ಡಾ|| ವಿಶ್ವಾಸ್ ಎಸ್. ಮೆಳ್ಳೇಕಟ್ಟೆ. ಅಮೆರಿಕಾ ಸಂಯುಕ್ತ ಸಂಸ್ಥಾನದ ಇಂಡಿಯಾನಾ ರಾಜ್ಯದಲ್ಲಿರುವ ಯೂನಿಯನ್ ಆಸ್ಪತ್ರೆಯಲ್ಲಿ ನರರೋಗ ತಜ್ಞರು ಜೊತೆಗೆ ಇಂಡಿಯಾನ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಪ್ರತಿಭಾವಂತ ವೈದ್ಯ. ಮೈಸೂರಿನ ಜೆ.ಎಸ್.ಎಸ್. ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ವ್ಯಾಸಂಗ ಮಾಡಿದ್ದಾರೆ.
ನಂತರ ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಇಂಟರ್ನಲ್ ಮೆಡಿಸಿನ್ನಲ್ಲಿ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ವ್ಯಾಸಂಗದಲ್ಲಿ ಇವರಿಗೆ ಸುವರ್ಣ ಪದಕದ ಗೌರವ ಲಭಿಸಿದೆ. ನಂತರ ಇವರು ಅಮೆರಿಕಾದ ಹಾರ್ವರ್ಡ್ ಮೆಡಿಕಲ್ ಸ್ಕೂಲ್ನಲ್ಲಿ ಪೋಸ್ಟ್ ಡಾಕ್ಟರಲ್ ಸಂಶೋಧನೆಯ ಫೆಲೋಷಿಪ್ ಪಡೆದು, ನಾರ್ತ್ ಕೆರೊಲಿನಾ ರಾಜ್ಯದಲ್ಲಿರುವ ವೇಕ್ ಫಾರೆಸ್ಟ್ ವಿಶ್ವವಿದ್ಯಾನಿಲಯದಲ್ಲಿ ನರರೋಗ ವೈದ್ಯರಾಗಿ ತರಬೇತಿ ಪಡೆದಿದ್ದಾರೆ.
ಮೂಲತಃ ದಾವಣಗೆರೆ ಯವರಾದ ಇವರು, ಜನತಾವಾಣಿ ಪತ್ರಿಕೆಯ ಸಂಸ್ಥಾಪಕ ಎಚ್. ಎನ್. ಷಡಾಕ್ಷರಪ್ಪನವರ ದ್ವಿತೀಯ ಪುತ್ರ. ಸಂಪಾದಕ ಎಂ.ಎಸ್. ವಿಕಾಸ್ ಅವರ ಸಹೋದರ.
ಕೋವಿಡ್ ಹಿನ್ನೆಲೆಯಲ್ಲಿ ಇವರನ್ನು ಸಂಪರ್ಕಿಸಿ ತಮ್ಮ ಅನುಭವವನ್ನು ಹಂಚಿಕೊಳ್ಳಲು ಕೋರಿಕೊಂಡಿದ್ದೆವು. ಅವರ ಬಿಡುವಿನ ದಿನದಲ್ಲಿ ಸಮಯ ಮಾಡಿಕೊಂಡು ನಮಗೆ ಸ್ಪಂದಿಸಿದ್ದಾರೆ.
