ಉತ್ಪಾದನಾ ವೆಚ್ಚಕ್ಕನುಗುಣವಾಗಿ ಏರಿಕೆಯಾಗದ ಪತ್ರಿಕೆಗಳ ದರ

`ದಾವಣಗೆರೆ ನಗರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘ’ ಉದ್ಘಾಟನೆ

ದಾವಣಗೆರೆ, ಡಿ.19- ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಪತ್ರಿಕೆಗಳ ದರ ಏರಿಕೆಯಾಗದ ಕಾರಣ ಪತ್ರಿಕಾ ವಿತರಕರು ಹಾಗೂ ಮಾರಾಟಗಾರರಿಗೆ ಹೆಚ್ಚು ಕಮಿಷನ್ ಸಿಗದಂತಾಗಿದೆ ಎಂದು `ಜನತಾವಾಣಿ’  ಸಂಪಾದಕ ಎಂ.ಎಸ್. ವಿಕಾಸ್ ಹೇಳಿದರು.

ಭಾನುವಾರ ನಗರದ ರೋಟರಿ ಬಾಲಭವನದಲ್ಲಿ `ದಾವಣಗೆರೆ ನಗರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘ’ ಉದ್ಘಾಟಿಸಿ ಅವರು ಮಾತನಾಡಿದರು.

ಕಮೀಷನ್ ಕಡಿಮೆ ಎಂಬ ಕಾರಣಕ್ಕೆ ಪತ್ರಿಕೆ ಹಂಚುವ ಕೆಲಸ ಆಕರ್ಷಣೆ ಕಳೆದುಕೊಂಡಿದೆ. ರಾಜ್ಯ ಮಟ್ಟದ ಪತ್ರಿಕೆಗಳು ಮುಖ ಬೆಲೆ ಹೆಚ್ಚಿಸಿ ಅದಕ್ಕನುಗುಣವಾಗಿ ಕಮಿಷನ್ ನೀಡಿದಾಗ ವಿತರಕರ ಬದುಕಿನಲ್ಲೂ ಬದಲಾವಣೆ ಕಾಣಲು ಸಾಧ್ಯ ಎಂದು ಹೇಳಿದರು.

ಮಾರುಕಟ್ಟೆಗೆ ಅನುಗುಣವಾಗಿ ಎಲ್ಲಾ ಕ್ಷೇತ್ರಗಳೂ ದರ ಏರಿಕೆ ಕಂಡಿವೆ. ಆದರೆ ಪತ್ರಿಕೆಗಳ ದರ ಮಾತ್ರ ನಾಲ್ಕರಿಂದ ಐದು ರೂಪಾಯಿಗಳಿಗೆ ಸೀಮಿತವಾಗಿದೆ. ಪತ್ರಿಕಾ ವಿತರಕರ ಕಳೆದ ಎರಡೂ ವರೆ ದಶಕಗಳ ಪರಿಸ್ಥಿತಿಯೇ ಇಂದಿಗೂ ಇದೆ ಎಂದರು.

ಪತ್ರಿಕಾ ವಿತರಕರ ಅಭಿವೃದ್ಧಿಗಾಗಿ ಸಂಘ ಪ್ರಾರಂಭಿಸಿದ್ದು, ಆ ಮುಖೇನ ಒಗ್ಗಟ್ಟಾಗಿ ಮುನ್ನಡೆದರೆ ಸಂಘದ ಜೊತೆ ನಿಮ್ಮ ಬೆಳವಣಿಗೆಯನ್ನೂ ಕಾಣಬಹುದೆಂದು ಸಲಹೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ. ಬಾವಿ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿರುವ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯ ಸೌಲಭ್ಯ ಕೇವಲ ಪತ್ರಕರ್ತರಿಗಷ್ಟೇ ಅಲ್ಲದೆ ಪತ್ರಿಕಾ ವಿತರಕರಿಗೂ ಸಿಗಲಿದೆ. ಯಾವುದೇ ಕಾರಣಕ್ಕೂ ಪತ್ರಿಕಾ ರಂಗದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದರು.

ಹಿರಿಯ ಪತ್ರಕರ್ತ ಮಂಜುನಾಥ ಗೌರಕ್ಕಳವರ್ ಮಾತನಾಡಿ, ಪತ್ರಿಕಾ ವಿತರಕರು ಪ್ರತಿನಿತ್ಯ ಗಾಳಿ, ಮಳೆ ಎನ್ನದೇ ತಮ್ಮ ಕಾಯಕವನ್ನು ಶ್ರದ್ಧೆಯಿಂದ ನಡೆಸುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಸೌಲಭ್ಯಗಳು ದೊರಕಬೇಕಿದೆ. ಪತ್ರಿಕಾ ವಿತರಕರಿಗೆ ಒಂದೆಡೆ ಶೆಡ್ ಕೊಡುವಂತಹ ಕೆಲಸ ಆಗಬೇಕು ಎಂದರು. 

ಹಿರಿಯ ಪತ್ರಕರ್ತ ನವೀನ್ ಕುಮಾರ್ ಮಾತನಾಡಿ, ಪತ್ರಿಕಾ ವಿತರಕರಿಗೆ ಸೂರು ಸಿಗುವಂತಾಗಬೇಕು ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಪತ್ರಿಕಾ ವಿತರಕರಿಗೆ ಗುರುತಿನ ಪತ್ರ ನೀಡಲಾಯಿತು. ಕಾರ್ಯ ಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇ.ಎಂ. ಮಂಜುನಾಥ, ಪತ್ರಕರ್ತರುಗಳಾದ ಸತೀಶ್, ನಾಗರಾಜ್ ಬಡಿದಾಳ್, ಪ್ರಕಾಶ್, ದಾವಣಗೆರೆ ನಗರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಹೆಚ್. ಚಂದ್ರು, ಉಪಾಧ್ಯಕ್ಷ ಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು.

error: Content is protected !!