ದಾವಣಗೆರೆ, ಮಾ.21-ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಜನಾಕ್ರೋಶ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಕೀಲರ ಬಗ್ಗೆ ಅವಾಚ್ಯ ಪದವನ್ನು ಬಳಸಿದ್ದು, ವಕೀಲರ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಅವರು ಈ ಕೂಡಲೇ ಬೇಷರತ್ ಕ್ಷಮೆ ಯಾಚಿಸಲು ರಾಜ್ಯ ಹಾಗೂ ಜಿಲ್ಲಾ ಕಾನೂನು ಪ್ರಕೋಷ್ಟ ಆಗ್ರಹಿಸಿದೆ.
ಪಿಎಂ ಕೇರ್‌ನಲ್ಲಿ ಹಣ ದುರುಪಯೋಗವಾಗಿದೆ ಎಂಬ ಆಧಾರ ರಹಿತ ಪೋಸ್ಟ್ ವಿರುದ್ಧ ಸಾಗರದ ವಕೀಲ ಪ್ರವೀಣ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಎಫ್‌ಐಆರ್ ಸಹ ದಾಖಲಾಗಿದ್ದು, ಪ್ರಕರಣ ತನಿಖಾ ಹಂತದಲ್ಲಿದೆ. ಶಿವಮೊಗ್ಗದಲ್ಲಿ ನಡೆದ ಸಮಾವೇಶದಲ್ಲಿ ಪ್ರವೀಣ್ ಅವರನ್ನು ಡಿಕೆಶಿ ತಗಲಾಂಡಿ ಎಂದು ಅವಾಚ್ಯ ಶಬ್ದದಿಂದ ಬೈದಾಡಿದ್ದಾರೆ.
ಡಿಕೆಶಿ ಇ.ಡಿ. ಬಲೆಗೆ ಬಿದ್ದಾಗ ವಕೀಲರ ಸಹಾಯ ಪಡೆದಿರುವುದು ನೆನಪಿಲ್ಲ ಅನಿಸುತ್ತದೆ. ಈಗಾಗಲೇ ಶಿವಮೊಗ್ಗ ಮತ್ತು ಬಾಗಲಕೋಟೆಯಲ್ಲಿ ವಕೀಲರು ಪ್ರತಿಭಟಿಸಿದ್ದು, ಡಿಕೆಶಿ ವಕೀಲರ ಸಮುದಾಯದ ಕ್ಷಮೆ ಯಾಚಿಸದೇ ಇದ್ದರೆ ಕಾನೂನು ಪ್ರಕೋಷ್ಟ ರಾಜ್ಯಾದ್ಯಂತ ಪ್ರತಿಭಟಿಸಬೇಕಾಗುತ್ತದೆ ಎಂದು ವಕೀಲರ ಸಂಘದ ನಿಕಟಪೂರ್ವ ಉಪಾಧ್ಯಕ್ಷರು ಮತ್ತು ದಾವಣಗೆರೆ ಜಿಲ್ಲಾ ಕಾನೂನು ಪ್ರಕೋಷ್ಟದ ಸಂಚಾಲಕ ಹೆಚ್. ದಿವಾಕರ್, ರಾಜ್ಯ ಸಮಿತಿ ಸದಸ್ಯ ಎ.ಸಿ. ರಾಘವೇಂದ್ರ, ಸಹ ಸಂಚಾಲಕ ಕೆ.ಹೆಚ್. ಧನಂಜಯ್, ಎ.ಎಸ್. ಮಂಜುನಾಥ್, ಪಿ.ವಿ. ಶಿವಕುಮಾರ್ ಎಚ್ಚರಿಸಿದ್ದಾರೆ.