ದಾವಣಗೆರೆ, ಆ.8- ಕೊರೊನಾ ಮಹಾಮಾರಿ ಯಿಂದ ಹಲವಾರು ಪ್ರಾಣ ಕಳೆದುಕೊಂಡಿದ್ದು, ಅವರ ಕುಟುಂಬ ವರ್ಗವು ಬೀದಿಗೆ ಬಂದಿದೆ. ಇಂತಹ ಹೊತ್ತಲ್ಲಿ ಬ್ಯಾಂಕ್ ಅಧಿಕಾರಿಗಳು ಕೊರೊನಾದಿಂದ ಸತ್ತ ಕುಟುಂಬದವರ ಮನೆ ಬಾಗಿಲಿಗೆ ಹೋಗಿ, ಸಾಲ ವಸೂಲಿಗಾಗಿ ದೌರ್ಜನ್ಯ ಮಾಡುತ್ತಿದ್ದು ಕೂಡಲೇ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಸಾಲ ಮನ್ನಾ ಮಾಡುವಂತೆ ಕೆಪಿಸಿಸಿ ಸದಸ್ಯ ಹೆಚ್. ದುಗ್ಗಪ್ಪ ಮನವಿ ಮಾಡಿದ್ದಾರೆ.
ದುಡಿಯುವ ಕೈಗಳನ್ನೇ ಕಳೆದುಕೊಂಡವರು ಪರಿಹಾರ ಕಾಣದೇ ಕಂಗಾಲಾದ ಸಮಯದಲ್ಲಿ ಬ್ಯಾಂಕಿನವರು ಸಾಲ ಮರು ಪಾವತಿ ಮಾಡಿ ಎಂದು ಪಟ್ಟು ಹಿಡಿದು ತೊಂದರೆ ಕೊಡುವುದು ನ್ಯಾಯ ಸಮ್ಮತವಲ್ಲ. ಅದೇ ಲಕ್ಷಾಂತರ ಕೋಟಿ ಹಣವನ್ನು ಬ್ಯಾಂಕುಗಳಿಂದ ಸಾಲ ಪಡೆದು ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವವರನ್ನು ಆರಾಮವಾಗಿರಲು ಬಿಟ್ಟು ಬಡಪಾಯಿಗಳ ಮೇಲೆ ಬ್ರಹ್ಮಾಸ್ತ್ರ ಬಿಡುತ್ತಿರುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದ್ದಾರೆ.
ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸುತ್ತೋಲೆ ಹೊರಡಿಸಿ, ಸಾಲ ಪಡೆದವರ ಮನೆ ಬಾಡಿಗೆಗೆ ಹೋಗಿ ಸಾಲ ಮರುಪಾವತಿಗೆ ಕಿರುಕುಳ ನೀಡಬಾರದೆಂದು ಆದೇಶ ಮಾಡಬೇಕು. ಅದರಲ್ಲೂ ಕೊರೊನಾಗೆ ತುತ್ತಾದವರ ಸಾಲವನ್ನು ರಾಜ್ಯಾದ್ಯಂತ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಸರ್ವೆ ಮಾಡಿಸಿ, ಆ ಕುಟುಂಬದ ಸಾಲ ಮನ್ನಾ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ದುಗ್ಗಪ್ಪ ಒತ್ತಾಯಿಸಿದ್ದಾರೆ.