ಕೊರೊನಾ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಯಾರಿ

Home ಲೇಖನಗಳು ಕೊರೊನಾ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಯಾರಿ

ಕೊರೊನಾ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಯಾರಿ

ಜಿಲ್ಲೆಯಲ್ಲಿ ಪರೀಕ್ಷೆ ಎದುರಿಸಲಿರುವ 20,927 ವಿದ್ಯಾರ್ಥಿಗಳು, ವಿದ್ಯಾರ್ಥಿಗಳಿಗೆ ಪಠ್ಯದ ಪರೀಕ್ಷೆ, ಶಿಕ್ಷಣ ಇಲಾಖೆಗೆ ಕೊರೊನಾ ಪರೀಕ್ಷೆ

ರಾಜ್ಯ ಸರ್ಕಾರ ಜೂನ್ ಅಥವಾ ಜುಲೈ ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಿದೆ ಎಂಬ ಆದೇಶ ಹೊರ ಬೀಳುತ್ತಿದ್ದಂತೆ ಮೊಬೈಲ್, ಆಟಿಕೆ, ಟಿವಿ ಎಲ್ಲವನ್ನೂ ಬಿಟ್ಟು ಇದೀಗ ಮಕ್ಕಳು ಪುಸ್ತಕ ಹಿಡಿದು ಕುಳಿತಿದ್ದಾರೆ. ಇತ್ತ ರಾಜ್ಯದ ಪಟ್ಟಿಯಲ್ಲಿ ಟಾಪ್ 10 ಒಳಗೆ ಜಿಲ್ಲೆಯನ್ನು ಕೊಂಡೊಯ್ಯ ಬೇಕೆಂದು ಟೊಂಕ ಕಟ್ಟಿದ್ದ ಶಿಕ್ಷಣ ಇಲಾಖೆಗೂ ಕೊರೊನಾ ಕಠಿಣ ಪರೀಕ್ಷೆ ತಂದೊಡ್ಡಿದೆ.

ಕೋವಿಡ್ ಸೋಂಕು ನಿಯಂತ್ರಣದಲ್ಲಿ ಮುಂಚೂಣಿಯಲ್ಲಿದ್ದು, ದೇಶದ ಗಮನ ಸೆಳೆದಿದ್ದ ದಾವಣಗೆರೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಪ್ರಕರಣಗಳ ಸಂಖ್ಯೆ ಏರುತ್ತಿರುವುದು  ನಗರವನ್ನು ತಲ್ಲಣಗೊಳಿ ಸಿದೆ. ಇದೀಗ ಪರೀಕ್ಷೆ ವಿಷಯ ತಿಳಿಯುತ್ತಿ ದ್ದಂತೆ ವಿದ್ಯಾರ್ಥಿಗಳು,  ಪೋಷಕರು, ಶಿಕ್ಷಕರೂ ಆತಂಕಕ್ಕೊಳಗಾಗಿದ್ದಾರೆ.

ಸರ್ಕಾರ, ಜನಪ್ರತಿನಿಧಿಗಳು, ವೈದ್ಯರು ಸೋಂಕಿನ ಬಗ್ಗೆ ಭಯ ಬೇಡ. ಅದರೊಟ್ಟಿಗೆ ಜೀವಿಸುವುದನ್ನು ಕಲಿಯೋಣ ಎಂದು ಎಷ್ಟೇ ಹೇಳಿದರು, ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ  ವರದಿ ಯಾಗುವ ಸೋಂಕಿನಿಂದ ಸಾವನ್ನಪ್ಪುವ ಪ್ರಕರಣಗಳು, ಯಾವುದೋ ದೂರದ ದೇಶದಲ್ಲಿನ ಶವಗಳ  ರಾಶಿಯ ವೀಡಿಯೋಗಳು, ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡುವ ಕ್ರಮಗಳು, ಆ ಪ್ರದೇಶದಲ್ಲಿ ಸೀಲ್‌ಡೌನ್ ಮಾಡುವಂತಹ ಕ್ರಮಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಭಯ ಹುಟ್ಟಿಸಿರುವುದಂತೂ ನಿಜ.

