ಅಂಬೇಡ್ಕರ್ ಈ ದೇಶದಲ್ಲಿ ಹುಟ್ಟದಿದ್ದರೆ ನಮಗೆ ಮತದಾನದ ಹಕ್ಕು ಸಿಗುತ್ತಿರಲಿಲ್ಲ

ಧಾರ್ಮಿಕ ಸಭೆಯಲ್ಲಿ ಡಾ. ಎ.ಬಿ. ರಾಮಚಂದ್ರಪ್ಪ

ಮಲೇಬೆನ್ನೂರು, ಡಿ.3- ಸಾಮಾಜಿಕ ವ್ಯವಸ್ಥೆ ಬದಲಾಗಬೇಕಾದರೆ ಮೊದಲು ಬಡವರು, ದೀನ-ದಲಿತರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕೆಂದು ಪ್ರಗತಿಪರ ಚಿಂತಕ ಹಾಗೂ ನಿವೃತ್ತ ಅಧ್ಯಾಪಕ ಡಾ. ಎ.ಬಿ. ರಾಮಚಂದ್ರಪ್ಪ ಕರೆ ನೀಡಿದರು.

ಕೋಣನತಲೆ ಗ್ರಾಮದ ಶ್ರೀ ಮುಪ್ಪಿ ನಾರ್ಯ ಆಶ್ರಮದಲ್ಲಿ ಐರಣಿ ಹೊಳೆಮಠದ ಶ್ರೀ ಸದ್ಗುರು ಬಸವರಾಜ ದೇಶೀಕೇಂದ್ರ ಸ್ವಾಮೀಜಿ ಪಟ್ಟಾಭಿಷೇಕದ 44ನೇ ವಾರ್ಷಿ ಕೋತ್ಸವ ಹಾಗೂ ಅಖಂಡ ಶಿವಭಜನಾ ಸಪ್ತಾಹ, ತುಲಾಭಾರ ಸೇವೆ, ಶ್ರೀ ಸಿದ್ಧರೂಢರ ಚರಿತ್ರೆ ಪಾರಾಯಣ, ಮಂಗಲ ಕಾರ್ತಿಕೋ ತ್ಸವ, ಅಡ್ಡಪಲ್ಲಕ್ಕಿ ಉತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮಗಳ ಅಂಗವಾಗಿ ಗುರು ವಾರ ಭಕ್ತರ ಕಾಲೋನಿಯಲ್ಲಿ ಹಮ್ಮಿಕೊಂಡಿದ್ದ ಶ್ರೀಗಳವರ ಉತ್ಸವ ಹಾಗೂ ಧರ್ಮಸಭೆ ಯಲ್ಲಿ ಆವರಣದಲ್ಲಿ ಉಪನ್ಯಾಸ ನೀಡಿದರು.

ಅಂಬಾನಿ ಮಗ ಓದುವ ಅಗತ್ಯ ಇಲ್ಲ. ಆದರೆ, ಬಡವರ ಮಕ್ಕಳು ಶಿಕ್ಷಣ ಕಲಿತು ಸಮಾಜದಲ್ಲಿ ಮುಂದೆ ಬರುವ ಅಗತ್ಯತೆ ಇದೆ. ನಾನು ಅಕ್ಷರ ಕಲಿತಿದ್ದರಿಂದ ನನ್ನನ್ನು ಇಲ್ಲಿಗೆ ಕರೆಸಿ ಮಾತನಾಡುವಂತೆ ಹೇಳಿದ್ದಾರೆ. ಒಂದು ವೇಳೆ ನಾನು ಅಕ್ಷರ ಕಲಿಯದಿದ್ದರೆ ಕೂಲಿ ಮಾಡಿಕೊಂಡು ಇರಬೇಕಾಗಿತ್ತೆಂದು ಜನರನ್ನು ಎಚ್ಚರಿಸಿದರು.

