ರೂಪಾಂತರಿ ಪತ್ತೆ ಮಾಡುವಲ್ಲಿ ಪ್ರಾಮಾಣಿಕತೆ ತೋರಿದ ದೇಶದ ವಿರುದ್ಧ ಕ್ರಮ ಸೂಕ್ತವೇ ?
ಸಿಡ್ನಿ, ನ. 28 – ಕೊರೊನಾ ವೈರಸ್ ರೂಪಾಂತರಿ ಜಾಗತಿಕವಾಗಿ ಹರಡುವುದನ್ನು ತಡೆಯಲು ಹಲವಾರು ದೇಶಗಳು ವೈಮಾನಿಕ ಸಂಪರ್ಕದ ಮೇಲೆ ನಿಷೇಧ ಹೇರಿವೆ. ಆದರೆ, ಈ ರೀತಿಯ ನಿಷೇಧಗಳು ವೈರಸ್ ತಡೆಯಲು ಸಾಧ್ಯವೇ ಎಂಬ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಅಮೆರಿಕ, ಕೆನಡ ಹಾಗೂ ಯುರೋಪಿನ ಹಲವು ದೇಶಗಳು ಆಫ್ರಿಕಾದ ದಕ್ಷಿಣದ 9 ದೇಶಗಳ ಜೊತೆಗಿನ ಸಂಪರ್ಕ ಕಡಿದುಕೊಂಡಿವೆ. ಆಸ್ಟ್ರೇಲಿ ಯಾ ಸಹ ಇದೇ ನಿರ್ಧಾರ ತೆಗೆದುಕೊಂಡಿದೆ.
ಆಫ್ರಿಕಾ ದೇಶಗಳಲ್ಲಿರುವ ಆಸ್ಟ್ರೇಲಿ ಯಾದ ಜನರು ವಾಪಸ್ಸಾಗಬಹುದು. ಆದರೆ, ಅವರು ಹೋಟೆಲ್‌ನಲ್ಲೇ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ದಕ್ಷಿಣ ಆಫ್ರಿಕ, ನಮೀಬಿಯ, ಜಿಂಬಾಬ್ವೆ, ಬೋಟ್ಸ್‌ವಾನಾ, ಲೆಸೊತೊ, ಎಸ್ವಟಿನಿ, ಸೈಚಿಲ್ಲೀಸ್ ಮಲವಿ ಹಾಗೂ ಮೊಜಾಂಬಿಕ್ ದೇಶಗಳು ನಿರ್ಬಂಧಕ್ಕೆ ಒಳಗಾಗಿವೆ. ಆದರೆ, ಬ್ರಿಟನ್, ಜರ್ಮನಿ, ಇಸ್ರೇಲ್, ಹಾಂಕಾಂಗ್ ಹಾಗೂ ಬೆಲ್ಜಿಯಂ ಸೇರಿದಂತೆ, ಹಲವು ದೇಶಗಳಲ್ಲಿ ಈಗಾಗಲೇ ಓಮಿಕ್ರಾನ್ ಪತ್ತೆಯಾಗಿದೆ. ಆಫ್ರಿಕಾದ ದೇಶಗಳ ಮೇಲೆ ನಿರ್ಬಂಧ ಹೇರಿದರೂ ಸಹ, ವೈರಸ್ ಹರಡುವುದನ್ನು ನಿಲ್ಲಿಸಲಾಗದು. ಹೆಚ್ಚೆಂದರೆ ಅದರ ಹರಡುವ ವೇಗ ಕಡಿಮೆ ಮಾಡಬಹುದಷ್ಟೇ ಎಂದು ಪರಿಣಿತರು ತಿಳಿಸಿದ್ದಾರೆ.
ನವೆಂಬರ್ 22ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಓಮಿಕ್ರಾನ್ ಗುರುತಿಸಲಾಗಿತ್ತು. ನವೆಂಬರ್ 9ರಂದು ರೋಗಿಯೊಬ್ಬರಿಂದ ಪಡೆಯಲಾದ ಮಾದರಿಯಲ್ಲಿ ಓಮಿಕ್ರಾನ್ ಪತ್ತೆಯಾಗಿತ್ತು.
