ರೈತರಿಂದ ಪರ್ಯಾಯ ಚಿಂತನೆ ; ಭದ್ರೆಗೆ ಬಾಗಿನ ಅರ್ಪಿಸಿದ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ
ಬಿ.ಆರ್. ಪ್ರಾಜೆಕ್ಟ್, ಆ.18- ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಜಲಾಶಯಕ್ಕೆ ಮಂಗಳವಾರ ಭದ್ರಾ ಯೋಜನಾ ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳ ವತಿಯಿಂದ ಗಂಗೆಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಹಾಮಂಡಳದ ಅಧ್ಯಕ್ಷ ಹೊಸಹಳ್ಳಿಯ ವೈ. ದ್ಯಾವಪ್ಪ ರೆಡ್ಡಿ ಮಾತನಾಡಿ, ಭದ್ರಾ ಅಚ್ಚುಕಟ್ಟಿನಲ್ಲಿ ಭತ್ತ ಬೆಳೆಯುತ್ತಿದ್ದ 14 ಸಾವಿರ ಹೆಕ್ಟೇರ್ ಪ್ರದೇಶ ಈಗ ಅಡಿಕೆ ತೋಟವಾಗಿದೆ. ಇನ್ನು ಮುಂದೆ ರೈತರು ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ಚಿಂತನೆ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಅಪ್ಪರ್ ಭದ್ರಾ ಕಾಲುವೆಗೆ ಹರಿಸಬೇಕಾದ 29 ಟಿಎಂಸಿ ನೀರನ್ನು ತುಂಗಾ ಜಲಾಶಯದಿಂದಲೇ ಲಿಫ್ಟ್ ಮಾಡುವ ಬಗ್ಗೆ ಸರ್ಕಾರ ಹೊಸ ಡಿಪಿಆರ್ ಸಿದ್ಧಪಡಿಸಬೇಕೆಂದು ಒತ್ತಾಯಿಸಿದ ಅವರು, ಅಚ್ಚುಕಟ್ಟಿನ ರೈತರಿಗೆ ತೊಂದರೆ ಮಾಡಿ ಅಪ್ಪರ್ ಭದ್ರಾ ಕಾಲುವೆಗೆ ನೀರು ಹರಿಸಲು ಅವಕಾಶ ನೀಡುವುದಿಲ್ಲ ಎಂದರು.
ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಎಫ್‌ಐಸಿ ಹಾಗೂ ಎಫ್‌ಡಿ ಮತ್ತು ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ಒದಗಿಸಬೇಕು. ಅಲ್ಲದೆ, ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಕಾಲುವೆಗಳ ನಿರ್ವಹಣೆ ಜವಾಬ್ದಾರಿ ನೀಡಲಿ ಎಂದು ರೆಡ್ಡಿ ಆಗ್ರಹಿಸಿದರು.
ಮಹಾಮಂಡಳದ ಉಪಾಧ್ಯಕ್ಷ ಆರ್. ಶ್ರೀನಿವಾಸ್, ನಿರ್ದೇಶಕರಾದ ಬೆಳಲಗೆರೆ ದೇವೇಂದ್ರಪ್ಪ, ಗೊಲ್ಲರಹಳ್ಳಿ ಹರೀಶ್, ಕಡ್ಲೆಗೊಂದಿ ಹನುಮಂತ ರೆಡ್ಡಿ, ಗೋಪನಹಾಳ್ ಬಂಧು, ತರೀಕೆರೆಯ ಮಲ್ಲಿಕಾರ್ಜುನಪ್ಪ, ಗಂಗನರಸಿ ಸಿದ್ದಪ್ಪ, ಹಾಲಿವಾಣದ ಸಣ್ಣ ಪರಮೇಶ್ವರಪ್ಪ ಮತ್ತು ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರಾದ ಕೊಮಾರನ ಹಳ್ಳಿಯ ಜಿ. ಮಂಜುನಾಥ್ ಪಟೇಲ್, ಮಲೇಬೆನ್ನೂರಿನ ಬಿ. ವೀರಯ್ಯ, ಭಾನುವಳ್ಳಿಯ ಜೆ. ಗುತ್ತ್ಯೆಪ್ಪ, ಬಿ.ಎನ್. ಕೆಂಚಪ್ಪ, ಹೆಚ್. ನಾರಾಯಣಪ್ಪ, ವಾಸನದ ವೀರನಗೌಡ, ಕೆ.ಎನ್. ಹಳ್ಳಿಯ ಗುಬ್ಬಿ ರಂಗನಾಥ್, ಹೆಚ್. ದಿವಾಕರಪ್ಪ, ಜಿಗಳಿ ಆನಂದಪ್ಪ, ಕೊಕ್ಕನೂರು ಸೋಮಶೇಖರ್, ಹಳ್ಳಿಹಾಳ್ ವೀರನಗೌಡ, ಕುಣೆಬೆಳಕೆರೆ ರುದ್ರಪ್ಪ, ನಂದಿತಾವರೆ ಮುರುಗೇಂದ್ರಯ್ಯ ಇನ್ನಿತರರು ಹಾಜರಿದ್ದರು.