ದೇವರ ಸಾಕ್ಷಾತ್ಕಾರಕ್ಕಾಗಿಯೇ ಪತಂಜಲಿ ಮಹರ್ಷಿ ಅಷ್ಟಾಂಗ ಯೋಗದ ವಿಷಯವನ್ನು ಪ್ರತಿಪಾದಿಸಿದ್ದಾರೆ. ನಿಜಕ್ಕೂ ಅದೊಂದು ಶ್ಲಾಘನೀಯ ಕಾರ್ಯ : ಮಾನವಕುಲ ಬದುಕುಳಿಯುವ ಮಾರ್ಗ. ಆದರೆ ಹನ್ನೆರಡನೇ ಶತಮಾನದ ಬಸವಾದಿ ಶರಣರು ದೇವರ ಸಾಕ್ಷಾತ್ಕಾರಕ್ಕಿಂತ ಸ್ವಸ್ವರೂಪದ ಸಾಕ್ಷಾತ್ಕಾರಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟಿದ್ದಾರೆ. ಇಷ್ಟಲಿಂಗ ಜನಕ ಬಸವೇಶ್ವರರ ಮುಂದಾಳತ್ವದಲ್ಲಿ ಇಷ್ಟಲಿಂಗವನ್ನೇ ಪ್ರಧಾನವಾಗಿರಿಸಿಕೊಂಡು, ಆಂಗೈಯಲ್ಲಿರಿಸಿಕೊಂಡೇ ಅದನ್ನು ದೃಷ್ಟಿಸುವ ಮೂಲಕ ಸ್ವಸ್ವರೂಪ ಸಾಕ್ಷಾತ್ಕಾರಕ್ಕಾಗಿ ಶರಣರು ಪ್ರಯತ್ನಿಸಿ ಸಫಲರಾಗಿದ್ದಾರೆ. ಇಂತಹ ವೈಶಿಷ್ಟಪೂರ್ಣ ಇಷ್ಟಲಿಂಗದ ಪರಿಕಲ್ಪನೆ ಬಂದದ್ದೇ ಬಸವೇಶ್ವರರಿಂದ, ಹೀಗಾಗಿ ಈ ದೃಷ್ಟಿಯೋಗಕ್ಕೆ ಬಸವ ಯೋಗವೆಂದೇ ಎಲ್ಲಾ ಶರಣರು ಪ್ರತಿಪಾದಿಸಿದ್ದಾರೆ. ಇಷ್ಟಲಿಂಗವನ್ನು ಸ್ವಾನುಭಾವದಿಂದ ದೃಷ್ಟಿಸುವ ಯೋಗವನ್ನೇ ಇಷ್ಟಲಿಂಗಯೋಗ, ಚಿಲ್ಲಿಂಗಯೋಗ, ದೃಷ್ಟಿಯೋಗ, ತ್ರಾಟಕಯೋಗ, ಅನಿಮಿಷಯೋಗ ಹಾಗೂ ಲಿಂಗಾಂಗಯೋಗವೆಂದು ಶರಣರು ಪ್ರತಿಪಾದಿಸಿದ್ದಾರೆ. ಈ ಯೋಗದಲ್ಲಿ ವ್ಯಕ್ತಿಯೊಂದಿಗೆ ಸಮಷ್ಟಿಯ ಅಭಿವೃದ್ಧಿಗೆ ಹೆಚ್ಚಿನ ಮಹತ್ವವನ್ನು ಕೊಡಲಾಗಿದೆ. ಕೇವಲ ತಾನೊಬ್ಬನೇ ಅಥವಾ ಕೆಲವೇ ವರ್ಗದ ಜನರು ಮಾತ್ರ ಯೋಗವನ್ನು ಸಾಧಿಸುವುದಕ್ಕಿಂತ ಸಮಷ್ಟಿಯ ಅಭಿವೃದ್ಧಿಯೇ ಪ್ರಧಾನವಾಗಿದೆ ಶರಣರ ದೃಷ್ಟಿಯಲ್ಲಿ ಇದೊಂದು ಸಹಜವಾದ ಸಾಧನೆ, ಸಾಧ್ಯ.
