಂಬಲ ಬೆಲೆ ಸರಿ ಇದೆ, ಆದರೆ ಖರೀದಿ ಕೇಂದ್ರಗಳು ರೈತರಿಗೆ ಹತ್ತಿರವಾಗದಿರುವುದು ಮತ್ತು ಸರಿಯಾದ ಮಾಹಿತಿ ಇಲ್ಲದಿರುವುದು ಬೇಸರದ ಸಂಗತಿ.