ಹರಿಹರದ ಬಿಇಒ ಬಿ.ಸಿ. ಸಿದ್ದಪ್ಪ ಮನವಿ
ಹರಿಹರ, ಆ.17- ಸರ್ಕಾರಿ ಶಾಲೆಗಳಿಗೆ ಸ್ಥಳೀಯ ಸಂಸ್ಥೆಗಳಾದ ಗ್ರಾಪಂ, ತಾಪಂ, ಜಿಪಂ, ಪಪಂ, ಪುರಸಭೆ, ನಗರಸಭೆ, ಪಾಲಿಕೆಗಳಿಂದ ಪಾಠೋಪಕರಣಕ್ಕಾಗಿ ಅನುದಾನವನ್ನು ಆದ್ಯತೆ ಮೇರೆಗೆ ನೀಡಬೇಕೆಂದು ಬಿಇಒ ಬಿ.ಸಿ. ಸಿದ್ದಪ್ಪ ಹೇಳಿದರು.
ತಾಲ್ಲೂಕಿನ ಧೂಳೆಹೊಳೆ ಗ್ರಾಮದ ಸ.ಹಿ.ಪ್ರಾ. ಶಾಲೆಗೆ ಗ್ರಾ.ಪಂ. ನಿಂದ ನೀಡಿದ 80 ಸಾವಿರ ರೂ. ಮೌಲ್ಯದ 50 ಇಂಚಿನ ಟಿವಿ ಹಾಗೂ ಕೆನಾನ್ ಪ್ರಿಂಟರ್ ಉಪಕರಣಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.
ಆಯಾ ಭಾಗದ ಸರಕಾರಿ ಶಾಲೆಗಳ ಅಭಿವೃದ್ಧಿಯ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳ ಮೇಲಿದೆ ಎಂದರು. ಇತ್ತೀಚಿಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ರಾಜ್ ಇಲಾಖೆಯಿಂದ ಮಹತ್ವದ ಸುತ್ತೋಲೆ ಹೊರಡಿಸಲಾಗಿದೆ. ಆ ಪ್ರಕಾರ ಆಯಾ ಗ್ರಾ.ಪಂ. ವ್ಯಾಪ್ತಿಯ ಸರಕಾರಿ ಶಾಲೆಗಳಿಗೆ ಗ್ರಾ.ಪಂ. ಪಿಡಿಒ, ಅಧ್ಯಕ್ಷರು, ಸದಸ್ಯರು ತಿಂಗಳಲ್ಲಿ ಎರಡು ಬಾರಿ ಭೇಟಿ ನೀಡಬೇಕು. ಕೊರತೆ ಇರುವ ಭೌತಿಕ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು ಎಂದರು.
ಗ್ರಾ.ಪಂ. ಕಾರ್ಯದರ್ಶಿ ಮೌನೇಶಾಚಾರ್ ಮಾತನಾಡಿ, 15ನೇ ಹಣಕಾಸು ಯೋಜನೆಯಡಿ ಈ ಶಾಲೆಗೆ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡುತ್ತೇವೆ. ಶಾಲೆ ಸುತ್ತಲೂ ಸ್ವಚ್ಛ, ನೈರ್ಮಲ್ಯಯುತ ವಾತಾವರಣ ಸೃಷ್ಟಿಸುತ್ತೇವೆ ಎಂದರು.
ಸಿಆರ್ಪಿ ಮಂಜುನಾಥ್ ಮಾತನಾಡಿ, ಸರಕಾರಿ ಶಾಲೆಗಳು ಅಭಿವೃದ್ಧಿಯಾದರೆ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಶಾಲಾಭಿವೃದ್ಧಿಗೆ ಸ್ಥಳೀಯ ಸಂಸ್ಥೆಗಳ ಜೊತೆಗೆ ಹಳೆ ವಿದ್ಯಾರ್ಥಿಗಳು, ದಾನಿಗಳ ಸಹಕಾರ ಅಗತ್ಯವಾಗಿದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್. ನಿಜಲಿಂಗಪ್ಪ ಮಾತನಾಡಿ, ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆ ನಡೆಯುತ್ತದೆ ಎಂದು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಹೇಳಿರುವುದು ಶಾಲೆಗಳ ಮಹತ್ವವನ್ನು ಸಾರುತ್ತದೆ. ಸರ್ಕಾರಿ ಶಾಲೆಗಳು ಬಲಗೊಂಡರೆ ದೇಶವು ದೃಢವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ನಂದಿಗಾವಿ ಗ್ರಾ.ಪಂ. ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷೆ ಗೀತಮ್ಮ, ಸದಸ್ಯರಾದ ಚನ್ನಯ್ಯ ಸ್ವಾಮಿ, ಮುಖ್ಯ ಶಿಕ್ಷಕ ಎ. ಬಸವರಾಜ್, ಸರ್ಕಾರಿ ನೌಕರರ ಸಂಘದ ಖಜಾಂಚಿ ಶಿವಮೂರ್ತಿ, ಶಿಕ್ಷಕರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶರಣಕುಮಾರ ಹೆಗಡೆ, ಉಮೇಶ್, ಕೆ. ಮಂಗಳ, ಲೈಕಾ ಬಾನು, ಟಿ.ವಿ. ಹೇಮಾ ಇನ್ನಿತರರಿದ್ದರು.