ಶರಣರ ಯೋಗದಲ್ಲಿ ಇಷ್ಟಲಿಂಗದಲ್ಲಿಯೇ ದೃಷ್ಟಿನಿಲ್ಲಿಸುವ, ಆ ಮೂಲಕ ಮನ ಭಾವಗಳನ್ನು ಸಂಯುಕ್ತಗೊಳಿಸಿ ಪ್ರಾಣಶಕ್ತಿಯನ್ನು ನಿಯಂತ್ರಣಕ್ಕೆ ಒಳಪಡಿಸುವ ವ್ಯವಸ್ಥೆ ದೃಷ್ಟಿಯೋಗದಲ್ಲಿದೆ. ಇಷ್ಟಲಿಂಗದಲ್ಲಿ ದೃಷ್ಟಿ ದೃಢವಾದರೆ ದಿವ್ಯಜ್ಞಾನವು ಉದಯವಾಗುತ್ತದೆ ಎಂದು ಶರಣರು ತಮ್ಮ ಅನೇಕ ವಚನಗಳ ಮೂಲಕ ಪ್ರತಿಪಾದಿಸಿದ್ದಾರೆ. ಅಂತೆಯೇ ಚಾಮರಸಕವಿ “ಆಲಿನಿಂದೊಡೆ ಸುಳಿದು ಸೂಸುವ ಗಾಳಿ ನಿಲುವುದು, ಗಾಳಿ ನಿಲೆ ಮನ ಮೇಲೆ ನಿಲುವುದು, ಮನವು ನಿಂದೊಡೆ ಬಿಂದು ನಿಂದಿಹುದು”. ಎಂದಿದ್ದಾರೆ. ಈ ಯೋಗದಲ್ಲಿ ಮನ-ಭಾವಗಳಲ್ಲಿ ಯಾವುದೇ ಹೊರಪ್ರಪಂಚದ ನೆನಪುಗಳು ಬಾರದಿರುವ ಸ್ವಸ್ವರೂಪದ ಪ್ರಾಣ ಶಕ್ತಿಯ ಪರಿಕಲ್ಪನೆ ತುಂಬಿರುವುದು ದೃಷ್ಟಿಯೋಗದಲ್ಲಿ ಮಾತ್ರ. ಈ ಹಿನ್ನಲೆಯಲ್ಲಿ ಎಲ್ಲಾ ಶರಣರು ಲಿಂಗಾಂಗಯೋಗವೆಂದು ಪ್ರತಿಪಾದಿಸಿದ್ದಾರೆ. ಈ ಸಂಬಂಧ ಕೆಲವು ವಚನಗಳಲ್ಲಿರುವ ಯೋಗದ ಮರ್ಮವನ್ನು ತಿಳಿಯಬಹುದಾಗಿದೆ. ಇದಕ್ಕೆ ಸಂಬಂಧಿಸಿದ ಕೆಲ ಆಯ್ದ ವಚನಗಳ ಸಂಗ್ರಹವನ್ನು ವೀಕ್ಷಿಸೋಣ.
ಅಲ್ಲಮ ಪ್ರಭುದೇವರ ದೃಷ್ಟಿಯೋಗದ ವಚನ :
ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು, ಕಣ್ಣೇ ನೇತ್ರ
ನೇತ್ರವೇ ಸೂತ್ರ, ಸೂತ್ರವೇ ಲಿಂಗ, ಲಿಂಗವೇ ಗುಹೈ,
ಗುಹೈಕ್ಕೆ ಗುಹ್ಯೆ. ಗೋಪ್ಯಕ್ಕೆ ಗೋಪ್ಯ, ರಹಸ್ಯಕ್ಕೆ ರಹಸ್ಯ,
ಈ ನೇತ್ರ ಮಹಿಮೆಯ ಗುಹೇಶ್ವರ ಬಲ್ಲನಲ್ಲದೆ
ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯ.
