ಹರಪನಹಳ್ಳಿ, ಮಾ.25- ಬಾಗಳಿ ಯನ್ನು ಜಿಲ್ಲಾ ಪಂಚಾಯ್ತಿ ಕ್ಷೇತ್ರವನ್ನಾಗಿಸಲು ರಾಜ್ಯ ಚುನಾವಣಾ ಆಯೋಗ ಮತ್ತು ಪಂಚಾಯತ್ ರಾಜ್ಯ ಸಚಿವ ಈಶ್ವರಪ್ಪ ಅವರಿಗೆ ಬಾಗಳಿ ವ್ಯಾಪ್ತಿಯ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಲಾಯಿತು.
ಗ್ರಾಮಸ್ಥರ ಪರವಾಗಿ ಮನವಿಯನ್ನು ನೀಡಿ, ಬೀಚಿ ಅಭಿಮಾನಿ ಬಳಗದ ಅಧ್ಯಕ್ಷ ಎಸ್. ನಿಂಗರಾಜ್, ಎಸ್.ಬಸವರಾಜ್ ಮಾತನಾಡಿ, ಹಿಂದೆ 1990ರ ದಶಕದಲ್ಲಿ ಕೋಡಿ ಹಳ್ಳಿ, ಕೂಲಹಳ್ಳಿ, ಶೃಂಗಾರತೋಟ, ಕಾಯಕದ ಹಳ್ಳಿ, ಕಣಿವಿಹಳ್ಳಿ, ನಂದಿಬೇವೂರು, ಬಾಗಳಿ, ಒಳಗೊಂಡ ಬಾಗಳಿ ಮಂಡಲ ಪಂಚಾಯಿತಿ ಯಾಗಿ ಕೆಲಸ ನಿರ್ವಹಿಸಿದೆ. ಇದಕ್ಕೆ ಸಾಕ್ಷ್ಯಾಧಾರ ಗಳು ಇವೆ. ಆದರೆ, ತಾಲ್ಲೂಕಿನ ಕಂದಾಯ ಮತ್ತು ಚುನಾವಣಾ ಸಿಬ್ಬಂದಿಗಳು ಕಂದಾಯ ಗ್ರಾಮ ಮತ್ತು ಜನಸಂಖ್ಯೆ ನೆಪದ ಮೂಲಕ ಈ ಗ್ರಾಮದ ಬದಲಾಗಿ ಗಡಿಭಾಗದ ಗ್ರಾಮವನ್ನು ಆಯ್ಕೆ ಮಾಡಿಕೊಂಡು ವರದಿ ಕಳುಹಿಸುವುದು ಸೂಕ್ತವಲ್ಲ. ಈ ಭಾಗದ ನಾಲ್ಕೈದು ಗ್ರಾ.ಪಂ.ಗಳನ್ನು ಸೇರಿಸಿ ಬಾಗಳಿಯನ್ನು ಜಿಲ್ಲಾ ಪಂಚಾಯ್ತಿ ಕ್ಷೇತ್ರವನ್ನಾಗಿಸಿ ಆದೇಶಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟವನ್ನು ಆರಂಭಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಮನವಿ ಸ್ವೀಕರಿಸಿ ಮಾತನಾಡಿ, ತಾಲ್ಲೂಕು ಪಂಚಾ ಯಿತಿ, ಜಿಲ್ಲಾ ಪಂಚಾಯಿತಿಯ ಪುನರ್ ವಿಂಗಡಣೆ ಬಗ್ಗೆ ಸದನದಲ್ಲಿ ಚರ್ಚೆಯಾಗಿದೆ ಎಂದರು.
ಚುನಾವಣಾ ಆಯೋಗದ ಸಹ ಕಾರ್ಯದರ್ಶಿ ಹೊನ್ನಾಂಬ ಮಾತನಾಡಿ ಜನಸಂಖ್ಯೆ, ಭೌಗೋಳಿಕ ಆಧಾರದಲ್ಲಿ ಪುನರ್ ವಿಂಗಡಣೆ ಮಾಡಲಾಗುವುದು. ಇಲ್ಲಿಯವರೆಗೂ ಯಾವುದನ್ನೂ ಅಂತಿಮಗೊಳಿಸಿಲ್ಲ. ನಿಮ್ಮ ಮನವಿಯನ್ನು ನೀಡಿ, ಪರಿಶೀಲಿಸುವೆ ಎಂದರು.
ತಕರಾರು ಅರ್ಜಿ: ಹಾರಕನಾಳು ಕ್ಷೇತ್ರವನ್ನು ಜಿಲ್ಲಾ ಪಂಚಾಯಿತಿ ಮರು ವಿಂಗಡಣೆ ಕ್ಷೇತ್ರವಾಗಿ ಮೇಲ್ದರ್ಜೆಗೇರಿಸಲು ಎಲ್ಲಾ ಅರ್ಹತೆ ಹೊಂದಿದ್ದು, ಐದು ಕಂದಾಯ ಗ್ರಾಮಗಳನ್ನು ಹೊಂದಿರುತ್ತದೆ.
ಈ ಭಾಗದಲ್ಲಿ ಸುಮಾರು ಹದಿನೆಂಟು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಭೌಗೋಳಿಕ ವಿಸ್ತೀರ್ಣ ಹೊಂದಿದೆ. ಮಾಡ್ಲಿಗೇರಿ, ಗೌರಿಹಳ್ಳಿ, ತೊಗರಿಕಟ್ಟಿ ಈ ಗ್ರಾಮಗಳು ಹಾರಕನಾಳು ಮಂಡಲ ಪಂಚಾಯತಿಗೆ ಸೇರಿದ್ದವು. 1977 ರಲ್ಲಿ ಹಾರಕನಾಳು ಮಂಡಲದಿಂದ ವಿಭಜನೆ ಆಗಿರುತ್ತದೆ. ಸದ್ಯಕ್ಕೆ ಹಾರಕನಾಳು ಗ್ರಾಮ ಪಂಚಾಯತಿ ಇಪ್ಪತ್ಮೂರು ಸದಸ್ಯರನ್ನು ಒಳಗೊಂಡು ಎ ಗ್ರೇಡ್ ಪಂಚಾಯತಿ ಆಗಿ ಕಾರ್ಯನಿರ್ವಹಿಸುತ್ತಿದೆ.
ಇದೀಗ ಅವೈಜ್ಞಾನಿಕವಾಗಿ ಅರ್ಹತೆ ಇಲ್ಲದ ಮಾಡ್ಲಿಗೇರಿ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ಮಾಡಲು ಹೊರಟಿರುವುದು ಖಂಡನೀಯ. ಚುನಾವಣಾಧಿಕಾರಿಗಳು ನ್ಯಾಯ ಸಮ್ಮತವಾಗಿ ಚುನಾವಣಾ ಸ್ಥಾನ ಹೊಂದಾಣಿಕೆ ಮಾಡಬೇಕು ಎಂದು ಹಾರಕನಾಳು ಕ್ಷೇತ್ರದಿಂದ ಗ್ರಾಮಸ್ಥರು ಹಾಗೂ ಪ್ರಮುಖ ಮುಖಂಡರಗಳು ಚುನಾವಣಾ ಆಯೋಗಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.