ಹರಪನಹಳ್ಳಿ, ನ.21- ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವರ ಅಗ್ನಿಕುಂಡ ಹಾಯುವ ಧಾರ್ಮಿಕ ಕಾರ್ಯಕ್ರಮ ಭಾನುವಾರ ಸಂಜೆ ಜರುಗಿತು.
ಪಟ್ಟಣದ ಮೇಗಳಪೇಟೆಯಲ್ಲಿರುವ ಗುಗ್ಗುಳ ವೀರಭದ್ರೇಶ್ವರ ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ವೀರಭದ್ರೇಶ್ವರ ದೇವರ ಉತ್ಸವ ಮೂರ್ತಿಯನ್ನು ಇಟ್ಟುಕೊಂಡು ಹಿರೇಕೆರೆಯಲ್ಲಿ ಗಂಗಾ ಪೂಜೆ ನೆರವೇರಿಸಿದ ನಂತರ ನಂದಿಕೋಲು, ಸಮಾಳ ಸೇರಿದಂತೆ ಸಕಲ ವಾದ್ಯಗಳೊಂದಿಗೆ ಹಳೇ ಬಸ್ ನಿಲ್ದಾಣದಲ್ಲಿರುವ ವೀರಭದ್ರೇಶ್ವರ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಅದ್ಧೂರಿಯಾಗಿ ಕರೆ ತಂದು, ದೇವಸ್ಥಾನ ಮುಂಭಾಗದಲ್ಲಿ ಅಗ್ನಿ ಕುಂಡದಲ್ಲಿ ಜೋಡಿಸಲಾದ ಕಟ್ಟಿಗೆಗೆ ಪುರವಂತರು ಧಾರ್ಮಿಕ ವಿಧಿ, ವಿಧಾನಗಳ ಮೂಲಕ ಪೂಜೆ ನೆರವೇರಿಸಿ ಅಗ್ನಿ ಸ್ವರ್ಶ ಆದ ನಂತರ ಭಕ್ತರಿಗೆ ಅವಕಾಶ ಮಾಡಿ ಕೊಡಲಾಯಿತು.
ಈ ಸಂದರ್ಭದಲ್ಲಿ ಜಿ.ಎಂ ಗಿರೀಶ ಸ್ವಾಮಿ ಮತ್ತು ಪಿ.ಬಿ ಗೌಡ, ಪ್ರವೀಣ್ ಕುಮಾರ್, ಶಶಿಧರ್ ಪೂಜಾರ್ ಕೌಟಿ ವಾಗೀಶ್, ಪಿ. ಮಹೇಶ್, ಮಂಜುನಾಥ್ ಆಚಾರ್ಯ ದಂಡೆಪ್ಳರ್ ವೀರಭದ್ರ ಸೇರಿದಂತೆ ಪೂಜಾರ್ ವಂಶಸ್ಥರು ಇದ್ದರು.