ಇದೊಂದು ಬೆಡಗಿನ ವಚನ. ಇಂದ್ರಿಯಗಳಲ್ಲಿ ಅತಿ ಮುಖ್ಯವಾದ ಅಂಗ ಕಣ್ಣು, ಇದು ಭೌತಿಕ ವಸ್ತುಗಳ ನೋಟದಲ್ಲಿ ತಲ್ಲೀನ. ಇಂತಹ ಕಣ್ಣಿನಲ್ಲಿ ಒಳಗೊಂದು ಕಣ್ಣು ಇರುವುದನ್ನು ಆಧ್ಯಾತ್ಮ ಸಿದ್ಧಪುರುಷ ಶ್ರೀ ಅಲ್ಲಮ ಪ್ರಭುದೇವರು ಕಂಡುಕೊಂಡಿದ್ದಾರೆ. ಪ್ರಸ್ತಾಪಿಸಿದ್ದಾರೆ. ಇದನ್ನೇ ಒಳಗಣ್ಣು ಎಂದು ಕರೆದಿದ್ದಾರೆ. ಅದರ ಮೂಲಕ ಭೌತಿಕವಲ್ಲದ ಪರವಸ್ತುವನ್ನು ಕಂಡು, ಆ ಪರವಸ್ತುವಿನಲ್ಲಿ ದೃಷ್ಟಿಯನ್ನು ನಿಲ್ಲಿಸುವುದು, ಸಮರಸಗೊಳಿಸುವುದು. ಈ ಸಮರಸಗೊಳ್ಳುವಿಕೆಯಿಂದ ಕುಂಡಲಿನೀಶಕ್ತಿ ಜಾಗೃತಗೊಳ್ಳುವುದು (ಆಧಾರ ಚಕ್ರದಲ್ಲಿನ). ಇದು ನಿರಂತರ ಸಮರಸಗೊಳ್ಳುವಿಕೆ ಪ್ರಭಲವಾದಾಗ ಒಂದು ರಹಸ್ಯಗೋಚರಿಸುವುದು. ಇದನ್ನೇ ಸಿದ್ಧಪುರುಷರು ಸತ್ಯದ ಸಾಕ್ಷಾತ್ಕಾರವೆಂದು ಕರೆಯುತ್ತಾರೆ. ಇದನ್ನು ಸಾಧಿಸುವಲ್ಲಿ ನೇತ್ರ ಪ್ರಮುಖ ಪಾತ್ರವನ್ನು ವಹಿಸುವುದು. ಅಂತೆಯೇ ಪ್ರಭುದೇವರು ನೇತ್ರವೇ ಸೂತ್ರ, ಸೂತ್ರವೇ ಲಿಂಗ, ಆ ಲಿಂಗವೇ (ಪರವಸ್ತು) ಕುಂಡಲಿನೀಶಕ್ತಿಯಲ್ಲಿ ಅಡಕವಾಗಿರುವುದೆಂದು ಪ್ರತಿಪಾದಿಸಿದ್ದಾರೆ. ಇದೊಂದು ಸಾಧನೆಯಿಂದ ಗೌಪ್ಯವಾಗಿ ಗೋಚರಿಸುವ ಸ್ಥಿತಿ, ರಹಸ್ಯವೂ ಕೂಡ ಆಗಿದೆ ಎಂದು ಪ್ರತಿಪಾದಿಸಿದ್ದಾರೆ. ಇದರ ಮರ್ಮವನ್ನು ಯೋಗಿಯೇ ಬಲ್ಲನಲ್ಲದೆ ಸಾಮಾನ್ಯರಿಂದ ಅರಿಯುವುದು ಅಸಾಧ್ಯವೆಂದು ಅಲ್ಲಮಪ್ರಭುದೇವರು ಪ್ರತಿಪಾದಿಸಿದ್ದಾರೆ. ಇದನ್ನೇ ಚಾಮರಸ ಕವಿಯು ಪ್ರಭುಲಿಂಗಲೀಲೆಯ ಷಟ್ಪದಿ ಕಾವ್ಯದಲ್ಲಿ ಪ್ರಸ್ತಾಪಿಸಿರುವುದನ್ನು ನಾವೀಗ ನೋಡಬಹುದು ಅದು ಹೀಗಿದೆ.