ಅಂಬೇಡ್ಕರ್‌ ಅವರು ಈ ದೇಶದಲ್ಲಿ ಹುಟ್ಟದಿದ್ದರೆ ನಮಗೆ ಮತದಾನದ ಹಕ್ಕು ಇರುತ್ತಿರಲಿಲ್ಲ. ಅವರಿಂದಾಗಿ ಎಲ್ಲರಿಗೂ ಸಮಾನತೆಯ ಹಕ್ಕು ಸಿಕ್ಕಿದ್ದು ಹಾಗು ನಾವು-ನೀವು ಇಲ್ಲಿ ಒಟ್ಟಿಗೆ ಕುಳಿತುಕೊಳ್ಳಲು ಸಾಧ್ಯವಾಗಿದೆ ಎಂದರು.

ಧರ್ಮದೊಳಗಿನ ನ್ಯೂನತೆ ಸರಿಯಾ ದಾಗ ನಿಜವಾದ ಸಮಾನತೆ ಬರುತ್ತದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರ ಏಳಿಗೆಗೆ ಮಠ ಗಳು ಶ್ರಮಿಸಬೇಕು. ಹಳ್ಳಿಗಳಲ್ಲಿ ಶೋಷಣೆಗೆ ಒಳಗಾದ ಜನರಿಗೆ ಶಕ್ತಿ ತುಂಬುವ ಕೆಲಸ ಇಂತಹ ಮಠಗಳಿಂದ ಮಾತ್ರ ಸಾಧ್ಯ ಎಂದ ಅವರು, ಜಾತಿ ಉದ್ಧಾರ ಮಾಡುವವರಿಗಿಂತ ಜಾತ್ಯತೀತ ಸಮಾಜ ಕಟ್ಟುವವರೇ ಶ್ರೇಷ್ಠರು ಎಂದು ರಾಮಚಂದ್ರಪ್ಪ ಪ್ರತಿಪಾದಿಸಿದರು.

ಈ ಹಿಂದೆ ನಾಡಿನ ಅನೇಕ ಮಠ-ಮಾನ್ಯಗಳು ಜನರಿಗೆ ನೀಡಿದ ಅಕ್ಷರ ಹಾಗೂ ಅನ್ನ ದಾಸೋಹದಿಂದಾಗಿ ಬಹಳಷ್ಟು ಉತ್ತಮ ಬದುಕು ಕಟ್ಟಕೊಳ್ಳಲು ಸಾಧ್ಯವಾಗಿದೆ ಎಂದು ರಾಮಚಂದ್ರಪ್ಪ ಸ್ಮರಿಸಿದರು.

ಶ್ರೀ ಸದ್ಗುರು ಬಸವರಾಜ ದೇಶಿಕೇಂದ್ರ ಸ್ವಾಮೀಜಿ  ಸಾನ್ನಿಧ್ಯ ವಹಿಸಿದ್ದರು. ಶ್ರೀ ತಿಪ್ಪೇ ಸ್ವಾಮೀಜಿ, ಶ್ರೀ ಬಸವಾನಂದ ಸ್ವಾಮೀಜಿ, ಮಾಜಿ ಛೇರ್ಮನ್‌ ನಾಗಪ್ಪ, ನಾಗೇಂದ್ರಪ್ಪ, ಶಿವಪ್ಪ ಈಸೂರು, ಹರಿಹರ ನಗರಸಭೆ ಮಾಜಿ ಸದಸ್ಯ ನಾಗರಾಜ್‌ ಮೆಹರಾಡೆ, ಪತ್ರಕರ್ತ ಜಿಗಳಿ ಪ್ರಕಾಶ್‌  ಮತ್ತು ಇತರುರ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಬಸವಾಪಟ್ಟಣದ ರಾಘವೇಂದ್ರ ಶಾಲೆಯ ಶಿಕ್ಷಕ ಶಾಂತರಾಜ್‌ ಸ್ವಾಗತಿಸಿ, ವಂದಿಸಿದರು. 

error: Content is protected !!