ಆರ್. ಶಿವಕುಮಾರಸ್ವಾಮಿ ಕುರ್ಕಿ
ದಾವಣಗೆರೆ, ಮಾ. 28- ನಾಟಕಗಳಲ್ಲಿ ಅದ್ಭುತವಾಗಿ ಅಭಿನಯಿಸುವ ನಟರು ತುಂಬಾ ಕಷ್ಟದ ಬದುಕು ನಡೆಸುತ್ತಿದ್ದಾರೆ. ಪ್ರೇಕ್ಷಕರನ್ನು ಮನರಂಜಿಸುವ ಕಲಾವಿದರಿಗೆ ಆರ್ಥಿಕ ಸಹಾಯ ಒದಗಿಸುವ ಸಲುವಾಗಿ ಸಂಘ-ಸಂಸ್ಥೆಗಳು ಅಲ್ಲಲ್ಲಿ ನಾಟಕ ಪ್ರದರ್ಶನಗಳನ್ನು ಏರ್ಪಡಿಸಲು ರಂಗಾಸಕ್ತರು ಮುಂದಾಗಬೇಕಿದೆ ಎಂದು ರಂಗಪರಿಚಾರಕ ಆರ್. ಶಿವಕುಮಾರಸ್ವಾಮಿ ಕುರ್ಕಿ ಅವರು ಆಶಯ ವ್ಯಕ್ತಪಡಿಸಿದರು.
ಅವರು, ನಗರದ ಗ್ರಂಥಸರಸ್ವತಿ ಪ್ರತಿಭಾ ರಂಗವು ವಿದ್ಯಾನಗರ ಉದ್ಯಾನವನದ ಕಾವ್ಯ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮಹಾಭಾರತ ಪದ್ಮವ್ಯೂಹ ಎಂಬ ನಾಟಕ ಪ್ರದರ್ಶನದಲ್ಲಿ ಮಾತನಾಡಿದರು.
ನಾವೂ ನೀವೂ ರಂಗ ತಂಡದ ರಂಗಕರ್ಮಿ ಸಿದ್ಧ ರಾಜು ಮಾತನಾಡಿ, ನಗರಕ್ಕೆ ಒಂದು ರಂಗಮಂದಿರದ ಅವಶ್ಯಕತೆಯಿದ್ದು, ಈ ಒಂದು ಕೊರತೆ ಬಹುದಿನಗಳಿಂದಲೂ ಇದೆ. ಇದರ ಪರಿಹಾರ, ಸ್ಮಾರ್ಟ್ ಸಿಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯು ಸೂಕ್ತ ಸ್ಥಳದಲ್ಲಿ ಜಾಗ ಒದಗಿಸಲಿ. ಅಲ್ಲಿ ದಾನಿಗಳ ಸಹಾಯದಿಂದ ರಂಗಾಸಕ್ತರು ಒಂದಾಗಿ ರಂಗಮಂದಿರ ನಿರ್ಮಿಸಲು ಪ್ರಯತ್ನಿಸುತ್ತೇವೆ ಎಂದರು.
ಸಾಲಿಯಾನ ಉಮೇಶ್ ನಾರಾಯಣ ಹಾಗೂ ರಾಘು ಪುರಪ್ಪೆಮನೆ ನಿರ್ದೇಶಿಸಿದ್ದ ದಕ್ಷಿಣ ಕನ್ನಡದ ಪುರಪ್ಪೆಮನೆಯ ಥಿಯೇಟರ್ ಸಮುರಾಯ್ ರಂಗ ತಿರು ಗಾಟ ತಂಡ ಅಭಿನಯಿಸಿದ ವಾಮನ ಮಾಸ್ತರರ ವೀರ ಅಭಿಮನ್ಯು ನಾಟಕವನ್ನು ಮನೋಜ್ಞವಾಗಿ ಅಭಿನಯಿಸಿದರು.
ಕೊನೆಯಲ್ಲಿ ಲೇಖಕಿ ಬಿ.ಟಿ. ಜಾಹ್ನವಿ, ನಿರಂಜನ, ಡಾ. ಎಂ.ಜಿ. ಈಶ್ವರಪ್ಪ, ರಾಮನಗೊಂಡನಹಳ್ಳಿ ದಯಾನಂದ, ಕೊರಟಿಕೆರೆ ಶಿವಕುಮಾರ್, ಎನ್.ಟಿ. ಮಂಜುನಾಥ್, ಶಿವಶರಣಪ್ಪ, ಚನ್ನಬಸಪ್ಪ ಪಾಟೀಲ್ ಹಾಗೂ ರಂಗಪ್ರೇಕ್ಷಕರು ಕಲಾ ಕಾಣಿಕೆಯಾಗಿ ಆರ್ಥಿಕ ಸಹಾಯ ಮಾಡಿದರು.