ಅಂದು ನಾನು ಕೆಲಸ ಮಾಡುತ್ತಿರುವ ಯೂನಿಯನ್ ಆಸ್ಪತ್ರೆಯಿಂದ ಕರೆ ಬಂತು. ಅಲ್ಲಿ ತೀವ್ರ ನಿಗಾ ಘಟಕ ಐ.ಸಿ.ಯು ನಲ್ಲಿ ದಾಖಲಾಗಿರುವ ಕೋವಿಡ್ ರೋಗಿಯೊಬ್ಬನಿಗೆ ಮೆದುಳು ಕುರಿತಾದ ಸಮಸ್ಯೆಯಾಗಿತ್ತು. ಅದನ್ನು `ಸೀಜರ್ಸ್’ ಎಂದು ಕರೆಯುತ್ತೇವೆ. ಆಸ್ಪತ್ರೆಗೆ ಹೋದೆ. ಅದೇ ಮೊದಲ ಬಾರಿಗೆ ಕೋವಿಡ್ ಸೋಂಕಿತನೊ ಬ್ಬನನ್ನು ನೋಡಲು ಹೋಗಿದ್ದು. ಒಳಗೆ ಹೋಗುವ ಮುನ್ನ ಸ್ವಯಂ ರಕ್ಷಕ ಉಡುಪು, ಕನ್ನಡಕ, ಕೈ, ಕಾಲು, ತಲೆಯ ರಕ್ಷಣೆಗೆ ಒದಗಿಸಲಾದ ಎಲ್ಲ ಪರಿಕರಗಳನ್ನು ಕ್ರಮ ಬದ್ಧವಾಗಿ ಧರಿಸಿದೆ. ಯುದ್ಧಕ್ಕೆ ಮುನ್ನ ಹೋಗುವ ಯೋಧನಂತೆ ಅನುಭವ.
ಹೌದು. ಕೋವಿಡ್ ಚಿಕಿತ್ಸೆಗಾಗಿ ಕೆಲಸ ಮಾಡುವ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳು ಒಂದರ್ಥದಲ್ಲಿ ಯೋಧರೇ. ಇದೊಂದು ಕೋವಿಡ್ ಸಮರ. ಈ ಕೊರೊನಾ ರೋಗಾಣು ನಮ್ಮ ವೈದ್ಯಕೀಯ ಕ್ಷೇತ್ರಕ್ಕೇ ಒಂದು ದೊಡ್ಡ ಸವಾಲು. ಇದರ ಸೋಂಕಿತರನ್ನು ಯಾವ ಚಿಕಿತ್ಸೆಗೆ ಒಳಪಡಿಸಿ ರೋಗ ಮುಕ್ತರನ್ನಾಗಿ ಮಾಡಬೇಕೆಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟಕರ. ಈಗ ಏನಿದ್ದರೂ ಅದನ್ನು ನಿಯಂತ್ರಿಸುವ ಕುರಿತು ಕೆಲವು ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದೇವೆ. ಉಳಿದದ್ದು ರೋಗಿಯ ಮನೋಸ್ಥೈರ್ಯ ಮತ್ತು ರೋಗ ನಿರೋಧಕ ಶಕ್ತಿಯ (ಇಮ್ಯೂನಿಟಿ) ಮೇಲೆ ಅವಲಂಬಿತವಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ವೈದ್ಯಕೀಯ ಸಿಬ್ಬಂದಿಗಳಾದ ನಾವೇ ಒಂದು ರೀತಿಯ ಆತಂಕದಲ್ಲಿರುತ್ತೇವೆ. ಇನ್ನು ಸೋಂಕಿತ ರೋಗಿಯ ಆತಂಕ-ಭಯ ಇನ್ನೆಷ್ಟಿರಬೇಡ!
ಸರಿ. ಪಿ.ಪಿ.ಇ (Personal protection) ಉಡುಪು ಧರಿಸಿ ಐ.ಸಿ.ಯು ನಲ್ಲಿದ್ದ ರೋಗಿಯ ಬಳಿ ತಪಾಸಣೆ ಮಾಡಲು ಹೋದೆ. ಆತ ಸುಮಾರು ನಲವತ್ತೈದು ವಯಸ್ಸಿನ ಯುವಕ. ಅಗ್ನಿ ಶಾಮಕ ದಳದ ಯೋಧ. ಅವನನ್ನು ಮಾತನಾಡಿಸಿ ಧೈರ್ಯ ತುಂಬಿದೆ. ಆತನ ಸೂಕ್ತ ಚಿಕಿತ್ಸೆಗೆ ಏರ್ಪಾಡು ಮಾಡಿ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗುವಂತೆ ವೆಂಟಿಲೇಟರ್ ಅಳವಡಿಸಿದೆವು. ಸರಿಯಾಗಿ ಸ್ಪಂದಿಸತೊಡಗಿದ. ಚೇತರಿಸಿಕೊಳ್ಳುವ ಎಲ್ಲಾ ಲಕ್ಷಣಗಳಿದ್ದವು. ಆದರೆ, ಹದಿನಾಲ್ಕು ದಿನಗಳ ನಂತರ ಆತ ಕೊನೆಯುಸಿರೆಳೆದಿದ್ದ. ಕೋವಿಡ್ ಸೋಂಕಿತ ರೋಗಿಯೊಂದಿಗೆ ನನ್ನ ಮೊದಲ ಅನುಭವ ಭೀಕರವಾಗಿತ್ತು!
