ಸಚಿವರ ಉಡಾಫೆ ಹೇಳಿಕೆಗಳಿಗೆ ಯುವ ಕಾಂಗ್ರೆಸ್‌ ಪ್ರತಿಭಟನೆ

ಆರಗ, ಕತ್ತಿ, ಸಿದ್ದೇಶ್ವರ ಹೇಳಿಕೆಗಳ ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್‌ ಕೊಂಡಜ್ಜಿ ಆಕ್ರೋಶ

ದಾವಣಗೆರೆ, ಆ.29- ಮೈಸೂರಿನ ಯುವತಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಉಮೇಶ್ ಕತ್ತಿ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ಅವರುಗಳು ನೀಡಿರುವ ಉಡಾಫೆ ಹೇಳಿಕೆಗಳನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ರಾಜ್ಯದ ಬಿಜೆಪಿ ಸರ್ಕಾರ ಮಹಿಳೆಯರ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ. ಮೈಸೂರಿನಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ನಂತರ ಅದನ್ನು ಖಂಡಿಸಬೇಕಾದ್ದು ಕರ್ತವ್ಯ. ಆದರೆ, ಅದನ್ನು ಬಿಟ್ಟು, ಆ ಯುವತಿ ಏಕೆ ಅಲ್ಲಿಗೆ ಹೋಗಬೇಕಿತ್ತು ಎಂಬ ಗೃಹ ಸಚಿವರ ಹೇಳಿಕೆ ಮಹಿಳೆಯ ರನ್ನು ಇವರು ಯಾವ ರೀತಿ ರಕ್ಷಣೆ ಮಾಡುತ್ತಿದ್ದಾರೆ ಅನ್ನುವ ಮನೋಭಾವನೆ ತೋರಿಸುತ್ತದೆ ಎಂದು ಟೀಕಿಸಿದರು. 

ನಿರ್ಜನ ಪ್ರದೇಶದಲ್ಲಿ ಮಹಿಳೆಯರು ಓಡಾಟ ಮಾಡುವಂತಿಲ್ಲ ಎಂದು ಆದೇಶ ಮಾಡುವ ಸರ್ಕಾರ, ಅವರ ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಇನ್ನೂ ಸಚಿವ ಉಮೇಶ್ ಕತ್ತಿ ಅವರು ಗ್ಯಾಂಗ್ ರೇಪ್ ಸಾಮಾನ್ಯ ಎಂದು ಹೇಳುತ್ತಾರೆ. ಇದನ್ನೆಲ್ಲಾ ನೋಡಿದರೆ ಬಿಜೆಪಿಯ ಈ ನಾಯಕರು ಉಡಾಫೆ ಮಾತುಗಳನ್ನು ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಸಂಸದ ಜಿ.ಎಂ. ಸಿದ್ದೇಶ್ವರ ಈ ಮೊದಲು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಿದರೆ ನಡೆದುಕೊಂಡು ಓಡಾಡಿ ಎಂದರು. ನಂತರ ಪೆಟ್ರೋಲ್-ಡೀಸೆಲ್ ಹಾಕಿಸಲು ಹಣವಿಲ್ಲದಿದ್ದರೆ ನನ್ನ ಬಳಿ ಬನ್ನಿ ಎಂದರು. ಈಗ ಯುವತಿಯ ಅತ್ಯಾಚಾರದ ಬಗ್ಗೆ ಪ್ರಶ್ನಿಸಿದರೆ ನನಗೆ ಮಾಹಿತಿಯೇ ಇಲ್ಲ ಎನ್ನುತ್ತಿರುವುದನ್ನು ನೋಡಿದರೆ ಸಂಸದರು ತಾವು ಜನಪ್ರತಿನಿಧಿ ಎಂಬುದನ್ನು ಮರೆತಂತಿದೆ ಎಂದು ನಿಖಿಲ್ ಕಿಡಿಕಾರಿದರು.

ಮಹಿಳೆಯರ ಬಗ್ಗೆ ದೊಡ್ಡ ಭಾಷಣ ಮಾಡುವ ಬಿಜೆಪಿ ನಾಯಕರುಗಳು ಅವರ ರಕ್ಷಣೆ ವಿಷಯದಲ್ಲಿ ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ, ಮಹಿಳೆಯರಿಗೆ ರಕ್ಷಣೆ ನೀಡಬೇಕಾದ ಸರ್ಕಾರವೇ ಅವರಿಗೆ ಕಡಿವಾಣ ಹಾಕಲು ಹೊರಟಿರುವುದು ವಿಪರ್ಯಾಸ  ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸವಿತಾ ರಘು ಹೇಳಿದರು.

ಜಿಲ್ಲಾ ಯುವ ಕಾಂಗ್ರೆಸ್ ಉಸ್ತುವಾರಿ ಇಲಾಹಿ ಸಿಕಂದರ್, ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಮೋಹಿನುದ್ದಿನ್ ಮತ್ತಿತರರು ಮಾತನಾಡಿದರು. 

ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಜಿತ್, ವಿನಯ್ ಜೋಗಪ್ಪನವರ್, ಇಮ್ರಾನ್ ಖಾನ್, ವಾಜಿದ್, ದಾವಣಗೆರೆ ದಕ್ಷಿಣ ಅಧ್ಯಕ್ಷ ಇರ್ಫಾನ್, ಉಪಾಧ್ಯಕ್ಷೆ ಹಬೀಬಾ ಉನ್ನೀಸಾ, ಸಾಮಾಜಿಕ ಜಾಲತಾಣ ರಾಜ್ಯ ಕಾರ್ಯದರ್ಶಿ ಕೆ. ಎಲ್.ಹರೀಶ್ ಬಸಾ ಪುರ, ಮುಖಂಡರಾದ ನವೀನ್ ನಾಲವಾಡಿ, ಜಬಿವುಲ್ಲಾ, ತಿಪ್ಪೇಶ್, ವಿನೋದ್ ಮತ್ತಿತರರು ಭಾಗವಹಿಸಿದ್ದರು. 

error: Content is protected !!