ಹರಿಹರ, ಆ.30- ನಗರದ ಬೈಪಾಸ್ ಬಳಿ ಇರುವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಾಮಿಗೆ ಶ್ರಾವಣ ಮಾಸದ ಕೊನೆಯ ಸೋಮವಾರದ ನಿಮಿತ್ಯ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಬಿ. ಮಂಜುನಾಥ್ ಮಾತನಾಡಿ, ದೇವಸ್ಥಾನವು ಬಹಳ ಪುರಾತನ ಕಾಲದಿಂದಲೂ ಇದ್ದು, ದೇವಸ್ಥಾನ ಬಹಳ ಚಿಕ್ಕದಾಗಿದ್ದರಿಂದ ಮೊದಲಿನಿಂದಲೂ ನಾಗಪ್ಪ ಸ್ವಾಮಿಗೆ ಪೂಜೆಯನ್ನು ಸಲ್ಲಿಸುತ್ತಾ ಬಂದಿದ್ದು, ಇದನ್ನು ದೊಡ್ಡ ಪ್ರಮಾಣದಲ್ಲಿ ಕಟ್ಟುವುದಕ್ಕೆ ಸಮಿತಿಯ ವತಿಯಿಂದ ಎರಡೂವರೆ ಗುಂಟೆ ಸ್ಥಳವನ್ನು ಖರೀದಿಸಿ ದೇವಸ್ಥಾನ ನಿರ್ಮಾಣಕ್ಕಾಗಿ ವ್ಯವಸ್ಥೆ ಮಾಡುತ್ತಿದ್ದ ಸಮಯದಲ್ಲಿ ಪುರಾತನ ಲಿಪಿಯಲ್ಲಿ ಬರೆದಿರುವ ಕಲ್ಲು ಸಿಕ್ಕಿದೆ.
ಅದರಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ಎಂದು ನಮೂದಾಗಿದೆ. ಇನ್ನು ಮುಂದೆ ಈ ಸ್ಥಳದಲ್ಲಿ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಹನಗವಾಡಿ ಗ್ರಾಮಸ್ಥರು ಒಮ್ಮತದ ತೀರ್ಮಾನ ಮಾಡಿದ್ದು, ದೇವಸ್ಥಾನ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಯಿತು ಎಂದು ಹೇಳಿದರು. ಅನ್ನ ಸಂತರ್ಪಣೆ ಕಾರ್ಯಕ್ಕೆ ಸಮಾಜ ಸೇವಕ ಎನ್.ಹೆಚ್. ಶ್ರೀನಿವಾಸ್ ನಂದಿಗಾವಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ದೇವೇಂದ್ರಪ್ಪ, ಕಾರ್ಯದರ್ಶಿ ಎಸ್.ಕರಿಬಸಪ್ಪ, ಖಜಾಂಚಿ ಶಿವಕುಮಾರ್ ಸ್ವಾಮಿ, ವಿಜಯಕುಮಾರ್ ಹುಲ್ಲುಮನಿ, ಎಸ್.ಎಸ್. ಸಿದ್ದಪ್ಪ, ರುದ್ರಮುನಿ, ಬಿ.ಯು. ನರೇಂದ್ರ, ಎಸ್.ಎಂ. ಮಂಜಪ್ಪ, ಎಸ್.ಎಂ. ರೇವಣಸಿದ್ದಪ್ಪ, ಸಿ.ಎನ್. ಮಂಜು, ಎಸ್.ಜೆ. ಗುರುಶಾಂತಪ್ಪ, ಶಿವಪ್ಪ, ಶಿವಕುಮಾರ್ ಇನ್ನಿತರರಿದ್ದರು.