ಕವಿ ಚಾಮರಸನ ದೃಷ್ಟಿಯಲ್ಲಿ ಯೋಗ :
ಆಲಿ ನಿಂದೊಡೆ ಸುಳಿದು ಸೂಸುವ
ಗಾಳಿ ನಿಲುವುದು ಗಾಳಿ ನಿಲೆ ಮನ
ಮೇಲೆ ನಿಲುವುದು ಮನವು ನಿಂದೊಡೆ
ಬಿಂದು ನಿಂದಿಹುದು|
ಲೀಲೆಯಿಂದಾ ಬಿಂದು ನಿಂದೊಡೆ
ಕಾಲಕರ್ಮವ ಗೆದ್ದು ಮಾಯೆಯ
ಹೇಳ ಹೆಸರಿಲ್ಲೆನಿಸಬಹುದೈ ಬಸವ ಕೇಳೆಂದ||
ಕವಿ ಚಾಮರಸನ ದೃಷ್ಟಿಯಲ್ಲಿ ದೃಷ್ಟಿಯೋಗ ಹೀಗಿದೆ :ದೃಷ್ಟಿ ದೈವೀ ಸಂಕೇತ ವಸ್ತುವಿನಲ್ಲಿ (ಇಷ್ಟಲಿಂಗ) ನಿಲ್ಲಲು ಉಸಿರಾಟದ ಗತಿ (ವೇಗದ) ನಿಧಾನವಾಗುವುದು. ಈ ನಿಧಾನದ ಗತಿ ತೀವ್ರಗೊಂಡಾಗ ಮನದ ಸಂಕಲ್ಪ ವಿಕಲ್ಪಗಳು ನಾಶವಾಗುವುದು (ಇಲ್ಲದಂತಾಗುವುದು). ಆಗ ಮನದ ಚಾಂಚಲ್ಯ ನಾಶವಾಗಿ ಏಕಾಗ್ರತೆ ನೆಲೆಗೊಳ್ಳುವುದು. ಈ ಏಕಾಗ್ರತೆಯಿಂದ ಬ್ರಹ್ಮಚರ್ಯಪಾಲನೆ ಗಟ್ಟಿಗೊಳ್ಳುವುದು. ಆಗ ಜನನ-ಮರಣಗಳ ಬಾಧೆ ಮನದಲ್ಲಿ ಉಳಿದಿರಲು ಸಾಧ್ಯವಿಲ್ಲ. ಈ ಕ್ರಮವೇ ಗಟ್ಟಿಗೊಂಡಾಗ ಕಾಲಕರ್ಮವಗೆದ್ದು ಮಾಯೆಯ, ಅತಿಯಾದ ವ್ಯಾಮೋಹ ಅಳಿಸಬಹುದಾಗಿದೆ ಎಂದು ಚಾಮರಸ ಕವಿಯು ಬಣ್ಣಿಸಿದ್ದಾನೆ. ಈ ಭಾವದ ಮುಂದುವರಿದ ಭಾಗ ಅಲ್ಲಮ ಪ್ರಭುದೇವರ ಮತ್ತೊಂದು ವಚನದಲ್ಲಿ ಕಾಣಬಹುದಾಗಿದೆ. ಅದು ಹೀಗಿದೆ.
ಲಿಂಗಾಂಗ ಯೋಗದ ಶ್ರೇಷ್ಠತೆಗೆ ಪ್ರಭುದೇವರ ವಚನ :
ಅಷ್ಟಾಂಗ ಯೋಗದಲ್ಲಿ ಯಮ, ನಿಯಮ, ಆಸನ,
ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ
ಸಮಾಧಿಯೆಂಬ ಎಂಟು ಯೋಗವುಂಟು ಅಲ್ಲಿ
ಇಲ್ಲಿದುದು ಎರಡೇ ಯೋಗ
ಅಳಿದು ಕೂಡುವುದೊಂದು ಯೋಗ.
ಅಳಿಯದೆ ಕೂಡುವುದೊಂದು ಯೋಗ
ಈ ಎರಡು ಯೋಗದೊಳಗೆ
ಅಳಿಯದೆ ಕೂಡುವ ಯೋಗವನರಿದೆ ಕಾಣಾ ಗುಹೇಶ್ವರ.
