ಮುನ್ನೆಚ್ಚರಿಕೆಯ ಮೂಗುದಾರ ಇದ್ದರೆ ರೋಗ ಬರದು

ಹರಿಹರದಲ್ಲಿ ನ್ಯಾಯಮೂರ್ತಿ ಮಹದೇವ ಕಾನಟ

ಹರಿಹರ, ಡಿ.3 – ಮುನ್ನೆಚ್ಚರಿಕೆ ಎಂಬ ಮೂಗುದಾರ ಕೈಯಲ್ಲಿ ಇದ್ದರೆ ಏಡ್ಸ್ ಸೇರಿದಂತೆ ಇತರೆ ಯಾವುದೇ ರೋಗಗಳು ಬರದಂತೆ ಬದುಕಿನ ಬಂಡಿ ಸಸೂತ್ರವಾಗಿ ಸಾಗುತ್ತದೆ ಎಂದು ನಗರದ ಒಂದನೇ ಹೆಚ್ಚುವರಿ ಸಿವಿಲ್  ನ್ಯಾಯಾಧೀಶರಾದ ಮಹದೇವ ಕಾನಟ ಹೇಳಿದ್ದಾರೆ.

ಸ್ಥಳೀಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಐಸಿಟಿಸಿ ವಿಭಾಗ, ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಕಾನೂನು ಸೇವಾ ಸಮಿತಿ, ವಕೀಲರ ಸಂಘದ ವತಿಯಿಂದ ನಡೆದ ರಾಷ್ಟ್ರೀಯ ಏಡ್ಸ್ ದಿನಾಚರಣೆ ಹಾಗೂ ರಾಷ್ಟ್ರೀಯ ಅಂಗ ನ್ಯೂನತೆ ದಿನಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಭವಿಷ್ಯದ ಸುಖಕ್ಕಿಂತ ಕ್ಷಣಿಕ ಸುಖಕ್ಕೆ ಮಹತ್ವ ವನ್ನು ಕೊಟ್ಟರೆ ಬಾಳಿ ಬದುಕಬೇಕಾದ ಜೀವನವನ್ನು ತಮ್ಮ ಕೈಯ್ಯಾರ ತಾವೇ ಮೊಟಕುಗೊಳಿಸಿಕೊಂಡಂತೆ. ಇಂತಹ ರೋಗಕ್ಕೆ ಬಲಿಯಾದವರು ತಮ್ಮ ಜೀವನಕ್ಕೆ ತೊಂದರೆ ತಂದುಕೊಳ್ಳುವುದರ ಜೊತೆಗೆ ತಮ್ಮನ್ನು ನಂಬಿದವರಿಗೂ ಅಭದ್ರತೆ ಉಂಟಾಗುವಂತಹ ಸಂಚಕಾರವನ್ನು ತಂದುಕೊಳ್ಳುತ್ತಾರೆ ಎಂದು ಹೇಳಿದರು.

ಸರ್ಕಾರ ಏಡ್ಸ್ ರೋಗದಿಂದ ದೂರವಿರುವು ದಕ್ಕೆ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದು, ಜನರು ಕೂಡ ಜಾಗೃತರಾದರೆ ಇಂತಹ ಮಾರಕ ಕಾಯಿಲೆಗಳು ಬರದಂತೆ ತಮ್ಮ ಜೀವನ ನಡೆಸಲು ದಾರಿಯಾಗುತ್ತದೆ ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ಮಾತನಾಡಿ, ಗಂಧದ ಮರ ಡೊಂಕಾದರೂ ಸುಗಂಧಕ್ಕೆ ಕೊರತೆ ಇರುವುದಿಲ್ಲ. ಹಾಗೆ ಮನುಷ್ಯನ ಅಂಗನ್ಯೂನತೆಗೆ ಸಾಧಿಸುವ ಛಲ ಅಡ್ಡಿಯಾಗುವುದಿಲ್ಲ ಎಂದು ಹೇಳಿದರು. 

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ರುದ್ರೇಗೌಡ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಹನುಮನಾಯ್ಕ್, ಡಾ.ಸವಿತಾ, ವಕೀಲ ಮಂಜುನಾಥ್ ದೊಡ್ಡಮನಿ, ವಕೀಲರಾದ ಶುಭ, ಬಿ.ಡಿ.ಮಹಾದೇವಪ್ಪ, ಆಸ್ಪತ್ರೆಯ ಐಸಿಟಿಸಿ ವಿಭಾಗದ ಶೈಲಜಾ ಎ. ಪಾಟೀಲ್, ಲ್ಯಾಬ್ ಟೆಕ್ನೀಷಿಯನ್ ಆಶ್ರಫ್‌ ಆಲಿ, ಶೋಭಾ ದೊಡ್ಡಮನಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

error: Content is protected !!