ಪೊಲೀಸ್, ಬೆಳ್ಳುಳ್ಳಿ ವ್ಯಾಪಾರಿ ಸೇರಿ ಮೂವರಿಗೆ ಸೋಂಕು

ದಾವಣಗೆರೆ, ಮೇ 14 – ನಗರದಲ್ಲಿ ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಸಂಚಾರಿ ಪೊಲೀಸ್ ಒಬ್ಬರು ಸೋಂಕಿಗೆ ಸಿಲುಕಿದ್ದಾರೆ. ನಗರದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕೆ.ಟಿ.ಜೆ. ನಗರದ ಕಂಟೈನ್‌ಮೆಂಟ್‌ ವಲಯದಲ್ಲಿ ಕಳೆದ ಮೇ 7, 8 ಹಾಗೂ 9ರಂದು ಪೇದೆ ಕಾರ್ಯ ನಿರ್ವಹಿಸಿದ್ದರು. ಇವರನ್ನು ಪಿ – 975 ಎಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪೊಲೀಸ್‌ ಪೇದೆಗೆ ನಿಕಟವರ್ತಿಯಾಗಿದ್ದ ಐವರು ಸಿಬ್ಬಂದಿ ಸೇರಿದಂತೆ 9 ಜನರು ಪ್ರಾಥಮಿಕ ಸಂಪರ್ಕದಲ್ಲಿದ್ದಾರೆ ಹಾಗೂ 32 ಜನರು ದ್ವಿತೀಯ ಹಂತದಲ್ಲಿ ಸಂಪರ್ಕದಲ್ಲಿದ್ದಾರೆ. ಇವರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದವರು ಹೇಳಿದ್ದಾರೆ.

ಬೆಳ್ಳುಳ್ಳಿ ವ್ಯಾಪಾರಿಯಾಗಿದ್ದ 32 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಅವರಿಗೆ ಪಿ-976 ಸಂಖ್ಯೆ ನೀಡಲಾಗಿದೆ. ಕಳೆದ 2-3 ತಿಂಗಳಿನಿಂದ ಅವರು ತಳ್ಳು ಗಾಡಿಯಲ್ಲಿ ಬೆಳ್ಳುಳ್ಳಿ ವ್ಯಾಪಾರ ಮಾಡುತ್ತಿದ್ದರು. ಎಂ.ಬಿ.ಆರ್. ಟ್ರೇಡರ್ಸ್ ಎಂಬ ಅಂಗಡಿಯಿಂದ ಇವರು ಬೆಳ್ಳುಳ್ಳಿ ತರುತ್ತಿದ್ದರು. ಹಳೆ ಬಸ್ ನಿಲ್ದಾಣ, ಹೈಸ್ಕೂಲ್ ಮೈದಾನದ ಬಳಿ ಇವರು ಈರುಳ್ಳಿ ಮಾರುತ್ತಿದ್ದರು. ಅವರ 8 ಪ್ರಾಥಮಿಕ ಹಾಗೂ 16 ದ್ವಿತೀಯ ಸಂಪರ್ಕಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ರೋಗಿ ಸಂಖ್ಯೆ 852 ಸಂಪರ್ಕದಲ್ಲಿದ್ದ 40 ವರ್ಷದ ಪುರುಷರೊಬ್ಬರಿಗೆ ಸೋಂಕು ತಗುಲಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 10 ಜನರು ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 21 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಅವರಿಗೆ ಪಿ – 960 ಸಂಖ್ಯೆ ನೀಡಲಾಗಿದೆ ಎಂದು ಬೀಳಗಿ ಹೇಳಿದ್ದಾರೆ.
ಇದರಿಂದಾಗಿ ನಗರದಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ.

ಈರುಳ್ಳಿ – ಬೆಳ್ಳುಳ್ಳಿ : ಈ ಹಿಂದೆ ಈರುಳ್ಳಿ ಸಾಗಣೆ ಮಾಡುತ್ತಿದ್ದವರಲ್ಲಿ ಸೋಂಕು ಕಂಡು ಬಂದಿತ್ತು. ಈಗ ಬೆಳ್ಳುಳ್ಳಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯಲ್ಲಿ ಸೋಂಕು ಕಂಡುಬಂದಿದೆ. ಹೀಗಾಗಿ ಕೃಷಿ ಉತ್ಪನ್ನಗಳ ಸಾಗಣೆ – ಮಾರಾಟದ ಹಿನ್ನೆಲೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಎಸ್‌ಪಿ ಹನುಮಂತರಾಯ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಡಿ.ಜಿ. ರಾಘವನ್, ಡಿಹೆಚ್‌ಒ ಡಾ. ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

error: Content is protected !!