ಕೊರೊನಾ ಕಾಟ, ಆಡಳಿತಗಾರರಿಂದ ಜನರಿಗೆ ಸಂಕಟ

ಕೊರೊನಾ ಕಾಟ, ಆಡಳಿತಗಾರರಿಂದ ಜನರಿಗೆ ಸಂಕಟ - Janathavaniದಾವಣಗೆರೆ,ಮೇ 16-ಜಿಲ್ಲೆಯಲ್ಲಿ ಆಡಳಿತಾರೂಢ ಬಿಜೆಪಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವಿನ ಸಮನ್ವಯತೆಯ ಕೊರತೆಯಿಂದಾಗಿ ದಾವಣಗೆರೆ ಜಿಲ್ಲೆಗೆ ಕಪ್ಪು ಚುಕ್ಕೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಗರದಲ್ಲಿ ಸೋಂಕು ರೋಗ ಕೊರೊನಾ ವೈರಸ್ ಪ್ರಕರಣಗಳು ದಿನ ದಿನಕ್ಕೂ ಹೆಚ್ಚುತ್ತಾ ಸಂಖ್ಯೆ 82 ತಲುಪುವಂತಾಗಿದೆ. ಇದರ ಗಂಭೀರತೆಯನ್ನು ಅರಿಯದ ಜಿಲ್ಲಾಡಳಿತ ಮತ್ತು ಸಂಸದರು, ಶಾಸಕರು ಜಟಾಪಟಿಯ ಹೇಳಿಕೆಗಳಲ್ಲೇ ತಲ್ಲೀನರಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಒಂದು ಕಾಲದಲ್ಲಿ ವಿದ್ಯಾಕಾಶಿ ಹಾಗೂ ವಾಣಿಜ್ಯ ನಗರಿ ಎಂದು ಹೆಸರಾಗಿದ್ದ ದಾವಣಗೆರೆ ಈಗ ಕೊರೊನಾ ನಗರ ಎಂದು ಕುಖ್ಯಾತಿ ಪಡೆದಿದೆ. ದಾವಣಗೆರೆಯವರಾದರೆ ನಮ್ಮ ಹಳ್ಳಿಗಳಿಗೆ ಕಾಲಿಡಬೇಡಿ ಎಂದು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದವರು ಬೇಲಿ ಹಾಕಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ದಾವಣಗೆರೆಯವರು ಎಂದರೆ ಬೇರೆ ಊರಿನವರು ಹೆದರಿ ಹಿಂದೆ ಸರಿಯುವ ಪರಿಸ್ಥಿತಿ ಇದೆ.
ಆದರೆ, ಇಂತಹ ಪರಿಸ್ಥಿತಿಯ ಅರಿವಿಲ್ಲದಂತಿರುವ ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಹಾಗೂ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರುಗಳು ವೇದಿಕೆ ಮೇಲೆಯೇ ಏಕವಚನದಲ್ಲಿ ಕಿತ್ತಾಡಿಕೊಂಡಿದ್ದಾರೆ. ಸಾಲದು ಎಂಬಂತೆ ಅವರ ಬೆಂಬಲಿಗರು ಪ್ರತಿನಿತ್ಯ ಪತ್ರಿಕೆಗಳಲ್ಲಿ ಹೇಳಿಕೆಗಳ ಮೂಲಕ ಜಗಳವಾಡುತ್ತಿದ್ದಾರೆ. ಇಷ್ಟು ಸಾಲದು ಎಂಬಂತೆ ಈಗ ಪಾಲಿಕೆಯ ಮಹಾಪೌರರ ಹಾಗೂ ಅಧಿಕಾರಿಗಳ ನಡುವಿನ ಜಟಾಪಟಿ ಆರಂಭವಾಗಿದೆ.
ಈ ಹಿಂದೆ ಮೇಯರ್ ಬಿ.ಜಿ. ಅಜಯ್ ಕುಮಾರ್ ಅವರು ಲಾಕ್‌ಡೌನ್ ಅವಧಿಗಾಗಿ ನೀಡಿದ್ದ ಪಾಸ್‌ಗಳನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ರದ್ದುಗೊಳಿಸಿದ್ದರು. ನಂತರ ಸ್ವತಃ ಮೇಯರ್ ಪಾಸ್‌ಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಬಂದಿದ್ದರು. ಆಡಳಿತ ಹಾಗೂ ಜನಪ್ರತಿನಿಧಿಗಳ ನಡುವೆ ಸಮನ್ವಯದ ಕೊರತೆ ಇದ್ದುದನ್ನು ಈ ಘಟನೆ ತೋರಿಸಿತ್ತು. ಈಗ ಮತ್ತೆ ಮೇಯರ್ ನೀಡಿರುವ ಹೇಳಿಕೆ ನೋಡಿದರೆ, ಇದುವರೆಗೂ ಸಮನ್ವಯತೆ ಮೂಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅಧಿಕಾರಿಗಳ ವರ್ತನೆಯಿಂದಾಗಿ ನಾಳೆ ಏನಾದರೂ ಹೆಚ್ಚೂ ಕಡಿಮೆ ಆದರೆ ಪಾಲಿಕೆ ಹೊಣೆಯಲ್ಲ ಎಂದು ಮೇಯರ್ ಸ್ಪಷ್ಟಪಡಿಸಿದ್ದಾರೆ. ಇದು ಆಡಳಿತ ದಿಕ್ಕು ದೆಸೆಯಿಲ್ಲದಂತೆ ಸಾಗಿರುವುದನ್ನು ತೋರಿಸುತ್ತಿದೆ.
