ಕರ್ನಾಟಕ ಜನಶಕ್ತಿಯಿಂದ ಅಮರ ವೀರರ ಸ್ಮರಣೆ
ದಾವಣಗೆರೆ, ಮಾ.23- ಕರ್ನಾಟಕ ಜನಶಕ್ತಿ ಜಿಲ್ಲಾ ಸಮಿತಿ ವತಿಯಿಂದ ನಗರದ ರೈಲ್ವೇ ನಿಲ್ದಾಣ ಮುಂಭಾಗದಲ್ಲಿನ ಭಗತ್ ಸಿಂಗ್ ಪ್ರತಿಮೆ ಬಳಿ ಇಂದು ಭಗತ್ ಸಿಂಗ್, ರಾಜಗುರು, ಸುಖದೇವ್ ಅವರುಗಳ 90ನೇ ಹುತಾತ್ಮ ದಿನಾಚರಣೆ ಪ್ರಯುಕ್ತ ಅಮರ ವೀರರಿಗೆ ವಿನಮ್ರವಾಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಾರ್ಚ್ 23 ಒಂದು ಚಾರಿತ್ರಿಕ ದಿನ. ಕ್ರಾಂತಿ ವೀರರಾದ ಭಗತ್ ಸಿಂಗ್, ಸುಖದೇವ್, ರಾಜಗುರು ಅಮರರಾಗಿ ಇಂದಿಗೆ 90 ವರ್ಷಗಳು ತುಂಬಿವೆ. ದೇಶ ಭಕ್ತಿಯೆಂದರೆ ಯಾರನ್ನೋ ದ್ವೇಷಿಸುವುದಲ್ಲ. ಬದಲಿಗೆ ಎಲ್ಲರನ್ನೂ ಪ್ರೀತಿಸುವುದು. ಎಲ್ಲರ ಏಳಿಗೆಗಾಗಿ ದುಡಿಯುವುದು. ಆ ನಿಟ್ಟಿನಲ್ಲಿ ನಾವು ಬದುಕನ್ನು ಪ್ರೀತಿಸುತ್ತೇವೆ ಮತ್ತು ಅದರ ಸೌಂದರ್ಯವನ್ನು ಕಾಪಾಡಲು ಹೋರಾಡುತ್ತೇವೆ ಎಂದು ಘೋಷಿಸಿದ ಮತ್ತು ಹಾಗೆಯೇ ಬದುಕಿದ ಈ ಯುವ ಚೇತನಗಳನ್ನು ಸ್ಮರಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದರು.
ಭಾರತದ ಭವಿಷ್ಯದ ಬಗ್ಗೆ ಸ್ಪಷ್ಟ ಕಲ್ಪನೆಗಳಿದ್ದ ಮತ್ತು ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಕರೆಯಲ್ಪಡುತ್ತಿದ್ದ ಬ್ರಿಟಿಷರ ಎದೆ ನಡುಗಿಸಿದ ಈ ವೀರರಿಂದ ನಾವು ಪಾಠಗಳನ್ನು ಕಲಿಯಬೇಕಾಗಿದೆ. ರೈತರು ದೆಹಲಿಯ ಗಡಿಗಳಲ್ಲಿ ಹೋರಾಡುತ್ತಿದ್ದಾರೆ. ಕಾರ್ಮಿಕರು ಕಷ್ಟದಲ್ಲಿದ್ದಾರೆ. ಯುವ ಜನರಿಗೆ ಉದ್ಯೋಗಗಳಿಲ್ಲ. ಮಹಿಳೆಯರು ಮತ್ತು ದಲಿತರ ಮೇಲಿನ ದೌರ್ಜನ್ಯಗಳು ನಿಂತಿಲ್ಲ. ಈ ಸಂದರ್ಭದಲ್ಲಿ ಭಗತ್ ಸಿಂಗ್ ಅವರ ಚಿಂತನೆಗಳು ಪ್ರಸ್ತುತವಾಗುತ್ತವೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಸತೀಶ್ ಅರವಿಂದ್, ಪವಿತ್ರ, ಆದಿಲ್ ಖಾನ್, ಯಲ್ಲಪ್ಪ, ಬುಳಸಾಗರ ಸಿದ್ದರಾಮಣ್ಣ, ಅಣ್ಣಪ್ಪ, ಶಿವಕುಮಾರ್, ರವಿಕುಮಾರ್, ಮಕ್ಸೂದ್, ಕರಿಬಸಪ್ಪ, ವೆಂಕಟೇಶ್ ಇತರರಿದ್ದರು.