ನೂತನ ಶಿಕ್ಷಣ ‌ನೀತಿಯಲ್ಲಿ ಕನ್ನಡಕ್ಕೆ ಅವಗಣನೆ

ನೂತನ ಶಿಕ್ಷಣ ‌ನೀತಿಯಲ್ಲಿ ಕನ್ನಡಕ್ಕೆ ಅವಗಣನೆ - Janathavaniದಾವಣಗೆರೆ, ಜೂ.27 – ನೂತನ ಶಿಕ್ಷಣ ‌ನೀತಿಯಲ್ಲಿ ಕನ್ನಡ ಭಾಷೆಯ ಅವಗಣನೆ ಮಾಡುತ್ತಿರುವುದು ತೀವ್ರ ಖಂಡನೀಯ ಎಂದು ಕನ್ನಡಪರ ಸಂಘಟಕ ಕೆ‌.ರಾಘವೇಂದ್ರ ನಾಯರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೂತನ ಶಿಕ್ಷಣ ನೀತಿಯ ಭಾಗವಾಗಿ ‌ರಾಜ್ಯ ಸರ್ಕಾರವು ಮೂರು ವರ್ಷದ ಪದವಿ ಶಿಕ್ಷಣ ವ್ಯವಸ್ಥೆಯನ್ನು ನಾಲ್ಕು ವರ್ಷಕ್ಕೆ ವಿಸ್ತರಣೆ ಮಾಡಿದೆ. ಇದು ಸ್ವಾಗತಾರ್ಹ ಹೌದಾದರೂ ಇಲ್ಲಿ ಗಮನಿಸಬೇಕಾದ ಆತಂಕದ ವಿಷಯ ವೆಂದರೆ ಈ ಮೊದಲು ಇದ್ದಂತಹ 3 ವರ್ಷದ ಪದವಿ ಶಿಕ್ಷಣ ವ್ಯವಸ್ಥೆಯಲ್ಲಿ ಮೊದಲ 2 ವರ್ಷ ಕಡ್ಡಾಯವಾಗಿ ಭಾಷಾ ಕಲಿಕೆಯ ನಿಬಂಧನೆ ಯಿತ್ತು.  ಆದರೆ ಈ ಹೊಸ ವ್ಯವಸ್ಥೆಯಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ ಮೊದಲ ಒಂದು ವರ್ಷ ಮಾತ್ರ ಭಾಷಾ ಕಲಿಕೆಗೆ ಅವಕಾಶವಿದೆ. ಈ ರೀತಿಯಾಗಿ ಭಾಷಾ ಕಲಿಕೆಯನ್ನು ಮೊಟಕು ಗೊಳಿಸಿರುವುದು ಸರ್ವಥಾ ಖಂಡನೀಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿ ಷತ್ತು ಈಗಾಗಲೇ ತನ್ನ ಆಕ್ಷೇಪಣೆಯನ್ನು ಸರ್ಕಾ ರಕ್ಕೆ ಸಲ್ಲಿಸಿ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.

ಕನ್ನಡ ಭಾಷೆಗೆ ಅತ್ಯಂತ ಭವ್ಯವಾದ ಮತ್ತು ಶ್ರೀಮಂತವಾದ ಪರಂಪರೆಯಿದೆ, ಇತಿಹಾಸವಿದೆ. ಅತ್ಯಂತ ಆಳವಾಗಿ ಕನ್ನಡ ಭಾಷೆಯ ಅಧ್ಯಯನವಾಗಬೇಕಾಗಿ ರುವುದು ಪದವಿ ಶಿಕ್ಷಣ ವ್ಯವಸ್ಥೆಯಲ್ಲಿಯೇ ಹೊರತು ಪ್ರಾಥಮಿಕ ಅಥವಾ ಪ್ರೌಢ ಶಿಕ್ಷಣ ಹಂತದಲ್ಲಿ ಅಲ್ಲ‌. ಆದರೆ ಬಹುಮುಖ್ಯವಾದ ಈ ಪದವಿ ಶಿಕ್ಷಣದ ಹಂತದಲ್ಲಿ ಕನ್ನಡ ಭಾಷಾ ಕಲಿಕೆಯ ಅವಕಾಶವನ್ನು ಮೊಟಕುಗೊಳಿಸುವುದ ರಿಂದ ಕನ್ನಡ ಭಾಷೆಯನ್ನು ಸಮಗ್ರವಾಗಿ ಕಲಿಯುವ ಅವಕಾಶದಿಂದ ವಿದ್ಯಾರ್ಥಿಗಳು ವಂಚಿತವಾಗುವ ಸಾಧ್ಯತೆ ಇದೆ.

ಎಂಟು ಬಾರಿ ಕನ್ನಡ ಭಾಷಾ ಸಾಹಿತ್ಯಕ್ಕೆ ಜ್ಞಾನ ಪೀಠ ಪ್ರಶಸ್ತಿ ಬಂದಿರುವುದನ್ನು ಸರ್ಕಾರ ಮರೆಯಬಾರದು. ಕನ್ನಡ ಭಾಷೆಯ ಆಳವಾದ ಅಧ್ಯಯನ ಮಾಡಲು ಅವಕಾಶವಾಗುವಂತೆ ಕನ್ನಡ ಭಾಷೆಯನ್ನು ನಾಲ್ಕು ವರ್ಷಗಳ ಪದವಿ ಶಿಕ್ಷಣ ವ್ಯವಸ್ಥೆಯಲ್ಲಿ ಮೊದಲ ಮೂರು ವರ್ಷ ಕಡ್ಡಾಯವಾಗಿ ಕನ್ನಡ ಭಾಷೆಯನ್ನೇ ಕಲಿಯುವ ಅವಕಾಶವಿರುವಂತೆ ಹೊಸ ಶಿಕ್ಷಣ ನೀತಿಯಲ್ಲಿ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ನಾಯರಿ ಅವರು ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದ್ದಾರೆ. 

error: Content is protected !!