ಅಷ್ಟಾಂಗ ಯೋಗದಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ ಎಂಬಿವು ಅಳಿದು ಕೂಡುವ (ದಂಡಿಸುವ ಮೂಲಕ) ಯೋಗವಾದರೆ ಧ್ಯಾನ, ಧಾರಣ, ಸಮಾಧಿ ಅಳಿಯದೆ ಕೂಡುವ ಯೋಗವಾಗಿದೆ (ದಂಡಿಸದೆ) ಅಂದರೆ ದೇಹವನ್ನು ದಂಡಿಸಿ ಮಣಿಸುವ (ಇಂದ್ರಿಯಗಳನ್ನು) ಮಾರ್ಗವು ಅಳಿದು ಕೂಡುವ ಯೋಗವೆಂದೆನಿಸುವುದು. ಶರಣರು ದೇಹವನ್ನು ದಂಡಿಸದೆ, ಮಣಿಸದೆ ಪ್ರಸಾದ ಕಾಯವನ್ನಾಗಿ (ಪ್ರಸಾದ ತತ್ವದಿಂದ) ಪರಿವರ್ತಿಸುವ ಮೂಲಕ, ಪ್ರಸಾದ ತತ್ವವನ್ನು ಅನುಸರಿಸುವ ಮೂಲಕ ಯೋಗವನ್ನು ಸಾಧಿಸಿದವರು ಬಸವಾದಿ ಶಿವಶರಣರು. ಇದನ್ನೇ ಅಳಿದು, ಅಳಿಯದೆ ಕೂಡುವ ಯೋಗವೆಂದು ಕರೆಯುವರೆಂದೂ, ಶರಣ ಪರಂಪರೆಯಲ್ಲಿರುವು ದೆಂದೂ ಪ್ರಭುದೇವರು ಪ್ರತಿಪಾದಿಸಿದ್ದಾರೆ. ಇಂತಹ ಯೋಗವನ್ನು ಕುರಿತು ಶರಣ. ಉರಿಲಿಂಗ ಪೆದ್ದಿ ಹೇಗೆ ನುಡಿದಿರುವರೆಂಬುದನ್ನು ನಾವೀಗ ನೋಡಬಹುದು. ಅದು ಹೀಗಿದೆ.
ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರು ದೈನಂದಿನ ಬದುಕಿನಲ್ಲಿ ನೈತಿಕ ಮೌಲ್ಯಗಳನ್ನು (ಸಾಮಾಜಿಕ ಹಾಗೂ ಧಾರ್ಮಿಕ) ಅಳವಡಿಸಿಕೊಂಡಿದ್ದರು
ಹೀಗೆ ಇಂದಿನ ಪ್ರಜೆಗಳಾದ ನಾವು ಸಪ್ತಸೂತ್ರಗಳೆಂಬ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡರೆ, ಯೋಗವನ್ನಾಗಿಸಿಕೊಂಡರೆ ಸ್ವಚ್ಛಭಾರತ ಆಗುವುದರಲ್ಲಿ ಸಂದೇಹವಿಲ್ಲ.
ಶರಣರದೃಷ್ಟಿಯಲ್ಲಿ ಯೋಗದ ಮರ್ಮದ ತುಡಿತ ನಮ್ಮಲ್ಲಿ ಕರಗತವಾಗಬೇಕು. ಆಗ ಸರ್ವಜನಾಂಗದವರ ಹಾಗೂ ರಾಷ್ಟ್ರದ ಬಾಳು ಹಸನಾಗಲು ಸಾಧ್ಯ.
ಶರಣ ಉರಿಲಿಂಗ ಪೆದ್ದಿ ದೃಷ್ಟಿಯಲ್ಲಿ ಯೋಗ :
ಯೋಗಾಭ್ಯಾಸ ಯೋಗಾಭ್ಯಾಸವೆಂಬಿರಿ,
ಯೋಗವು ಅಭ್ಯಾಸವೇ? ಅಭ್ಯಾಸ ಯೋಗವೇ?
