ಡೆಲ್ಟಾ ಪ್ಲಸ್ ತೀವ್ರವೆಂದು ಕಂಡು ಬಂದಿಲ್ಲ : ಅರೋರ

ನವದೆಹಲಿ, ಜೂ. 27 – ಡೆಲ್ಟಾ ಪ್ಲಸ್ ಕೊರೊನಾ ರೂಪಾಂತರಿ ಶ್ವಾಸಕೋಶದ ಅಂಗಾಂಶಗಳಿಗೆ ಹೆಚ್ಚು ಅಂಟಿಕೊಳ್ಳುತ್ತಿದೆ. ಆದರೆ, ಇದರಿಂದ ಸೋಂಕು ತೀವ್ರತೆ ಹೆಚ್ಚಾಗುತ್ತದೆ, ಇಲ್ಲವೇ ಸೋಂಕು ವೇಗವಾಗಿ ಹರಡು ತ್ತದೆ ಎಂದರ್ಥವಲ್ಲ ಎಂದು ಕೊರೊನಾ ವೈರಸ್ ಕುರಿತ ಸಮಿತಿಯಾದ ಎನ್‌.ಟಿ.ಎ.ಜಿ.ಐ. ಅಧ್ಯಕ್ಷ ಡಾ. ಎನ್.ಕೆ. ಅರೋರ ಹೇಳಿದ್ದಾರೆ.

ಡೆಲ್ಟಾ ಪ್ಲಸ್ ಕೊರೊನಾ ರೂಪಾಂತರಿಯನ್ನು ಜೂನ್ 11ರಂದು ಗುರುತಿಸಲಾಗಿದೆ. ಇದು ಕಳವಳ ಕಾರಿ ರೂಪಾಂತರಿ ಎಂದು ಪರಿಗಣಿಸಲಾಗಿದೆ. ಇದುವ ರೆಗೂ 12 ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ಸೋಂಕು ಪತ್ತೆ ಯಾಗಿದೆ.

ಈ ಬಗ್ಗೆ ಮಾತನಾಡಿರುವ ಅರೋರ, ಇತರೆ ರೂಪಾಂತರಿಗಳಿಗೆ ಹೋಲಿಸಿದರೆ ಡೆಲ್ಟಾ ಪ್ಲಸ್ ಶ್ವಾಸ ಕೋಶಕ್ಕೆ ಹೆಚ್ಚು ಅಂಟಿಕೊಳ್ಳುತ್ತಿದೆ. ಆದರೆ, ಇದು ತೀವ್ರವಾಗಿ ಹರಡುತ್ತದೆ, ಇಲ್ಲವೇ ಹೆಚ್ಚು ತೀವ್ರ ರೋಗ ತರುತ್ತದೆ ಎಂದರ್ಥವಲ್ಲ ಎಂದಿದ್ದಾರೆ.

ಹೆಚ್ಚು ಪ್ರಕರಣಗಳನ್ನು ಗುರುತಿಸಿದ ನಂತರವಷ್ಟೇ ಡೆಲ್ಟಾ ಪ್ಲಸ್ ಸೋಂಕಿನ ಪರಿಣಾಮ ಅರ್ಥವಾಗಲಿದೆ. ಆದರೆ, ಒಂದು ಇಲ್ಲವೇ ಎರಡು ಡೋಸ್ ಲಸಿಕೆ ಪಡೆದವರ ಮೇಲೆ ಸೋಂಕಿನ ಪರಿಣಾಮ ಕಡಿಮೆ ಇರುವುದು ಕಂಡು ಬಂದಿದೆ ಎಂದವರು ತಿಳಿಸಿದ್ದಾರೆ. ನಾವು ಈ ಬಗ್ಗೆ ತೀವ್ರ ನಿಗಾ ವಹಿಸಿದ್ದೇವೆ. ಅಧ್ಯಯನದ ನಂತರವಷ್ಟೇ ಅದರ ಹರಡುವಿಕೆಯ ತೀವ್ರತೆ ಸ್ಪಷ್ಟವಾಗಲಿದೆ ಎಂದವರು ಹೇಳಿದ್ದಾರೆ. ಡೆಲ್ಟಾ ಪ್ಲಸ್ ಸೋಂಕು ಬಂದಿರುವ ಹಲವಾರು ಲಕ್ಷಣ ರಹಿತರಿರಬಹುದು. ಹೀಗಾಗಿ ಈ ರೂಪಾಂತರಿಯಿಂದ ಸೋಂಕಿತರ ಸಂಖ್ಯೆ ಹೆಚ್ಚಾಗಿರಬಹುದು ಎಂದವರು ಹೇಳಿದ್ದಾರೆ.

ಹಲವು ರಾಜ್ಯಗಳು ಈಗಾಗಲೇ ಸೋಂಕು ಹರಡುವಿಕೆ ತಡೆಯಲು ಜಿಲ್ಲಾ ಮಟ್ಟದಲ್ಲಿ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಸೋಂಕು ಕಂಡು ಬಂದಿರುವ ಜಿಲ್ಲೆಗಳಲ್ಲಿ ಹೆಚ್ಚು ಲಸಿಕೆ ನೀಡಬೇಕಾಗಬಹುದು ಎಂದವರು ಹೇಳಿದ್ದಾರೆ.

ಡೆಲ್ಟಾ ಪ್ಲಸ್ ಕಾರಣದಿಂದಾಗಿ ಮೂರನೇ ಕೊರೊನಾ ಅಲೆ ಬರುತ್ತದೆಯೇ ಎಂದು ಹೇಳುವುದು ಕಷ್ಟ. ಎರಡನೇ ಅಲೆ ಕಳೆದ ಮೂರು ತಿಂಗಳಿಂದ ತೀವ್ರವಾಗಿದ್ದು, ಅದು ಈಗಲೂ ಮುಂದುವರೆಯುತ್ತಿದೆ. ಕಳೆದ 8-10 ದಿನಗಳಿಂದ ಪ್ರತಿದಿನ 50 ಸಾವಿರ ಸೋಂಕಿತರು ಕಂಡು ಬರುತ್ತಿದ್ದಾರೆ. ಕೆಲವೆಡೆ ಸೋಂಕು ಈಗಲೂ ತಗ್ಗಿಲ್ಲ ಎಂದು ಅರೋರ ಹೇಳಿದ್ದಾರೆ.

ಎರಡನೇ ಅಲೆಯಿಂದ ಜನರ ಸ್ಪಂದನೆ ಮೇಲೆ ಪರಿಣಾಮವಾಗಿದೆ. ಜನರು ಎರಡನೇ ಅಲೆಯಿಂದ ಹೇಗೆ ಪ್ರಭಾವಿತರಾಗಿದ್ದಾರೆ ಎಂಬುದರ ಮೂಲಕ 3ನೇ ಅಲೆ ನಿರ್ಧಾರವಾಗು ತ್ತದೆ ಎಂದು ಅರೋರ ತಿಳಿಸಿದ್ದಾರೆ.

error: Content is protected !!