ದಾವಣಗೆರೆ, ಆ.8- ನಗರದಲ್ಲಿ ಇಂದು ಭೀಮನ ಅಮಾವಾಸೆಯನ್ನು ಶ್ರದ್ಧಾ – ಭಕ್ತಿಯಿಂದ ಆಚರಿಸಲಾಯಿತು. ಆಷಾಢ ಮಾಸದ ಭೀಮನ ಅಮಾವಾಸ್ಯೆ ದಿನ ಶಕ್ತಿ ದೇವತೆಗಳ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಭಕ್ತರು ದೇವಾಲಯಗಳಗೆ ತೆರಳಿ ಪೂಜೆ ಸಲ್ಲಿಸಿದರು. ಕೊರೊನಾ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಪ್ರವೇಶ ನಿಷೇಧಿಸಲಾಗಿತ್ತಾದರೂ, ಭಕ್ತರು ಹೊರಗಿನಿಂದಲೇ ಕೈ ಮುಗಿದರು.
ಹಿಂದೂ ಸಂಪ್ರದಾಯದಲ್ಲಿ ಪತಿಯನ್ನೇ ಪರದೈವ ಎನ್ನಲಾಗುತ್ತದೆ. ಪತಿಯ ಆರೋಗ್ಯ ವೃದ್ಧಿಗಾಗಿ ಸತಿಯು ಹಲವಾರು ವ್ರತಗಳನ್ನು ಕೈಗೊಳ್ಳುವುದು ರೂಢಿ. ಅವುಗಳಲ್ಲಿ ಒಂದು ಈ `ಭೀಮನ ಅಮಾವಾಸೆ’. ಇದನ್ನು ಜ್ಯೋತಿ ರ್ಭೀಮೇಶ್ವರನ ವ್ರತ ಎಂದೂ ಕೂಡ ಕರೆಯ ಲಾಗುತ್ತದೆ. ಪ್ರತೀ 15 ದಿನಕ್ಕೊಮ್ಮೆ ಹುಣ್ಣಿಮೆ ಮತ್ತು ಅಮಾವಾಸ್ಯೆ ಬರುತ್ತದೆ. ಇವೆರಡಕ್ಕೂ ತಮ್ಮದೇ ಆದಂತಹ ವಿಶೇಷತೆಗಳಿವೆ. ಅದರಲ್ಲೂ ಪ್ರತಿ ವರ್ಷ ಆಷಾಢದಲ್ಲಿ ಬರುವ ಅಮಾವಾಸ್ಯೆಯಂದು ಕರ್ನಾಟಕದಲ್ಲಿ ಈ ‘ಭೀಮನ ಅಮಾವಾಸೆ’ ಆಚರಿಸಲಾಗುತ್ತದೆ.
ಮಹಿಳೆಯರು ಮತ್ತು ಹುಡುಗಿಯರು ತನ್ನ ಸಹೋದರ ಮತ್ತು ಪತಿಯ ಆರೋಗ್ಯ, ಆಯುಷ್ಯ ಹಾಗೂ ಅವರ ಅಭಿವೃದ್ಧಿಗಾಗಿ ಈ ವ್ರತವನ್ನು ಮಾಡುತ್ತಾರೆ. ಭಾರತದಲ್ಲಿ ಗಂಡ ನನ್ನೇ ದೇವರು ಎಂದು ಪೂಜಿಸುವ ಸಂಪ್ರ ದಾಯ ಬಹಳ ಪುರಾತನ ಕಾಲದಿಂದಲೂ ಇದೆ. ಹೆಣ್ಣಿಗೆ ಮುತ್ತೈದೆ ಭಾಗ್ಯ ನೀಡುವ ಗಂಡನ ಆರೋಗ್ಯ ವೃದ್ಧಿಯಾಗಬೇಕು, ಆತನಿಗೆ ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸು ಸಿಗಬೇಕೆಂದು ಹೆಂಡತಿ ಸಾಕಷ್ಟು ರೀತಿಯ ವ್ರತಗಳನ್ನು ಕೂಡ ಮಾಡುತ್ತಾಳೆ. ಅದರಲ್ಲಿ ಮುಖ್ಯವಾದುದು ‘ಭೀಮನ ಅಮಾವಾಸ್ಯೆ’. ಭೀಮನ ಅಮಾವಾಸೆಯಂದು ಪತ್ನಿ ಕಂಕಣ ಕಟ್ಟಿಕೊಂಡು ವ್ರತ ಮಾಡಿದರೆ ಪತಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ.
ಮಲೆನಾಡು ಭಾಗದಲ್ಲಿ ಈ ಹಬ್ಬವನ್ನು ಕೊಡೆ ಅಮಾವಾಸೆಯೆಂದೂ, ದಕ್ಷಿಣ ಕನ್ನಡದಲ್ಲಿ ಆಟಿ ಅಮಾವಾಸೆ, ಕರ್ಕಾಟಕ ಅಮಾವಾಸ್ಯೆ ಎಂದು ಕರೆಯುತ್ತಾರೆ.
ಕರ್ನಾಟಕ ತುಳು ನಾಡು ಹಾಗೂ ತಮಿಳುನಾಡಿನಲ್ಲಿ ಆಟಿ ಕಷಾಯಕ್ಕೂ ವಿಶೇಷ ಮೌಲ್ಯವಿದೆ. ಆಟಿ ತಿಂಗಳಲ್ಲಿ ಯಾವುದೇ ಬೆಳೆಯ ಫಸಲು ಕೊಯ್ಲಿಗೆ ಬರುವುದಿಲ್ಲ. ಈ ತಿಂಗಳು, ಬದಲಾಗುವ ಭೂ ವಾತಾವರಣ, ನಿರಂತರ ಸುರಿಯುವ ಮಳೆಯನ್ನು ಕಾಣ ಬಹುದು. ಈ ಕಾರಣದಿಂದ ಈ ಮಾಸದಲ್ಲಿ ಶರೀರದಲ್ಲಿ ಕಂಡುಬರುವ ರೋಗಗಳು ಮನುಷ್ಯನನ್ನು ನಿತ್ರಾಣ ಮಾಡುತ್ತವೆ.
ಆದ್ದರಿಂದ ಈ ತಿಂಗಳಿನಲ್ಲಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆಟಿ ಅಮಾವಾಸ್ಯೆ ದಿನದಂದು ಸಾಮೂಹಿಕವಾಗಿ ಕಷಾಯ ಸೇವಿಸುವ ಪದ್ಧತಿ ನಡೆದು ಬಂದಿದೆ. ಹಾಲೆ ಮರದ ಕಷಾಯವನ್ನು ಕರಿ ಮೆಣಸು, ಬೆಳ್ಳುಳ್ಳಿ, ಓಮ ಸೇರಿಸಿ ಆಟಿ ತಿಂಗಳ ಅಮಾವಾಸೆಯ ನಸುಕಿನಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾರೆ. ಈ ಕಷಾಯ ಹಲವು ಔಷಧೀಯ ಗುಣಗಳನ್ನು ಹೊಂದಿರುತ್ತದೆ.