ಹಳ್ಳದಲ್ಲಿ ಟ್ರ್ಯಾಕ್ಟರ್ ಪಲ್ಟಿ: ಭತ್ತ ನೀರು ಪಾಲು

ದಾವಣಗೆರೆ, ನ.28- ಚನ್ನಗಿರಿ ತಾಲ್ಲೂಕಿನ ದೊಡ್ಡಘಟ್ಟ-ಚಿರಡೋಣಿ ಗ್ರಾಮದ ನಡುವಿನ ರಸ್ತೆಯ ಹಳ್ಳದಲ್ಲಿ ಭತ್ತ ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾದ ಘಟನೆ ನಡೆದಿದೆ.

ಕಳೆದ ವಾರ ಸುರಿದ ಮಳೆಯಿಂದ ದೊಡ್ಡ ಘಟ್ಟ, ಚಿರಡೋಣಿ ಹಳ್ಳ ತುಂಬಿ ಹರಿಯುತ್ತಿದ್ದು, ಹಳ್ಳದ ಸೇತುವೆ ಮೇಲೆ ಸುಮಾರು ಮೂರು ಅಡಿಯಷ್ಟು ನೀರು ಹರಿಯುತ್ತಿದೆ. ಇದರ ನಡುವೆ ಚಿರಡೋಣಿ ಗ್ರಾಮದಿಂದ ಆನಂದ್ ಎಂಬ ರೈತ ಟ್ರ್ಯಾಕ್ಟರ್ ನಲ್ಲಿ ಭತ್ತ ತುಂಬಿಕೊಂಡು ಬರುವ ಮಾರ್ಗದಲ್ಲಿ ಹಳ್ಳ ದಾಟುವಾಗ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಹಳ್ಳದಲ್ಲಿ ಪಲ್ಟಿಯಾಗಿದೆ. ಪರಿ ಣಾಮ ಗಾಡಿಯಲ್ಲಿ ಇದ್ದ ಅರ್ಧದಷ್ಟು ಭತ್ತ ನೀರು ಪಾಲಾಗಿದ್ದು, ಇನ್ನೂ ಉಳಿದ ಅರ್ಧ ದಷ್ಟು ಭತ್ತವನ್ನು ಸ್ಥಳೀಯ ರೈತರ ನೆರವಿನಿಂದ ಮತ್ತೊಂದು ಟ್ರ್ಯಾಕ್ಟರ್‌ನಲ್ಲಿ ತುಂಬಿದ್ದಾರೆ.

ಕಳೆದ ತಿಂಗಳು ಇದೇ ಹಳ್ಳದಲ್ಲಿ ಭತ್ತ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿತ್ತು. ನೀರಿನ ಸೆಳೆತಕ್ಕೆ ಯುವಕನೊಬ್ಬ ಕೊಚ್ಚಿಕೊಂಡು ಹೋಗಿ, ಇದುವರೆಗೂ ಮೃತದೇಹ ಸಿಕ್ಕಿಲ್ಲ. ಆದ್ದರಿಂದ ಕೂಡಲೇ ಈ ಹಳ್ಳಕ್ಕೆ ಮೇಲ್ಸೇತುವೆ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

error: Content is protected !!