ಈ ಕೊರೊನಾ ವೈರಸ್ ಲಕ್ಷಣಗಳು ಒಮ್ಮೊಮ್ಮೆ ವಿಚಿತ್ರವಾಗಿ ಗೋಚರಿಸುತ್ತವೆ. ಇನ್ನೊಬ್ಬ ರೋಗಿ ನರ ದೌರ್ಬಲ್ಯದ ವಿಚಾರವಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಅವನಿಗೆ ಸ್ಟ್ರೋಕ್ ಆಗಿತ್ತು. ಆತನನ್ನು ಪರೀಕ್ಷಿಸಿದಾಗ ಕೋವಿಡ್ನ ಯಾವ ಲಕ್ಷಣಗಳೂ ಕಂಡಿರಲಿಲ್ಲ. ವಾರ ಕಳೆದಂತೆ ಅವನಿಗೆ ವಿಪರೀತ ಜ್ವರ ಕಾಣಿಸಿಕೊಂಡಿತು. ಎದೆಯ ಸಿ.ಟಿ. ಸ್ಕ್ಯಾನ್ ಮಾಡಿಸಿ ಪರೀಕ್ಷಿಸಿದಾಗ ಆತನಿಗೆ ಕೋವಿಡ್ ಸೋಂಕು ಉಂಟಾಗಿರುವುದು ಕಂಡು ಬಂತು! ಆದರೆ, ಈ ರೋಗಿ ನಮ್ಮ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾನೆ. ಅದನ್ನು ನಿಭಾಯಿಸಿಕೊಂಡು ತನ್ನ ನಿರೋಧಕ ಶಕ್ತಿಯಿಂದ ಗುಣಮುಖನಾಗುತ್ತಿದ್ದಾನೆ.
ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ನಾವು ಮೊದಲಿಗೆ ಒಂದು ತಜ್ಞರ ಸಮಿತಿಯನ್ನು ರಚಿಸಿಕೊಂಡೆವು. ಶ್ವಾಸ ಕೋಶ, ನರರೋಗ, ಮೂತ್ರ ಪಿಂಡ, ಸೋಂಕು ರೋಗ, ಆಂತರಿಕ ಔಷಧ ಮುಂತಾದ ಕ್ಷೇತ್ರಗಳಲ್ಲಿನ ತಜ್ಞ ವೈದ್ಯರನ್ನು ಒಳಗೊಂಡ ಸಮಿತಿ. ಎಲ್ಲರೂ ಈ ಸೋಂಕಿನ ಚಿಕಿತ್ಸೆಗೆ ಅಮೆರಿಕಾದ ರೋಗ ನಿಯಂತ್ರಣ ಕೇಂದ್ರದ ನಿಯಮಗಳ ಅನುಸಾರ ಸದ್ಯಕ್ಕೆ ಲಭ್ಯವಿರುವ ಚಿಕಿತ್ಸಾ ವಿಧಾನಗಳ ಕುರಿತು ಚರ್ಚಿಸಿದೆವು.
