ಹೈಕೋರ್ಟ್ ನ್ಯಾಯಮೂರ್ತಿ ಬಿ. ಎಂ.ಶ್ಯಾಮ್ ಪ್ರಸಾದ್ ಅಭಿಮತ
ದಾವಣಗೆರೆ, ಡಿ. 19 – ವಕೀಲರು ಸಾಮಾಜಿಕ ಸಮಸ್ಯೆಗಳು ಹಾಗೂ ಸಮಾಜದಲ್ಲಿ ಹಕ್ಕುಗಳಿಗೆ ಚ್ಯುತಿಯಾದಾಗ ನೆರವು ನೀಡುತ್ತಾರೆ. ಸ್ವತಂತ್ರ ಚಿಂತನೆ ಮೂಲಕ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಹೀಗಾಗಿ ವಕೀಲರು `ಸಾಮಾಜಿಕ ವೈದ್ಯರು’ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಿ. ಎಂ. ಶ್ಯಾಮ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಅಖಿಲ ಭಾರತ ಅಧಿವಕ್ತಾ ಪರಿಷತ್ ವತಿಯಿಂದ ನಗರದ ರೋಟರಿ ಬಾಲಭವನ ದಲ್ಲಿ ಸಂವಿಧಾನ ಹಾಗೂ ವಕೀಲರ ದಿನಾಚರಣೆ ಪ್ರಯುಕ್ತ ಇಂದು ಆಯೋಜಿ ಸಲಾಗಿದ್ದ ಕಾನೂನು ಕಾರ್ಯಾಗಾರದಲ್ಲಿ ಅವರು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ವಕೀಲರು ಸ್ವತಂತ್ರವಾಗಿ ಚಿಂತಿಸುವ ಸಾಮರ್ಥ್ಯ ಹೊಂದಿರುವುದು ಹಾಗೂ ಸಮಾ ಜದ ಜೊತೆ ಸಂವಾದ ನಡೆಸುವುದು ವಕೀಲಿ ವೃತ್ತಿಯ ಸೊಗಡಾಗಿದೆ ಎಂದವರು ಹೇಳಿದರು.
ವಕೀಲರು ಕೇವಲ ಕಾನೂನು ಅಷ್ಟೇ ಅಲ್ಲದೇ ಸಮಾಜ ವಿಜ್ಞಾನ, ಆರ್ಥಿಕತೆ, ವಿಜ್ಞಾನ ಸೇರಿದಂತೆ ಹಲವಾರು ವಿಷಯಗಳನ್ನು ಅರಿಯುವ ಅಗತ್ಯವಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ, ವಕೀಲರು ತಿಳಿಯದೇ ಇರುವ ವಿಷಯ ಇಲ್ಲ ಎಂಬಂತಿರಬೇಕು ಎಂದವರು ಕಿವಿಮಾತು ಹೇಳಿದರು.
ಹೆಸರಾಂತ ವಕೀಲರೂ ಆಗಿದ್ದ ದೇಶದ ಪ್ರಥಮ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನವನ್ನು ವಕೀಲರ ದಿನವಾಗಿ ಡಿ.3ರಂದು ಆಚರಿಸಲಾಗುತ್ತದೆ. ಪ್ರಸಾದ್ ಅವರ ಶಿಸ್ತು, ಪ್ರಾಮಾಣಿಕತೆ, ಸಮಾಜ ಸೇವೆ ಹಾಗೂ ದೇಶದ ಸಂಸ್ಕೃತಿಯ ಅಧ್ಯಯನಗಳು ವಕೀಲರಿಗೆ ಆದರ್ಶವಾಗ ಬೇಕು ಎಂದು ನ್ಯಾಯಮೂರ್ತಿ ಪ್ರಸಾದ್ ಅಭಿಪ್ರಾಯ ಪಟ್ಟರು.
ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದ ಪ್ರಸಾದ್ ಅವರು, ಸಂವಿಧಾನ ರಚನೆಯ ಉದ್ದೇಶಗಳನ್ನು ವಿವರಿಸುತ್ತಾ, ಬಡತನ ಹಾಗೂ ಅಜ್ಞಾನದ ನಿವಾರಣೆ, ಪ್ರತಿಯೊಬ್ಬ ವ್ಯಕ್ತಿಯ ಪೂರ್ಣ ಬೆಳವಣಿಗೆಗೆ ಸಮಾನ ಅವಕಾಶ ಕಲ್ಪಿಸುವುದು ಸಂವಿಧಾನ ರಚನೆಯ ಆಶಯವಾಗಿರಬೇಕು ಎಂದು ಹೇಳಿ ದ್ದರು. ಅಂತಿಮವಾಗಿ ಸಂವಿಧಾನ ರಚನೆಯಾದಾಗ ಅದರ ಮುನ್ನುಡಿ ಯಲ್ಲೇ ಈ ಆಶಯಗಳು ಬಿಂಬಿತವಾಗಿದ್ದವು ಎಂದು ಅವರು ತಿಳಿಸಿದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿ ತನ್ನದೇ ಆದ ಕೊಡುಗೆ ನೀಡಿದ್ದ. ಆಗ ಜನಸಂಖ್ಯೆ 32 ಕೋಟಿ ಆಗಿತ್ತು. ಈಗ ಜನಸಂಖ್ಯೆ 132 ಕೋಟಿ ಆಗಿರುವ ಸಂದರ್ಭದಲ್ಲಿ, ಸಮಾಜಕ್ಕೆ ಕೊಡುಗೆ ನೀಡುವ ಅಗತ್ಯ ಅಂದಿಗಿಂತ ಇಂದು ಹೆಚ್ಚಾಗಿದೆ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದವರು ಹೇಳಿದರು.
ಜಿಲ್ಲಾ ಮತ್ತು ಸತ್ರ ನ್ಯಾಯಮೂರ್ತಿ ರಾಜೇಶ್ವರಿ ಎನ್. ಹೆಗಡೆ ಮಾತನಾಡಿ, ವಕೀಲರು ಹೊಸ ಕಾಯ್ದೆಗಳು ಹಾಗೂ ತಿದ್ದುಪಡಿಗಳನ್ನು ಹೆಚ್ಚಾಗಿ ಅರ್ಥ ಮಾಡಿಕೊಂಡಷ್ಟೂ ನ್ಯಾಯಮೂರ್ತಿಗಳು ಉತ್ತಮ ತೀರ್ಪು ನೀಡಲು ನೆರವಾಗುತ್ತದೆ ಎಂದು ಹೇಳಿದರು.
ಅಖಿಲ ಭಾರತ ಅಧಿವಕ್ತಾ ಪರಿಷತ್ ರಾಜ್ಯಾಧ್ಯಕ್ಷ ರವೀಂದ್ರನಾಥ್ ಮಾತನಾಡಿ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪರಿಷತ್ತನ್ನು ಆರಂಭಿಸಲಾಗಿತ್ತು. ರಾಷ್ಟ್ರೀಯ ವಿಚಾರಧಾರೆಯನ್ನು ಕಾನೂನುಗಳಲ್ಲಿ ಅಳವಡಿಕೆ ಕುರಿತು ಪರಿಷತ್ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಹಲವು ಹಂತಗಳಲ್ಲಿ ನ್ಯಾಯ ಕೇಂದ್ರಗಳನ್ನು ಸ್ಥಾಪಿಸಿ, ಬಡವರು ನ್ಯಾಯ ಪಡೆಯಲು ನೆರವಾಗುತ್ತಿದೆ ಎಂದರು.
ಅಖಿಲ ಭಾರತ ಅಧಿವಕ್ತಾ ಪರಿಷತ್ ರಾಜ್ಯ ಉಪಾಧ್ಯಕ್ಷ ವೈ. ಮಂಜಪ್ಪ ಕಾಕನೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಪಿ. ಬಸವರಾಜ್, ಪರಿಷತ್ ರಾಷ್ಟ್ರೀಯ ಸಮಿತಿ ಸದಸ್ಯೆ ಅನಿತ ಉಪಸ್ಥಿತರಿದ್ದರು. ಪರಿಷತ್ ಜಿಲ್ಲಾ ಅಧ್ಯಕ್ಷ ಎಲ್. ದಯಾನಂದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.