ಯೋಗಾಭ್ಯಾಸವೆಂದೆಂಬನ್ನಕ್ಕರು, ಆನು ಯೋಗಿಯೇ?
ಶ್ರೀ ಗುರು ಕಾರುಣ್ಯದಿಂದ ಸರ್ವವೂ ಬ್ರಹ್ಮವೆಂದರಿವುದು.
ಶ್ರೀಗುರುವಿನ ಶ್ರೀಪಾದ ಜ್ಞಾನವೇ ಯೋಗಾಭ್ಯಾಸವಯ್ಯಾ
ಉರಿಲಿಂಗ ಪೆದ್ದಿ ಪ್ರಿಯ ವಿಶ್ವೇಶ್ವರ.
ಈ ವಚನದಲ್ಲಿ ಶರಣ ಉರಿಲಿಂಗಪೆದ್ದಿ ಯೋಗದ ಬಗೆಗೆ ಮಾರ್ಮಿಕ ನುಡಿಗಳನ್ನು ಪ್ರಚುರಪಡಿಸಿದ್ದಾರೆ. ದೈನಂದಿನ ಬದುಕಿನಲ್ಲಿ ಅಭ್ಯಾಸಕ್ಕಿಂತ ಸಹಜ ದಿನಚರಿಗೆ ಹೆಚ್ಚು ಪ್ರಾಮುಖ್ಯತೆ ಇರಬೇಕೆಂಬುದು ಶರಣ ಉರಿಲಿಂಗ ಪೆದ್ದಿಯ, ಅನೇಕ ಶರಣರ ಹೇಳಿಕೆಯಾಗಿದೆ. ಯೋಗದ ಬಲದಿಂದಲೇ (ದೇಹವನ್ನು ದಂಡಿಸುವ ಮೂಲಕ) ಪರವಸ್ತುವನ್ನು ಕಾಣುವುದಕ್ಕಿಂತ ಸಹಜ ಬದುಕಿನಲ್ಲೇ, ಸದ್ಗುರುವಿನ ಮೂಲಕ ಅರಿವನ್ನು ಜಾಗೃತಗೊಳಿಸಿಕೊಂಡು, ಸರ್ವವೂ ಪರಮಾತ್ಮ ಕಾರುಣ್ಯವೆಂದರಿತು ಅದರಲ್ಲಿ ಕೂಡುವುದೇ, ಸಮರಸವಾಗುವುದೇ (ಯೋಗ) ನಮ್ಮ ಗುರಿಯಾಗಿರಬೇಕು. ಅಂತಹ ಕೂಡುವಿಕೆಯ (ಯೋಗದ) ಜ್ಞಾನದ ಅಭ್ಯಾಸ ನಮ್ಮಲ್ಲಿ ಸತತವಾಗಿರಬೇಕೆಂಬುದು ಶರಣ ಉರಿಲಿಂಗಪೆದ್ದಿಯ ಅಭಿಪ್ರಾಯವಾಗಿದೆ. ಯೋಗವು ಕೇವಲ ಅಭ್ಯಾಸಕ್ಕಾಗಿ ಅಥವಾ ಅಭ್ಯಾಸ ಯೋಗಕ್ಕಾಗಿ ಮಾತ್ರ ಮೀಸಲಾಗಿರಬಾರದು, ಜೀವನವೇ ಒಂದು ಯೋಗವಾಗಬೇಕು. ಇದರಿಂದ ಜೀವನದಲ್ಲಿ ಸರ್ವರ ಸೇವೆಯೇ ಈಶ ಸೇವೆ ಎಂಬ ಬದುಕು ನಮ್ಮದಾಗಲು ಸಾಧ್ಯಯವೆಂಬುದು ಎಲ್ಲಾ ಶರಣರ, ಸಂತರ ಅಭಿಪ್ರಾಯವಾಗಿದೆ. ಇಲ್ಲಿ ವ್ಯಕ್ತಿಗಿಂತ ಸಮಷ್ಟಿಯೇ ಪ್ರಧಾನವಾಗಿರುವುದನ್ನು ಕಂಡುಕೊಳ್ಳಬಹುದು. ಇದರಿಂದ ಮಾತ್ರ ಕುಟುಂಬ ಸಮಾಜ ಹಾಗೂ ರಾಷ್ಟ್ರಗಳ ಸ್ವಾಸ್ಥ್ಯ ಸಮೃದ್ಧವಾಗಿರಲು ಸಾಧ್ಯವೆಂಬುದು ಹನ್ನೆರಡನೇ ಶತಮಾನದ ಶರಣರ ದೃಷ್ಟಿಕೋನವಾಗಿತ್ತು. ಯೋಗದ ಅಭ್ಯಾಸವೊಂದನ್ನೇ ನಂಬಿದವರು, ಅಭ್ಯಾಸವೊಂದರಲ್ಲೇ ತೊಡಗಿದವರು ಒಮ್ಮೊಮ್ಮೆ ಜಾರಿ ಬೀಳುವುದೂ ಉಂಟು. ಇದಕ್ಕೆ ಸಾಕ್ಷಿ ವಿಶ್ವಾಮಿತ್ರ ಮುನಿ, ಯೋಗದ ಬಗ್ಗೆ ಸಂತ ಶ್ರೀರಾಮಕೃಷ್ಣ ಪರಮಹಂಸರ ಜೀವನದಲ್ಲಿ ನಡೆದ ಒಂದು ಘಟನೆ ಹೀಗಿದೆ, ಓರ್ವ ಯೋಗಿ ಪರಮಹಂಸರಲ್ಲಿಗೆ ಬಂದು “ನಾನು ನೀರಿನ ಮೇಲೆ ನಡೆಯುವುದನ್ನು ಯೋಗದಿಂದ ಸಾಧಿಸಿದ್ದೇನೆ. ಅದಕ್ಕಾಗಿ ನಲವತ್ತು ವರ್ಷ ಬಳಸಿದ್ದೇನೆ ಎಂದಂನಂತೆ. ಅದಕ್ಕೆ ಪರಮಹಂಸರು “ಒಂದಾಣೆ ಕೊಟ್ಟರೆ ಈ ದಡದಿಂದ ಆ ದಡಕ್ಕೆ ಅಂಬಿಗನೇ ಕರೆದೊಯ್ಯುತ್ತಿದ್ದ, ಒಂದಾಣೆ ಉಳಿಸಲು ನಲವತ್ತು ವರ್ಷ ಕಳೆದದ್ದು ವ್ಯರ್ಥವಲ್ಲವೇ?” ಎಂದರಂತೆ. ಈ ಮಾತಿನ ಅರ್ಥವನ್ನು ನಾವೆಲ್ಲ ನೆನಪಿನಲ್ಲಿರಿಸಿ ಕೊಳ್ಳೋಣ.
ಕೊನೆಯದಾಗಿ ಯೋಗದ ಒಳ ಮರ್ಮದ ಒಂದು ನುಡಿಗಾಗಿ, ಬಸವೇಶ್ವರರ ಸಪ್ತಸೂತ್ರಗಳ ವಚನವೊಂದನ್ನು ನೋಡಬಹುದು. ಅದರಲ್ಲಿ ಯೋಗದ ನಿಜವಾ ಬೇರು ಯಾವುದೆಂಬುದನ್ನು ತಿಳಿಯಬಹುದಾಗಿದೆ. ಅದು ಹೀಗಿದೆ :
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲ ಸಂಗಮದೇವರ ನೊಲಿಸುವ ಪರಿ.