ದಕ್ಷಿಣ ಆಫ್ರಿಕಾದ ವೈರಾಣು ಪರಿಣಿತರು ಪ್ರಾಮಾಣಿಕ ಕ್ರಮ ತೆಗೆದುಕೊಂಡು, ದಕ್ಷಿಣ ಆಫ್ರಿಕಾದ ಜಿನೋಮ್ ನಿಯಂತ್ರಣ ಜಾಲಕ್ಕೆ ಮಾಹಿತಿ ನೀಡಿದ್ದರು. ನಂತರ ವಿಶ್ವ ಆರೋಗ್ಯ ಸಂಘಟನೆ ನವೆಂಬರ್ 24ರಂದು ಈ ಬಗ್ಗೆ ಪ್ರಕಟಣೆ ಹೊರಡಿಸಿತ್ತು.
ಹೊಸ ರೂಪಾಂತರಿಯ ವರ್ತನೆ ಇನ್ನೂ ಸ್ಪಷ್ಟವಾಗಿಲ್ಲ. ಓಮಿಕ್ರಾನ್ ವೇಗವಾಗಿ ಹರಡುತ್ತದೆ ಎಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಈ ಕಳವಳ ಇನ್ನೂ ಸಾಬೀತಾಗಿಲ್ಲ.
ರೂಪಾಂತರಿ ಘೋಷಣೆಯಾದ ತಕ್ಷಣ ಉಳಿದ ದೇಶಗಳು ತರಾತುರಿಯಲ್ಲಿ ಪ್ರಯಾಣದ ಮೇಲೆ ನಿಷೇಧ ಹೇರಿರುವುದು ಆಫ್ರಿಕಾದ ವಿಜ್ಞಾನಿಗಳು ಹಾಗೂ ರಾಜಕಾರಣಿಗಳಿಗೆ ಬೇಸರ ತರಿಸಿದೆ. ಮುಂದುವರೆದ ದೇಶಗಳಲ್ಲಿ ಈ ಹಿಂದೆಯೇ ಓಮಿಕ್ರಾನ್ ರೂಪಾಂತರಿ ಸೋಂಕಿತ್ತು. ಆದರೆ, ಆ ದೇಶಗಳು ಪತ್ತೆ ಮಾಡುವಲ್ಲಿ ವಿಫಲವಾಗಿವೆ ಎಂಬ ಅಭಿಪ್ರಾಯವೂ ದಕ್ಷಿಣ ಆಫ್ರಿಕಾದಲ್ಲಿ ಕೇಳಿ ಬರುತ್ತಿದೆ.
ಈ ನಿಷೇಧ ದಕ್ಷಿಣ ಆಫ್ರಿಕಾದ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ಸಾಮಾನ್ಯವಾಗಿ ವರ್ಷಾಂತ್ಯದಲ್ಲಿ ಜಗತ್ತಿನ ಹಲವು ದೇಶಗಳಿಂದ ಜನರು ಈ ದೇಶಕ್ಕೆ ಪ್ರವಾಸಕ್ಕಾಗಿ ಬರುತ್ತಾರೆ.
ಹೊಸ ರೂಪಾಂತರಿಯನ್ನು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಗುರುತಿಸಲಾಗಿದೆ. ಆದರೆ, ರೂಪಾಂತರಿ ಇಲ್ಲೇ ಹುಟ್ಟಿಕೊಂಡಿತೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಓಮಿಕ್ರಾನ್ ಇನ್ನೂ ಹಲವು ದೇಶಗಳಲ್ಲಿ ಕಂಡು ಬಂದಿದೆ. ಪ್ರಯಾಣ ನಿಷೇಧಕ್ಕೆ ಗುರಿಯಾಗದ ದೇಶಗಳಿಂದಲೂ ಸೋಂಕು ಹರಡಿರುವ ಸಾಧ್ಯತೆ ಇದೆ.
