ಎಸ್ಪಿ ಹನುಮಂತರಾಯ
ದಾವಣಗೆರೆ, ಮಾ.28- ಗ್ರೂಪ್ ಆಫ್ ಐರನ್ ಗೇಮ್ಸ್ ಸಂಸ್ಥೆ ವತಿಯಿಂದ ಏ.10 ಹಾಗೂ 11 ರಂದು ರಾಜ್ಯಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.
ಜಿಲ್ಲಾ ವರದಿಗಾರರ ಕೂಟದಲ್ಲಿಂದು ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಮಾಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕುವೆಂಪು ಕನ್ನಡ ಭವನದಲ್ಲಿ ಸ್ಪರ್ಧೆಗಳು ನಡೆಯಲಿದ್ದು ಬಾಲಕರ, ಕಿರಿಯರ, ಹಿರಿಯರ, ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದರು.
ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದವರನ್ನು ಅರ್ಹತೆ ಆಧಾರದ ಮೇಲೆ ಜೂನ್ 27 ರಿಂದ 30ರವರೆಗೆ ಗೋವಾ ರಾಜ್ಯದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು ಎಂದರು.
ಪೊಲೀಸ್ ಧ್ವಜ ದಿನಾಚರಣೆ: ಏ.2 ರಂದು ಪೊಲೀಸ್ ಧ್ವಜ ದಿನಾಚರಣೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.
ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಎಸ್.ರವಿ ಅವರು ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಪೊಲೀಸ್ ಉಪ ನಿರೀಕ್ಷಕ ಜಿ.ನಾಗರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.
ಕಾನೂನು ಪಾಲಿಸಿ, ಇಲಾಖೆಯೊಂದಿಗೆ ಸಹಕರಿಸಿ: ಸೋಮವಾರ ಗ್ರಾ.ಪಂ.ಗಳ ಚುನಾವಣೆ, ಮಹಾನಗರ ಪಾಲಿಕೆ ಉಪ ಚುನಾವಣೆ ಹಾಗೂ ಹೋಳಿ ಹಬ್ಬದ ಆಚರಣೆಗಳು ನಡೆಯಲಿವೆ. ಸಾರ್ವಜನಿಕ ಹೋಳಿ ನಿಷೇಧಿಸಲಾಗಿದ್ದು, ಚುನಾವಣೆಗೆ ಬಿಗಿ ಬಂದೋಬಸ್ತ್ ಏರ್ಪಾಡು ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಎಸ್ಪಿ ಹೇಳಿದರು.
ಜನತೆ ಕೊರೊನಾ ಮಾರ್ಗಸೂಚಿ ಅನುಸರಿ ಸಬೇಕು. ಕಾನೂನು ಪಾಲಿಸಬೇಕು. ಸಾರ್ವಜನಿಕ ವಾಗಿ ಹಬ್ಬಗಳನ್ನು ಆಚರಿಸದೆ, ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಎಆರ್ ಡಿವೈಎಸ್ಪಿ ಪಿ.ಬಿ. ಪ್ರಕಾಶ್, ಪಿಎಸ್‌ಐಗಳಾದ ಶೈಲಜಾ, ದಾದಾಪೀರ್, ಗ್ರೂಪ್ ಆಫ್ ಐರನ್ ಗೇಮ್ಸ್ ಕಾರ್ಯದರ್ಶಿ ರಜ್ವಿಖಾನ್, ಕ್ರೀಡಾಪಟು ಮಹೇಶ್ವಪ್ಪ ಮತ್ತು ಇತರರು ಉಪಸ್ಥಿತರಿದ್ದರು.