ಇದರಲ್ಲಿ ವೆಂಟಿಲೇಟರ್ ನಿರ್ವಹಣೆ, ಅಂದರೆ ರೋಗಿಗೆ ಆಮ್ಲಜನಕ ಸರಬರಾಜು ಮಾಡುವ ವ್ಯವಸ್ಥೆಯ ನಿರ್ವಹಣೆ ಮತ್ತು ರಕ್ತನಾಳಗಳ ಮೂಲಕ ಲಸಿಕೆಗಳನ್ನು ಪ್ರವಹಿಸುವುದು ಪ್ರಮುಖ ವಿಧಾನ. ಅದರಲ್ಲೂ ಈ ರಕ್ತನಾಳಗಳ ಮೂಲಕ ಲಸಿಕೆ ಹಾಕುವಾಗ ತುಂಬಾ ಜಾಗ್ರತೆ ವಹಿಸಬೇಕಾಗುತ್ತದೆ. ಅದು ತುಂಬಾ ನಿಯಮಿತವಾಗಿರಬೇಕು. ಇಲ್ಲವಾದಲ್ಲಿ ಶ್ವಾಸ ಕೋಶಕ್ಕೆ ಧಕ್ಕೆಯಾಗುವ ಸಂಭವವಿರುತ್ತದೆ.
ಈ ವಿಧಾನವಲ್ಲದೇ ಹಲವು ರೋಗ ನಿರೋಧಕ ಔಷಧಿಗಳನ್ನು, ಬಿಳಿಯ ರಕ್ತ ಕಣಗಳಿಗೆ ರೋಗಾಣುಗಳ ವಿರುದ್ಧ ಹೋರಾಡುವ ಶಕ್ತಿ ಪೂರಕಗಳನ್ನು ನೀಡುವ ಮುಂತಾದ ವಿಧಾನಗಳ ಬಗ್ಗೆ ರೂಪುರೇಷೆಗಳನ್ನು ಹಾಕಿಕೊಂಡೆವು. ಪ್ರತಿದಿನ ಬೆಳಿಗ್ಗೆ ಎಂಟು ಗಂಟೆಗೆ ಎಲ್ಲಾ ವೈದ್ಯರು ಶುಶ್ರೂಷಕಿಯರು ಸಭೆಸೇರುತ್ತೇವೆ. ದಾಖಲಾಗಿರುವ ಕೋವಿಡ್ ರೋಗಿಗಳ ಸ್ಪಂದನೆಯ ಕುರಿತು ಅವರ ಅಂಗಾಂಗಗಳ ಕಾರ್ಯ ನಿರ್ವಹಣೆಯ ಕುರಿತು ಚರ್ಚಿಸುತ್ತೇವೆ. ರೋಗಿಗಳಿಗೆ ಯಾವ ಸೂಕ್ತ ಚಿಕಿತ್ಸೆ ನೀಡಬೇಕೆಂಬ ನಿರ್ಧಾರಕ್ಕೆ ಬರುತ್ತೇವೆ.
ಈಗ ನಮ್ಮ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಲ್ಲಿ ವೆಂಟಿಲೇಟರ್ ನಿರ್ವಹಣೆ ಮತ್ತು ರಕ್ತನಾಳಗಳ ಮೂಲಕ ನಿಯಮಿತ ಲಸಿಕೆ ಪ್ರಹವಹಿಸುವಿಕೆ ವಿಧಾನವು ಅವರು ಚೇತರಿಸಿಕೊಳ್ಳುವುದರಲ್ಲಿ ಹೆಚ್ಚಿನ ಸಹಕಾರಿಯಾಗುತ್ತಿದೆ.
ಆರಂಭದ ದಿನಗಳಲ್ಲಿ ನಾವುಗಳೇ ವಿಚಲಿತರಾಗಿದ್ದೆವು. ಇದು ವೈದ್ಯಕೀಯ ಕ್ಷೇತ್ರದಲ್ಲಿ ಅಪರಿಚಿತವಾದ ವೈರಸ್ ಜೊತೆಗಿನ ಸೆಣಸಾಟವಾಗಿತ್ತು. ದಿನಗಳದಂತೆ ಅದರ ಗುಣಲಕ್ಷಣಗಳ ಪರಿಚಯವಾಗತೊಡಗಿತು. ಮುಂಜಾಗರೂಕತೆಯ ಸ್ವಯಂರಕ್ಷಣೆ ಮಾಡಿಕೊಳ್ಳುವುದು ರೂಢಿಯಾಗತೊಡಗಿತು. ಈ ಯುದ್ಧದಲ್ಲಿ ಹಿಂದೆ ಹೆಜ್ಜೆ ಇಡಬಾರದು, ರಕ್ಷಾ ಕವಚಗಳನ್ನು ಧರಿಸಿ ಮುನ್ನುಗ್ಗಿ ರೋಗಿಗಳು ಗುಣಮುಖರಾಗಲು ಚಿಕಿತ್ಸೆ ನೀಡಲೇಬೇಕೆಂಬ ದೃಢ ಸಂಕಲ್ಪವನ್ನು ಮಾಡತೊಡಗಿದೆವು.