ಹೊಸ ರೂಪಾಂತರಿ ಪತ್ತೆ ಮಾಡುವ ದೇಶಗಳ ಮೇಲೆ ಪ್ರಯಾಣ ನಿರ್ಬಂಧ ಹೇರುವುದು ಹಾಗೂ ಆರ್ಥಿಕ ಹೊರೆ ಹೊರಿಸುವುದು ಹೊಸ ರೂಪಾಂತರಿ ಪತ್ತೆ ಮಾಡುವುದಕ್ಕೆ ತಣ್ಣೀರೆರೆಚಿದಂತೆ.
ಸಾಮಾನ್ಯವಾಗಿ ವಿಶ್ವ ಆರೋಗ್ಯ ಸಂಘಟನೆ ಪ್ರಯಾಣ ನಿಷೇಧಕ್ಕೆ ಶಿಫಾರಸ್ಸು ಮಾಡುವುದಿಲ್ಲ. ಲಸಿಕೆ, ಕೈ ತೊಳೆದುಕೊಳ್ಳುವುದು, ದೈಹಿಕ ಅಂತರ, ಮಾಸ್ಕ್ ಹಾಗೂ ಉತ್ತಮ ವಾತಾನುಕೂಲಿ ವ್ಯವಸ್ಥೆ ಡಬ್ಲ್ಯೂ.ಹೆಚ್.ಒ. ಶಿಫಾರಸ್ಸುಗಳಾಗಿವೆ.
ಪ್ರಯಾಣ ನಿಷೇಧ ಹೇರುವ ಬದಲು, ಮೊದಲು ರೂಪಾಂತರಿ ಪತ್ತೆ ಮಾಡಿದ ದೇಶಗಳಿಗೆ ಉತ್ತೇಜನ ನೀಡಬೇಕಿದೆ. ಸಂಶೋಧನೆ ಹಾಗೂ ಶಿಕ್ಷಣ ಸಹಭಾಗಿತ್ವ, ಆರೋಗ್ಯ ವ್ಯವಸ್ಥೆ ಸುಧಾರಣೆ, ಲಸಿಕೆ ಪೂರೈಕೆ ಹೆಚ್ಚಳದಂತಹ ಕ್ರಮಗಳ ಮೂಲಕ ರೂಪಾಂತರಿ ಪತ್ತೆಗೆ ಉತ್ತೇಜನ ನೀಡಬೇಕು ಎಂದು ಪರಿಣಿತರು ತಿಳಿಸಿದ್ದಾರೆ.
ಓಮಿಕ್ರಾನ್ ವಿರುದ್ಧ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಸ್ವಲ್ಪ ಮಟ್ಟಿಗಿನ ರಕ್ಷಣೆ ಸಿಗುವ ಸಾಧ್ಯತೆಯಂತೂ ಇದೆ. ಲಸಿಕಾ ಕಂಪನಿಗಳು 100 ದಿನಗಳಲ್ಲೇ ಓಮಿಕ್ರಾನ್ ಎದುರಿಸುವಂತಹ ಲಸಿಕೆ ರೂಪಿಸಲು ಸಾಧ್ಯ ಎಂದು ತಿಳಿಸಿವೆ.
ಓಮಿಕ್ರಾನ್ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಪತ್ತೆ ಮಾಡಲು ಇನ್ನೂ ಸಮಯ ಬೇಕಾಗಿದೆ. ಆದರೆ, ಜಾಗತಿಕ ಸಮುದಾಯ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ರೂಪಾಂತರಿ ಹಂಚಿಕೊಂಡ ದೇಶಗಳಿಗೆ ಶಿಕ್ಷಿಸದೇ ಉತ್ತೇಜನ ನೀಡುವ ಅಗತ್ಯವಿದೆ.