ಹೊನ್ನಾಳಿ, ಏ.9- ಇದೇ ದಿನಾಂಕ 6 ರಿಂದ ಪ್ರಾರಂಭವಾದ ವರ್ಷದ ಮಳೆ ರೈತರನ್ನು ಕಂಗೆಡಿಸಿದೆ. ಬಂದ ಮೊದಲ ಮಳೆಯಿಂದ ರೈತರು ಬೆಳೆದ ಬಾಳೆ, ಮೆಕ್ಕೆಜೋಳ, ಭತ್ತದ ಬೆಳೆಗಳು ಹಾಳಾಗಿ ರೈತರು ನಷ್ಟಕ್ಕೀಡಾಗಿದ್ದಾರೆ.
ಗೋವಿನಕೋವಿ, ಹರಳಹಳ್ಳಿ, ಬಿದರಗಡ್ಡೆ, ಹೊಳೆಮಾದಾಪುರ ಹಾಗೂ ನ್ಯಾಮತಿ ತಾಲ್ಲೂಕಿನ ಬೆಳಗುತ್ತಿಯಲ್ಲಿ ಭಾರೀ ಮಳೆಯಿಂದಾಗಿ 60 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ, 55 ಎಕರೆ ಪ್ರದೇಶದಲ್ಲಿ ಭತ್ತ ಭಾಗಶಃ ಹಾಗೂ 4 ಎಕರೆ ಪ್ರದೇಶದಲ್ಲಿ ಬಾಳೆ ಸಂಪೂರ್ಣವಾಗಿ ನಾಶವಾಗಿದೆ.
ಬುಧವಾರ ರಾತ್ರಿ ಧಾರಾಕಾರ ಮಳೆ ಯಿಂದ ತಾಲ್ಲೂಕಿನ ಹರಳಹಳ್ಳಿ ಸಮೀಪ ಒಂದು ವಾರದಲ್ಲಿ ಕಟಾವಿಗೆ ಬಂದಿದ್ದ ಐದು ಎಕರೆ ಬಾಳೆ ತೋಟ ಸಂಪೂರ್ಣ ನೆಲಕ್ಕುರು ಳಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಲಕ್ಷಾಂತರ ರೂಗಳನ್ನು ಖರ್ಚು ಮಾಡಿ ಬಾಳೆ ಬೆಳೆಯನ್ನು ಬೆಳೆಯಲಾಗಿತ್ತು. ಎಲ್ಲಾ ಹಾಳಾಗಿ ಹೋಗಿದೆ ಎಂದು ರೈತ ಜಿತೇಂದ್ರ ಬಿಸಾಟಿ ಪತ್ರಿಕೆ ಜೊತೆ ತಮ್ಮ ಕಷ್ಟ ತೋಡಿಕೊಂಡರು.
ವಿಷಯ ತಿಳಿದ ತಕ್ಷಣ ತೋಟಗಾರಿಕೆ ಸಹಾಯಕ ನಿರ್ದೇಶಕ ಜೆ. ಶಂಕರಪ್ಪ ಹಾಗೂ ಕೃಷಿ ಸಹಾಯಕ ನಿರ್ದೇಶಕ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಹಾಳಾಗಿರುವ ಬೆಳೆಯನ್ನು ಪರಿಶೀಲಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ತೋಟಗಾರಿಕೆ ಸಹಾಯಕ ನಿರ್ದೇಶಕ ಶಂಕರಪ್ಪ ಬೆಳೆ ಹೇಗೆ, ಯಾವ ಪರಿಯಲ್ಲಿ ನಷ್ಟ ಉಂಟಾಗಿದೆ ಎಂಬುದನ್ನು ಪರಿಶೀಲನೆ ಮಾಡಿ, ನಂತರ ಸರ್ಕಾರದ ನಿಯಮಾನುಸಾರ ಪರಿಹಾರ ಕೊಡಲಿಕ್ಕೆ ಬರುತ್ತದೋ, ಇಲ್ಲವೋ ಚರ್ಚಿಸಿ ಪರಿಹಾರ ಕೊಡುವ ಬಗ್ಗೆ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳು ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.