ಸುದೀರ್ಘ ಕಾಲ ವ್ಯಾಪಾರ ಬಂದ್ ಆದರೆ ಏನಾಗುತ್ತದೆ ಎಂಬುದನ್ನು ನಗರದ ವ್ಯಾಪಾರಸ್ಥರು 1992ರಲ್ಲಿನ ಕೋಮು – ಗಲಭೆಯ ಸಂದರ್ಭದಲ್ಲಿ  ಕಂಡಿದ್ದಾರೆ. ಇದೀಗ ಮತ್ತದೇ ಪರಿಸ್ಥಿತಿ ಬಂದರೆ ದಿವಾಳಿ ಯಾಗುತ್ತೇವೆ ಎಂಬ ಭೀತಿಯಲ್ಲಿ ವರ್ತಕರಿದ್ದಾರೆ.

ಸುಮಾರು ಎರಡು ತಿಂಗಳ ಲಾಕ್‌ಡೌನ್ ನಂತರ ಅಂಗಡಿಗಳನ್ನು ತೆಗೆದು ಒಂದಿಷ್ಟಾದರೂ ವ್ಯಾಪಾರ ಮಾಡೋಣ ಎಂದರೆ ಅಲ್ಲಿಯೂ ಅಧಿಕಾರಿಗಳು ಎಲ್ಲೂ ಕೇಳದ ಮುಚ್ಚಳಿಕೆ ಕೊಡಿ ಎಂದು ಕಾಡುತ್ತಿದ್ದಾರೆ. ವ್ಯಾಪಾರಿಗಳ ಗೋಳು ಕೇಳುವವರೇ ಇಲ್ಲದಂತಾಗಿದೆ.
ಲಾಕ್‌ಡೌನ್ ಮೇಲೊಂದು ಸೀಲ್‌ಡೌನ್ ಎಂದು ನಗರದ ಎಂಟು ಕಂಟೈನ್‌ಮೆಂಟ್ ವಲಯ ಗಳಲ್ಲಿ ಜನ ಕಂಗಾಲಾಗಿದ್ದಾರೆ. ಅಲ್ಲಿನ ಜನರಿಗೆ ಆದ್ಯತೆಯ ಮೇಲೆ ಆಹಾರದ ಕಿಟ್ ನೀಡಬೇಕಿತ್ತು. ಇದುವರೆಗೂ ಜಿಲ್ಲಾಡಳಿತವಾ ಗಲೀ, ಪಾಲಿಕೆಯಾ ಗಲೀ ನೆರವಿನ ಕ್ರಮ ತೆಗೆ ದುಕೊಂಡಿಲ್ಲ. ಕಂಟೈನ್‌ ಮೆಂಟ್ ವಲಯಗಳನ್ನು ನಿಗದಿಪಡಿಸುವಲ್ಲಿಯೂ ಗೊಂದಲ ಮಾಡುತ್ತಿ ದ್ದಾರೆ. ರೈತರ ಬೀದಿಯಲ್ಲಿ ಒಂದೇ ರಸ್ತೆಯಲ್ಲಿ ಕಂಟೈನ್‌ಮೆಂಟ್ ವಲಯ ಮಾಡಿಸಿರುವುದಾಗಿ ಮೇಯರ್ ಅಜಯ್ ಕುಮಾರ್ ಹೇಳಿದ್ದಾರೆ. ಹಾಗಾದರೆ ಉಳಿದೆಡೆ ಕಂಟೈನ್‌ಮೆಂಟ್ ಹೆಚ್ಚು ಮಾಡಿರುವುದು ಏಕೆ ? ಒಬ್ಬರಿಗೊಂದು, ಇನ್ನೊ ಬ್ಬರಿಗೊಂದು ನ್ಯಾಯ ಏಕೆ ? ಕಂಟೈನ್‌ಮೆಂಟ್ ವಲಯ ನಿರ್ಧರಿಸುವವರು ಯಾರು ? ಇದು ಜನರ ಬದುಕಿನ ಪ್ರಶ್ನೆ, ಇದರಲ್ಲಿಯೂ ಚೆಲ್ಲಾಟ ಬೇಡ. ಕೊರೊನಾಗೆ ಚಿಕಿತ್ಸೆ ನೀಡುವ ವ್ಯವಸ್ಥೆಯೇ ಅನುಮಾನ ಮೂಡಿಸುವಂತಿದೆ. ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಟೆಸ್ಟಿಂಗ್ ಸೌಲಭ್ಯಗಳಿದ್ದರೂ, ಕಿಟ್‌ಗೆ ಅನುಮತಿ ಕೊಡಿಸುವುದಕ್ಕೆ ತಿಂಗಳುಗಳ ಸಮಯ ತೆಗೆದುಕೊಳ್ಳಲಾಯಿತು. ಸಿ.ಜಿ. ಆಸ್ಪತ್ರೆಯಲ್ಲಿ ಟೆಸ್ಟಿಂಗ್ ವ್ಯವಸ್ಥೆ ಅಳವಡಿಕೆಯನ್ನು ಈ ವಾರ – ಮುಂದಿನ ವಾರ ಎಂದು ತಳ್ಳುತ್ತಲೇ ಇದ್ದಾರೆ.
