ಕಾರ್ಯಕ್ರಮವೊಂದರಲ್ಲಿ ಶ್ರೀ ಸಂಗನಬಸವ ಸ್ವಾಮೀಜಿಯೊಂದಿಗೆ ಶರಣರು
ಚಿತ್ರದುರ್ಗ, ನ. 23 – ಉತ್ತರ ಕರ್ನಾಟಕ ಭಾಗದಲ್ಲಿ ಹಾಲಕೆರೆಯ ಡಾ. ಸಂಗನಬಸವ ಮಹಾಸ್ವಾಮಿಗಳು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಕ್ರಾಂತಿ ಮಾಡಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.
ರೋಣ ತಾಲ್ಲೂಕಿನ ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಲಿಂಗೈಕ್ಯ ಡಾ.ಸಂಗನಬಸವ ಮಹಾಸ್ವಾಮಿಗಳ ಅಂತಿಮ ದರ್ಶನ ಪಡೆದು, ಗೌರವ ಸಲ್ಲಿಸಿ ಮಾತನಾಡಿದ ಶ್ರೀಗಳು, ಶ್ರೀಮಠದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಕೀರ್ತಿ ಅವರದು ಎಂದು ಹೇಳಿದ್ದಾರೆ.
ಸಂಘಟನಾ ಚತುರರಾಗಿ ಹಳ್ಳಿ ಹಳ್ಳಿಗಳಲ್ಲಿ ಸಂಚಾರ ಮಾಡುತ್ತಾ ಬಸವ ತತ್ವವನ್ನು ಪ್ರಚಾರ ಮಾಡಿದರು. ಅವರದು ಸಮಾಜಮುಖಿ ಕಾರ್ಯ. ಧಾರ್ಮಿಕ, ಸಾಮಾಜಿಕ ಪರಿಕಲ್ಪನೆಯಲ್ಲಿ ಸಾಗಿದವರು ಎಂದು ಶರಣರು ಹೇಳಿದರು. ಶ್ರೀಗಳು ಅನ್ನ ದಾಸೋಹ, ಅಕ್ಷರ ದಾಸೋಹ, ಜ್ಞಾನ ದಾಸೋಹದ ಮೂಲಕ ಸಮಾಜವನ್ನು ಕಟ್ಟುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರು ಎಂದರು.
ಹಾವೇರಿ ಹುಕ್ಕೇರಿ ಮಠದ ಉತ್ತರಾಧಿಕಾರಿಗಳಾದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮಿಗಳು, ಶ್ರೀ ಸದಾಶಿವ ಸ್ವಾಮಿಗಳು, ಬೈಲಹೊಂಗಲ ಮೂರು ಸಾವಿರ ಮಠದ ಶ್ರೀಗಳು, ಮಣಕವಾಡ ಶ್ರೀಗಳು, ಅಭಿನವ ಮೃತ್ಯುಂಜಯ ಶ್ರೀಗಳು, ಹಾವೇರಿ ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮಿಗಳು, ಅಥಣಿ ಗಚ್ಚಿನಮಠದ ಶ್ರೀ ಶಿವ ಬಸವ ಸ್ವಾಮಿಗಳು, ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಬ್ಯಾಡಗಿ ಮುಪ್ಪಿನ ಸ್ವಾಮಿ ವಿರಕ್ತಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ತಿಳವಳ್ಳಿಯ ಶ್ರೀ ಬಸವ ನಿರಂಜನ ಸ್ವಾಮಿಗಳು ಉಪಸ್ಥಿತರಿದ್ದರು.