ಸರ್ಕಾರವಂತೂ ನಿರ್ಧಾರ ತಿಳಿಸಿದೆ. ಇನ್ನೇನಿದ್ದರೂ ಕೊರೊನಾ ಹಾಗೂ ಎಸ್ಸೆಸ್ಸೆಲ್ಸಿ ಎರಡೂ ಪರೀಕ್ಷೆಗಳನ್ನು ಒಟ್ಟೊಟ್ಟಿಗೆ ಎದುರಿಸಬೇಕಾಗಿರುವುದು ವಿದ್ಯಾರ್ಥಿಗಳಷ್ಟೇ ಅಲ್ಲ, ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯೂ ಸಹ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಈಗಾಗಲೇ ಸರ್ಕಾರದ ಸೂಚನೆಯಂತೆ ಹಲವು ಕ್ರಮಗಳಿಗೆ ಮುಂದಾಗಿದೆ.

ಶಿಕ್ಷಣ ಇಲಾಖೆ ಸನ್ನದ್ಧ: ಜಿಲ್ಲೆಯಲ್ಲಿ  10311 ಬಾಲಕರು, 10616 ಬಾಲಕಿಯರು  ಸೇರಿ ಒಟ್ಟು 20927 ವಿದ್ಯಾರ್ಥಿಗಳು  ಪರೀಕ್ಷೆ ಎದುರಿಸಲಿದ್ದಾರೆ. ಪರೀಕ್ಷಾ ಮಂಡಳಿಯ ಸೂಚನೆಗಳಂತೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ತಯಾರಾಗುತ್ತಿದೆ.  ಜಿಲ್ಲೆಯಲ್ಲಿ ಒಟ್ಟು 79 ಪರೀಕ್ಷಾ ಕೇಂದ್ರಗಳ 872 ಕೊಠಡಿಗಳನ್ನು  ಸಿದ್ಧಪಡಿಸಲಾಗಿತ್ತು.  ಆದರೆ ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಒಂದು ಕೊಠಡಿಯಲ್ಲಿ ಗರಿಷ್ಠ 20 ಮಕ್ಕಳಿಗೆ ಮಾತ್ರ ಕುಳಿತುಕೊಳ್ಳುವಂತೆ ಕ್ರಮ ವಹಿಸುವ ಅಗತ್ಯವಿದೆ. ಒಂದು ಕೊಠಡಿ ದೊಡ್ಡದಿದ್ದರೆ, ವಿಸ್ತ್ರೀರ್ಣ ಗಮನಿಸಿ ಹೆಚ್ಚುವರಿ ಮಕ್ಕಳನ್ನು ಪರೀಕ್ಷೆಗೆ ಕೂರಿಸಲು ಅವಕಾಶವಿದೆ.

ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು ಹಾಗೂ ಮೇಲ್ವಿಚಾರಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವುದು. ಅವರ ಕೈಗಳಿಗೆ ನಿತ್ಯ ಸ್ಯಾನಿಟೈಸರ್ ಹಾಕುವುದು. ಮಾಸ್ಕ್ ನೀಡುವ ಬಗ್ಗೆ ಚರ್ಚೆ ನಡೆದಿದೆ. ಸ್ಕೌಟ್‌ ಗೈಡ್ಸ್ ಸಂಸ್ಥೆ  ತಯಾರಿಸಿದ 22 ಸಾವಿರ  ಮಾಸ್ಕ್ ಕೊಡುವುದಾಗಿ ಹೇಳಿದೆ. ಇದನ್ನು ಬಳಸಬೇಕೋ ಅಥವಾ ಸರ್ಕಾರವೇ ನೀಡಲಿದೆಯೋ ಎಂಬ ಮಾಹಿತಿ ಪಡೆಯಲಿದ್ದೇವೆ ಎಂದು ಹೇಳಿದರು.


ಕೊರೊನಾ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಯಾರಿ - Janathavani

ಕೆ.ಎನ್. ಮಲ್ಲಿಕಾರ್ಜುನ್
9964930983
[email protected]

error: Content is protected !!