ಈಗ ಈ ಭೀಕರ ವೈರಾಣುವನ್ನು ಹಿಮ್ಮೆಟ್ಟಿಸಿ ನಿಯಂತ್ರಣಕ್ಕೆ ತರಬಹುದೆಂಬ ವಿಶ್ವಾಸವನ್ನು ಬೆಳೆಸಿಕೊಂಡಿದ್ದೇವೆ. ಹೆದರದಿರಿ ನಿಮ್ಮ ರಕ್ಷಣೆಗೆ ನಾವಿದ್ದೇವೆ. ನೀವೂ ಆ ರೋಗಾಣುವನ್ನು ಎದುರಿಸಬಹುದು ಎಂದು ಸೋಂಕಿತರಿಗೆ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಆತಂಕದಲ್ಲಿರುವ ಸೋಂಕಿತರ ಸಂಬಂಧಿ ಗಳೊಡನೆ ಪ್ರಾಮಾಣಿಕವಾಗಿ ವ್ಯವರಿಸುತ್ತಿದ್ದೇವೆ. ರೋಗಿಯ ಸ್ಥಿತಿಗತಿಗ ಳನ್ನು ವಿವರಿಸುತ್ತಿದ್ದೇವೆ. ಸ್ಕೈಪ್ ಮುಂತಾದ ತಂತ್ರಜ್ಞಾನ ಬಳಸಿ ಅವರು ಪರಸ್ಪರ ನೋಡಿ ಮಾತನಾಡುವಂತೆ ಮಾಡುತ್ತೇವೆ.
ರೋಗಿಯ ಮನೋ ಧೈರ್ಯ ತುಂಬಲು ಪಾದ್ರಿಗಳಿಂದ ಪ್ರಾರ್ಥನೆ ಮಾಡಿಸುತ್ತೇವೆ. ಒಟ್ಟಾರೆ ರೋಗಿ ಜೀವನೋತ್ಸಾಹದಿಂದ ಇರುವಂತೆ, ಚಿಕಿತ್ಸೆಗೆ ಸ್ಪಂದಿಸುವಂತೆ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಸಾಮಾನ್ಯವಾಗಿ ಎಲ್ಲರಿಗೂ ಕೋವಿಡ್ ಪರಿಸ್ಥಿತಿ ಅರ್ಥವಾಗಿದೆ. ಅವರೂ ಕೂಡ ನೋವಿರಲಿ, ನಲಿವಿರಲಿ, ವಿಷಾದದ ವಿಷಯವಿರಲಿ ಸಮಾಧಾನದಿಂದ ಸ್ಪಂದಿಸುತ್ತಾರೆ. ಕರ್ತವ್ಯದಲ್ಲಿ ತೊಡಗಿರುವ ನಮಗೆ ಕೃತಜ್ಞತೆ ಸಲ್ಲಿಸುತ್ತಾರೆ.
ನಮ್ಮ ವೈದ್ಯರ ತಂಡ ಯೋಜನಾಬದ್ಧವಾಗಿ ಕೆಲಸಗಳನ್ನು ಹಂಚಿಕೊಂಡಿದ್ದೇವೆ. ಹೆಚ್ಚು ಒತ್ತಡ ತಂದುಕೊಳ್ಳದೇ ಅವರವರ ಕರ್ತವ್ಯವನ್ನು ಸುಗಮವಾಗಿ ನಡೆಸಿಕೊಂಡು ಹೋಗುತ್ತಿದ್ದೇವೆ. ಕೋವಿಡ್ ರೋಗಿಗಳಲ್ಲಿ ನರರೋಗದ ಸಮಸ್ಯೆ ಕುರಿತಾದ ಕೆಲವು ತಪಾಸಣೆಗೆ ನಾನು ಇದಕ್ಕಾಗಿಯೇ ರೂಪಿಸಿರುವ ರೋಬೋಟ್ ಬಳಸುತ್ತಿದ್ದೇನೆ.
