ಹರಿಹರದಲ್ಲಿ ಶಾಸಕ ರಾಮಪ್ಪ
ಹರಿಹರ, ಮಾ.22- ಸಾರ್ವಜನಿಕ ಆಸ್ಪತ್ರೆಗಳಲ್ಲಿ ಖಾಸಗಿ ಆಸ್ಪತ್ರೆಗೆ ಸರಿ ಸಮಾನ ವಾಗಿ ಸೇವೆಗಳನ್ನು ಸರ್ಕಾರ ನೀಡುತ್ತಿದ್ದು, ಅವುಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಂಡು ಆರೋಗ್ಯವಂತರಾಗಿ ತಮ್ಮ ಜೀವನ ನಡೆಸುವಂತೆ ಶಾಸಕ ಎಸ್. ರಾಮಪ್ಪ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬಟ್ಟೆ ಒಗೆಯುವ ಸಿಬಿಸಿ, ವಾಷಿಂಗ್ ಮೆಷಿನ್ ಯಂತ್ರವನ್ನು ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಯಂತ್ರವು 8.50 ಲಕ್ಷ ಮತ್ತು 26 ಲಕ್ಷ ರೂಪಾಯಿಯದಾಗಿದ್ದು, ಆಸ್ಪತ್ರೆಗೆ ಬರುವ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಇಲ್ಲಿವರೆಗೂ 2 ಕೋಟಿ ಅಂದಾಜು ಮೊತ್ತದ ಯಂತ್ರೋಪಕರಣಗಳನ್ನು ಸರ್ಕಾರದ ಅನುದಾನದಿಂದ ತಂದಿದ್ದೇನೆ. ತಾಲ್ಲೂಕು ಆಸ್ಪತ್ರೆಯಲ್ಲಿ ನೇತ್ರ ಚಿಕಿತ್ಸಾ ಶಿಬಿರಗಳು ನಡೆದಿವೆ. ಕೆಲವು ವೈದ್ಯರ ಕೊರತೆ ಇರುವುದರಿಂದ ಕೂಡಲೇ ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಸಚಿವರೊಂದಿಗೆ ಮಾತನಾಡಿ, ವೈದ್ಯರ ಕೊರತೆಯನ್ನು ನೀಗಿಸಲು ಮುಂದಾಗುತ್ತೇನೆ ಎಂದು ಹೇಳಿದರು.
ಆಡಳಿತ ವೈದ್ಯಾಧಿಕಾರಿ ಎಲ್. ಹನುಮನಾಯ್ಕ್ ಸೇರಿದಂತೆ ಎಲ್ಲ ತಜ್ಞ ವೈದ್ಯರು, ಸಿಬ್ಬಂದಿ ವರ್ಗದವರು ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಆಸ್ಪತ್ರೆಯ ಸ್ವಚ್ಛತೆ ಕಾಪಾಡುವುದಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು. ಸಾರ್ವಜನಿಕ ಆಸ್ಪತ್ರೆಗೆ ಇನ್ನೂ ಹೆಚ್ಚಿನ ಅನುದಾನ ತಂದು ಆಸ್ಪತ್ರೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ನಗರಸಭಾ ಸದಸ್ಯರುಗಳಾದ ಎಂ.ಎಸ್. ಬಾಬುಲಾಲ್, ಮಹಬೂಬ್, ಶಂಕರ್ ಖಟಾವ್ಕರ್, ಆಡಳಿತ ವೈದ್ಯಾಧಿಕಾರಿ ಎಲ್. ಹನುಮಾನಾಯಕ್, ಪ್ರತಾಪ್, ಯಶ್ವಂತ್, ಶೋಭಾ ದೊಡ್ಡಮನಿ, ಉಮ್ಲಾ ನಾಯಕ್, ಸಂತೋಷ್ ಪಿ. ಸಿದ್ಧಾರ್ಥ್, ಗಂಗಾಧರ ಕೊಟಗಿ, ನಫೀಜ್ ಅಹಮದ್, ಉಮ್ಮೆ ಸಲ್ಮಾ, ಶಾಸಕರ ಆಪ್ತ ಕಾರ್ಯದರ್ಶಿ ವಿಜಯ ಮಹಾಂತೇಶ್, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.