ಈ ವಚನದಲ್ಲಿ ಯೋಗದ ಮಾರ್ಮಿಕ ನುಡಿಮುತ್ತುಗಳಿವೆ, ಸರ್ವರೂ ಬದುಕುಳಿಯುವ ಮಾರ್ಗವೂ ಇಲ್ಲಿವೆ. ಯೋಗಾಭ್ಯಾಸಕ್ಕಿಂತ ಮೊದಲು ಎಲ್ಲಾ ರಾಜಕಾರಣಿಗಳು, ಸಾಮಾಜಿಕ ಸೇವಾಕಾರ್ಯಕರ್ತರು ಸರ್ವಜನಾಂಗದವರ ಮುಂದೆ ಪ್ರತಿಜ್ಞಾವಿಧಿಯಂತೆ ಈ ವಚನವನ್ನು ನುಡಿದು ಭಾಷೆಯನ್ನಿತ್ತರೆ ಅದುವೇ ಯೋಗವೆನಿಸುವುದು, ಅದುವೇ ಪರವಸ್ತುವನ್ನು ಕೂಡಲು, ಅನುಭವಿಸಲು ಸಾಧ್ಯವಾದಂತಾಗುವುದು. ಆಗ ರಾಷ್ಟ್ರ, ಸಮಾಜ ಸುಖೀ ಸಾಮ್ರಾಜ್ಯವಾಗಲು ಸಾಧ್ಯವಿದೆ.
ಈ ಮೇಲಿನ ವಚನದಲ್ಲಿ ಯೋಗದ ಮಾರ್ಮಿಕ ನುಡಿಗಳಿವೆ. ಪತಂಜಲಿ ಋಷಿಯ ಅಭಿಪ್ರಾಯ ಒಳಹೊರಗಿನ ಶುದ್ಧತೆಗಾಗಿಯೇ ಅಷ್ಟಾಂಗ ಯೋಗವನ್ನು ಪ್ರತಿಪಾದಿಸಿದ್ದಾರೆ. ಅಷ್ಟಾಂಗ ಯೋಗದಲ್ಲಿ ಯಮ. ನಿಲಯಮ, ಪ್ರತ್ಯಾಹಾರ, ಆಸನ ಪ್ರಾಣಾಯಾಮ, ಧಾರಣ, ಧ್ಯಾನ, ಸಮಾಧಿಗಳು ಕರಗತವಾಗಬೇಕಾದರೆ ಶ್ರೀ ಬಸವೇಶ್ವರರ ಸಪ್ತಸೂತ್ರಗಳನ್ನೊಳಗೊಂಡ ವಚನದಂತೆ ನಾವು ಅಳವಡಿಸಿಕೊಂಡು ಸಿದ್ಧಪುರುಷರಾಗಬೇಕು. ಕೇವಲ ವೇದಿಕೆಯ ನುಡಿಯಲ್ಲಿ (ಭಾಷಣದಲ್ಲಿ) ಸ್ಪಷ್ಟತೆಯಾಗಲಿ, ನಿರ್ಧಿಷ್ಟತೆಯಾಗಲಿ ಇದ್ದರೆ ಸಾಲದು. ನಡೆಯಲ್ಲಿ, ನಿತ್ಯಜೀವನದಲ್ಲಿ ಸಪ್ತಸೂತ್ರಗಳನ್ನು ಅಳವಡಿಸಿಕೊಂಡಿರಬೇಕು. ಇದರಿಂದ ಮಾತ್ರ ಅಂತರಂಗ ಬಹಿರಂಗ ಶುದ್ಧಿಯಾಗಿ ವ್ಯಕ್ತಿ ಹಾಗೂ ಸಮಷ್ಟಿಯ ಉದ್ದಾರ ಸಾಧ್ಯವಾಗವುದು. ಇದುವೇ ನಿಜವಾದ ಯೋಗಾಭ್ಯಾಸ. ಶ್ರೀ ಬಸವೇಶ್ವರರ ಸಪ್ತಸೂತ್ರಗಳು ನಮ್ಮ ಅಂತರಂಗದಲ್ಲಿ ಕೂಡಿದಾಗಲೇ ಯೋಗವೆನಿಸುವುದು. ಆಗ ಮಾತ್ರ ಭವ್ಯ ಭಾರತ, ಸ್ವಚ್ಛ ಭಾರತ, ಮೇರಾ ಭಾರತ್ ಮಹಾನ್ ಆಗಲು ಸಾಧ್ಯ.
ಹಂಸಯೋಗಿ ಶಿವಾನಂದ ಗುರೂಜಿ
ಬಸವ ತಪೋವನ
ಶಿರಮಗೊಂಡನಹಳ್ಳಿ.