2ನೇ ದಿನದ ಮುಷ್ಕರದಲ್ಲಿ ಕೇಂದ್ರ ಸರ್ಕಾರಕ್ಕೆ ಬ್ಯಾಂಕ್ ನೌಕರರ ಎಚ್ಚರಿಕೆ
ದಾವಣಗೆರೆ, ಡಿ.17- ಬ್ಯಾಂಕ್ ಖಾಸಗೀಕರಣ ಮತ್ತು ಬ್ಯಾಂಕಿಂಗ್ ನಿಯಮಾವಳಿಗಳಿಗೆ ತಿದ್ದುಪಡಿ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ, 2ನೇ ದಿನವೂ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ನಗರದ ಮಂಡಿಪೇಟೆ ಕೆನರಾ ಬ್ಯಾಂಕ್ ಶಾಖೆ ಮುಂದೆ ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಖಾಸಗೀಕರಣ ನಿರ್ಧಾರವನ್ನು ಕೈಬಿಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವು ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ನಮ್ಮ ದೇಶದ ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯು ಇಡೀ ವಿಶ್ವಕ್ಕೆ ಮಾದರಿಯಾಗಿದೆ. 1969ರ ನಂತರದ ವರ್ಷಗಳಲ್ಲಿ ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯು ಸರ್ಕಾರದ ಜೊತೆ ಜೊತೆಗೆ ಹೆಜ್ಜೆ ಹಾಕಿ ಆರ್ಥಿಕ ಕ್ರಾಂತಿಯನ್ನೇ ಮಾಡಿದೆ. ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿ ಮಾಡಿದೆ.
ವಿಶ್ವದಲ್ಲೇ ಅತ್ಯಂತ ಬಲಿಷ್ಠ ತಳಪಾಯವನ್ನು ಹೊಂದಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸುವುದರ ಮೂಲಕ ಖಾಸಗಿ ಬಂಡವಾಳಶಾಹಿಗಳ ಕೈಗೊಪ್ಪಿಸುವುದು ಸರಿಯಲ್ಲ. ದೇಶದ ಆಸ್ತಿಗಳನ್ನು ಮಾರಲು ಸರ್ಕಾರಕ್ಕೆ ನೈತಿಕತೆ ಇಲ್ಲ ಎಂದು ಹೋರಾಟಗಾರರು ಹೇಳಿದರು.
ವಾಸ್ತವದಲ್ಲಿ ಬ್ಯಾಂಕ್ ಖಾಸಗೀಕರಣವನ್ನು ವಿರೋಧಿಸಬೇಕಾದವರು ಸಾರ್ವಜನಿಕರು. ಖಾಸಗೀಕರಣವು
ಬ್ಯಾಂಕ್ ಉದ್ಯೋಗಿಗಳಿಗಿಂತ ಈ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಗುರುತರವಾದ ಪರಿಣಾಮ ಬೀರಲಿದೆ.
ಸಾರ್ವಜನಿಕರು ಈ ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. ಇನ್ನು ಮುಂದಾದರೂ ಸರ್ಕಾರಿ ಬ್ಯಾಂಕುಗಳನ್ನು ಉಳಿಸಿಕೊಳ್ಳಲು ಸಾರ್ವಜನಿಕರು ಪಕ್ಷಾತೀತವಾಗಿ ಹೋರಾಟ ಮಾಡಬೇಕು ಎಂದು ಖಾಸಗೀಕರಣ ವಿರೋಧಿಸುತ್ತಿರುವ ಬ್ಯಾಂಕ್ ಸಂಘಟನೆಗಳ ಹೋರಾಟಗಾರರು ಮನವಿ ಮಾಡಿದರು.
ಇಂದಿನ ಮುಷ್ಕರದಲ್ಲಿ ಕೆ.ಎನ್.ಗಿರಿರಾಜ್, ಕೆ.ವಿಶ್ವನಾಥ ಬಿಲ್ಲವ, ಬಿ.ಆನಂದಮೂರ್ತಿ, ಕೆ.ರಾಘವೇಂದ್ರ ನಾಯರಿ, ಕಿರಣ್ ರಜಪೂತ್, ಎಸ್.ಟಿ.ಶಾಂತ ಗಂಗಾಧರ್, ಅಜಿತ್ಕುಮಾರ್ ನ್ಯಾಮತಿ ಮತ್ತಿತರರು ಮುಷ್ಕರ ನಿರತ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದರು.
ಮುಷ್ಕರದ ನೇತೃತ್ವವನ್ನು ಹೆಚ್.ಎಸ್.ತಿಪ್ಪೇಸ್ವಾಮಿ, ದುರುಗಪ್ಪ ಸಿ., ಆರ್.ಆಂಜನೇಯ, ಪರಶುರಾಮ, ಕೆ.ಶಶಿಶೇಖರ್, ಸುಜಯಾ ನಾಯಕ್, ಸುರೇಶ್ ಚೌಹಾಣ್, ಅಣ್ಣಪ್ಪ ನಂದ, ಎಂ.ಎಸ್.ವಾಗೀಶ್, ಶಶಿಕುಮಾರ್,ಮಂಜುನಾಥ್ ಜಿ.ವಿ., ಅನಿಲ್ಕುಮಾರ್, ಅಜಯ್ಕುಮಾರ್, ಎಂ.ಎಂ.ಸಿದ್ದಲಿಂಗಯ್ಯ, ಜ್ಞಾನೇಶ್ವರ್, ಜಗಳೂರು ತಿಪ್ಪೇಸ್ವಾಮಿ, ರಮೇಶ್, ಶಿವಮೂರ್ತಿ ಪೂಜಾರ್, ನಿತ್ಯಾನಂದ ಡೋಂಗ್ರೆ, ಸಿ.ಹೆಚ್.ಎಂ.ದೀಪಾ, ಗೀತಾ, ಸುಮಂತ್ ಭಟ್, ಟಿ.ಕೆ.ಗೊಂಬಿ, ಹೆಚ್.ನಾಗರಾಜ್, ಸುನಂದಮ್ಮ, ಮಂಜುಳಾ ತಣಿಗೆರೆ, ಶಂಭು ಹಿರೇಮಠ, ಕೆ.ಜೆ.ಗಿರೀಶ್, ಮಾಧುರಿ ವ್ಯಾಸ್, ಸುಧಾ, ನಾಗರತ್ನಮ್ಮ, ಅಮೃತ, ಉಷಾ ಎನ್.ಜಿ. ಎಸ್.ಎಸ್.ಕೋರಿ, ಅರ್ಚನಾ ಆಚಾರ್ಯ, ಸರೋಜ ಹೊಸದುರ್ಗ, ಮಂಜುನಾಥ ಹೆಚ್. ನಿಕೇತನ್, ಜಿ.ಎನ್. ಲತಾ, ಎಲ್. ಉಮಾದೇವಿ ಮುಂತಾದವರು ವಹಿಸಿದ್ದರು.