ಜಿಲ್ಲಾ ಸರ್ಜನ್ ಡಾ. ನಾಗರಾಜ್ ಕೊರೊನಾ ರೋಗಿಗಳಿಗೆ ಸಮರ್ಪಕ ಚಿಕಿತ್ಸೆಯ ವ್ಯವಸ್ಥೆ ಮಾಡಿಲ್ಲ. ಆಸ್ಪತ್ರೆಯ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ನಡುವೆ ಸಮನ್ವಯ ತಂದಿಲ್ಲ. ಈ ಬಗ್ಗೆ ಹಲವು ಬಾರಿ ಸೂಚನೆ ನೀಡಿದರೂ ತಿದ್ದಿಕೊಂಡಿಲ್ಲ ಎಂದು ಸರ್ಕಾರವು ನಾಗರಾಜ್ ಅವರನ್ನು  ವರ್ಗಾಯಿಸಿದೆ. ಇದು ಜಿಲ್ಲಾಡಳಿತದ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಾಗಿದೆ.
ಕೊರೊನಾ ವೈರಸ್ ಗೆ ಸಂಬಂಧಪಟ್ಟಂತೆ ರಾಂಡಮ್ ಚೆಕಪ್ ಮಾಡುವ ಸೇವೆಗೆ ಬಾಪೂಜಿ ಆಸ್ಪತ್ರೆಗಳ ವೈದ್ಯರು, ಶುಶ್ರೂಷಕರು ಸಿದ್ಧರಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುವಂತೆ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು ಗಳು ಸಾಕಷ್ಟು ಬಾರಿ ಹೇಳಿದ್ದರೂ ಅದಕ್ಕೆ ಜಿಲ್ಲಾಡಳಿತವು ಆಸಕ್ತಿಯೇ ವಹಿಸರಲು ಕಾರಣ ವೇನು? ಎಂದು ನಾಗರಾಜ್ ಪ್ರಶ್ನಿಸಿದ್ದಾರೆ.
ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ದಾವಣಗೆರೆ ಈಗ ಮೊದಲ ಸ್ಥಾನಕ್ಕೆ ಬರುವತ್ತ ಸ್ಪರ್ಧೆ ನಡೆಸುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಇಡೀ ನಗರ ಕೊರೊನಾ ಕೇಂದ್ರ ಎಂಬ ಕಳಂಕ ಹೊತ್ತುಕೊಳ್ಳಬೇಕಾಗುತ್ತದೆ. ಜನರ ಬದುಕು ಇನ್ನಷ್ಟು ಅದ್ವಾನ ಆಗುವುದನ್ನು ನಿಲ್ಲಿಸಬೇಕಿದೆ.
ಅಧಿಕಾರಿಗಳು ಹಾಗೂ ಬಿಜೆಪಿಯ ಜನಪ್ರತಿನಿಧಿ ಗಳು ಇನ್ನಾದರೂ ತಮ್ಮ ವೈಯಕ್ತಿಕ ಮೇಲಾಟಗಳನ್ನು ನಿಲ್ಲಿಸಿ, ಜನರ ಕಷ್ಟ ನಿವಾರಿಸಲು ಮುಂದಾಗಲಿ ಎಂದು ನಾಗರಾಜ್ ಆಶಯ ವ್ಯಕ್ತಪಡಿಸಿದ್ದಾರೆ.

error: Content is protected !!