ಅದು ತನ್ನ ಕ್ಯಾಮೆರಾದ ಮೂಲಕ ರೋಗಿಯ ಸ್ಥಿತಿಗತಿಗಳನ್ನು ತಿಳಿಸುತ್ತದೆ. ಅದಕ್ಕೆ ಅಳವಡಿಸಲಾದ ಧ್ವನಿವರ್ಧಕದ ಮೂಲಕ ರೋಗಿಯ ಅನಿಸಿಕೆಗಳನ್ನು ನಾವು ಕೇಳ ಬಹುದು. ನೋವನ್ನು ಆಲಿಸಬಹುದು. ರೋಗಿಯು ರೋಬೋಟ್ ನಲ್ಲಿ ಅಳವಡಿಸಿರುವ ಸಣ್ಣ ಪರದೆಯ ಮೂಲಕ ನಮ್ಮನ್ನು ನೋಡಿ ನಾವು ನೀಡುವ ಮನೋಧೈರ್ಯವನ್ನು ಮತ್ತು ಸಲಹೆಗಳನ್ನು ಪಡೆಯಬಹುದು.
ನಮಗೆ ಕಷ್ಟಕರ ಕೆಲಸವೆಂದರೆ ಪ್ರತಿ ರೋಗಿಯ ತಪಾಸಣೆಯ ನಂತರ ವೈದ್ಯರಿಗಾಗಿ ಮೀಸಲಾಗಿರುವ ಸುರಕ್ಷಾ ವಲಯಕ್ಕೆ ಹೋಗಿ ನಮ್ಮ ಸ್ವಯಂ ರಕ್ಷಣಾ ಉಡುಪು-ಪರಿಕರಗಳನ್ನು ವಿಸರ್ಜಿಸುವುದು. ಹೊಸ ಉಡುಪಿನೊಂದಿಗೆ ನವೀಕರಣಗೊಂಡು ಬರುವುದು! ಇದು ಅನಿವಾರ್ಯ.
ಅವುಗಳ ಕಿರುಭಾರ ಹೊತ್ತು, ಮಾಸ್ಕ್ ಧರಿಸಿಕೊಂಡೇ ಕರ್ತವ್ಯ ನಿಭಾಯಿಸುವುದನ್ನು ರೂಢಿ ಮಾಡಿ ಕೊಂಡಿದ್ದೇವೆ. ಐ.ಸಿ.ಯುನಲ್ಲಿ ದಾಖಲಾಗಿರುವ ರೋಗಿಯ ಮೆದುಳು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದಾಗ, ಹೃದಯ ಬಡಿತವನ್ನು ಪರೀಕ್ಷಿಸುತ್ತೇವೆ. ದೇಹದ ಎದೆಯ ಭಾಗವನ್ನು ಒಮ್ಮೊಮ್ಮೆ ಒತ್ತುತ್ತೇವೆ. ಹಾಗೆ ಮಾಡಿದಾಗ ಬಾಯಿಯಿಂದ ದ್ರವ ಒಸರುತ್ತದೆ. ಅದರಿಂದ ಅಲ್ಲಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಸೋಂಕು ತಗಲುವ ಅಪಾಯವೇ ಹೆಚ್ಚು. ಅದನ್ನು ಎದುರಿಸಿಕೊಂಡೇ ನಾವು ಕರ್ತವ್ಯ ನಿಭಾಯಿಸಬೇಕು.
ಮೊದಲಿಗೆ ನಮ್ಮ ಸ್ವಯಂರಕ್ಷಣೆಗೆ ಬೇಕಾದ ವಸ್ತುಗಳ ಕೊರತೆಯಿತ್ತು. ಅವುಗಳನ್ನು ರಾಸಾಯನಿಕ ಕ್ರಿಯೆಗಳಿಂದ, ಮಾಸ್ಕ್ ಗಳನ್ನು ಅಲ್ಟ್ರಾ ವೈಲೆಟ್ ವಿಕಿರಣಗಳಿಂದ ಮರುಬಳಕೆ ಮಾಡುವ ಉಪಾಯಗಳನ್ನು ಮಾಡತೊಡಗಿದೆವು. ಸ್ಥಳೀಯ ಸಾರ್ವಜನಿಕ ವಲಯಗಳು, ಕೈಗಾರಿಕಾ ವಲಯಗಳು ಸ್ವಯಂ ಪ್ರೇರಣೆಯಿಂದ ಮಾಸ್ಕ್ ಮತ್ತು ಇತರೆ ವಸ್ತುಗಳ ಪೂರೈಕೆ ಮಾಡುವಲ್ಲಿ ಸಕಾರಾತ್ಮಕವಾಗಿ ಸ್ಪಂದಿಸತೊಡಗಿದವು.
ಈಗ ಅಗತ್ಯವಾದ ಸಾಕಷ್ಟು ಸಾಮಗ್ರಿಗಳನ್ನು ಹೊಂದಿದ್ದೇವೆ. ಉತ್ತೇಜಿತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಸೋಂಕಿತ ರೋಗಿಗಳಿಗೆ ಮನೋಸ್ಥೈರ್ಯ ತುಂಬುವ ಕೆಲಸವನ್ನು ಅತ್ಯಂತ ವಿಶ್ವಾಸದಿಂದ ಮಾಡುತ್ತಿದ್ದೇವೆ. ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಈಗ ಕೊರೊನಾ ಎಂಬ ರೋಗಾಣು ಮೊದಲಿನ ಹಾಗೆ ಅಪರಿಚಿತವಲ್ಲ. ಅದು ನಮ್ಮ ಜಗತ್ತಿನಲ್ಲಿ ಜನಿಸಿಬಿಟ್ಟಿದೆ. ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳುತ್ತಿದೆ. ಅದರ ಸಂಪೂರ್ಣ ನಿರ್ಮೂಲನೆ ಅಸಾಧ್ಯ. ಅದರೊಟ್ಟಿಗೇ ಮನುಷ್ಯ ತನ್ನ ಜೀವನವನ್ನು ಸಾಗಿಸಬೇಕಿದೆ. ಎಚ್ಚರಿಕೆಯ ನಡೆಯನ್ನು ಇಡಬೇಕಿದೆ.
ಸೋಂಕಿತರಿಗೆ ಖಚಿತ ಚಿಕಿತ್ಸೆಯೆಂಬುದು ಸದ್ಯಕ್ಕೆ ಇಲ್ಲ. ಈಗ ಅಮೇರಿಕಾದಲ್ಲಿ ವಿಶಾಲ ರೋಗಾಣು ನಿರೋಧಕ ಲಸಿಕೆಯ ಚುಚ್ಚು ಮದ್ದಿನ ಚಿಕಿತ್ಸೆಯನ್ನು ಅಭಿವೃದ್ಧಿ ಗೊಳಿಸುತ್ತಿದ್ದಾರೆ. (Remdesivir, a broad-spectrum antiviral medication) ಇದರಿಂದ ಬಹಳಷ್ಟು ರೋಗಿಗಳು ಗುಣಮುಖರಾಗುತ್ತಿದ್ದು, ಆಶಾದಾಯಕವಾಗಿದೆ.
ಆದರೂ ಆರೋಗ್ಯ ಸಂಸ್ಥೆಗಳು, ವೈದ್ಯರು ಸೂಚಿಸುತ್ತಿರುವ ಮುಂಜಾಗ್ರತೆಯ ಕ್ರಮಗಳನ್ನು ನಾವೆಲ್ಲಾ ಪಾಲಿಸಲೇಬೇಕು. ಸೋಂಕು ಸಂಪರ್ಕ ವಾಗದಂತೆ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುವುದೇ ಉತ್ತಮ ಮಾರ್ಗ. Prevention is better than cure.
ಅರುಣ್ಕುಮಾರ್ಆರ್.ಟಿ.
9663793337
[email protected]