ಶ್ರೀ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಅಭಿಮತ
ಹರಪನಹಳ್ಳಿ,ಮಾ.19- ರೈತ ಬೆಳೆಯುವ ಬೆಳೆಗೆ ಉತ್ತಮ ಬೆಲೆ ಸಿಗದೆ ಇಂದಿನ ರೈತರು ಕೃಷಿಯಿಂದ ದೂರ ಉಳಿದು ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ಹೀಗೆ ಮುಂದುವ ರೆದರೆ ಮುಂದಿನ ಪೀಳಿಗೆಗೆ ಸಂಕಷ್ಟ ಎದುರಾಗಲಿದೆ. ಪ್ರತಿ ಬೆಳೆಗೂ ಸರ್ಕಾರ ಬೆಂಬಲ ಬೆಲೆ ಘೋಷಿಸಿ ಸ್ಥಳೀಯವಾಗಿ ಬೆಳೆಯನ್ನು ಖರೀದಿಸುವಂತಾಗಬೇಕು ಎಂದು ಕೋಲ ಶಾಂತೇಶ್ವರ ಮಠದ ಶ್ರೀ ಶಾಂತಲಿಂಗ ದೇಶಿಕೇಂದ್ರ ಸ್ವಾಮಿಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿ ಉಪ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೆಳೆಯುತ್ತಾರೆ. ಇಲ್ಲಿಂದ ಬೇರೆ ಡೆಗೆ ಮಾರಾಟ ಮಾಡುವ ಸಂದರ್ಭದಲ್ಲಿ ದಲ್ಲಾಳಿಗಳ ಕಾಟಕ್ಕೆ ರೈತರು ನಲುಗಿದ್ದರು. ಅಲ್ಲದೆ ದೂರಕ್ಕೆ ಸಾಗಿ ಸುವ ಖರ್ಚು ವೆಚ್ಚದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿತ್ತು. ಇದೀಗ ಹೋಬಳಿ ಮಟ್ಟದಲ್ಲಿ ಉಪ ಖರೀದಿ ಕೇಂದ್ರ ಸ್ಥಾಪಿರುವುದು ರೈತರಿಗೆ ವರವಾಗ ಲಿದೆ. ಪ್ರತಿ ರೈತರು ಯೋಜನೆಯ ಮಾಹಿತಿಯನ್ನು ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಗ್ರಾಮದಲ್ಲಿ ಗೋದಾಮು ನಿರ್ಮಾಣಕ್ಕಾಗಿ ಹಾಗೂ ಸಂತೆಗೆ ಜಾಗದ ಸಮಸ್ಯೆ ಇರುವ ಮಾಹಿತಿ ಇದೆ. ಆದರೆ ಈ ಹಿಂದೆಯೇ ಜಾಗವನ್ನು ಮೀಸಲಿರಿ ಸಿರುವ ಮಾಹಿತಿ ಇದ್ದು, ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರು ವರದಿಯನ್ನು ಪಡೆದು ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದು ತಿಳಿಸಿದರು.
ಹರಪನಹಳ್ಳಿ ಆಹಾರ ಶಿರಸ್ತೇ ದಾರ್ ಸಂಜಯ್ ಬಾಗೇವಾಡಿ ಮಾತನಾಡಿ, ತಾಲ್ಲೂ ಕಿನ ಅರಸೀಕೆರೆ, ಚಿಗಟೇರಿ, ಹಲವಾಗಲು ಹೋಬಳಿ ಗಳಲ್ಲಿ ಖರೀದಿ ಉಪ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅರಸೀಕೆರೆ ಹೋಬಳಿಯ ಶೇ. 80% ರಷ್ಟು ರೈತರು ಕೇಂದ್ರದಲ್ಲಿ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಹಾಗಾಗಿ ಇಲ್ಲಿನ ರೈತರು ತಾಲ್ಲೂಕು ಕೇಂದ್ರದಲ್ಲಿ ಮಾರಾಟ ಮಾಡಬೇಕಾಗಿದೆ. ಈ ಕುರಿತು ರೈತರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇಲಾಖೆ ನಿಯಮಗಳನ್ನು ಸಡಿಲಿಸಿ ನೋಂದಾಯಿತ ರೈತರು ತಮ್ಮದೇ ಹೋಬಳಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡುವಂತೆ, ಹಾಗೂ ತಾಲ್ಲೂಕಿನ ರೈತರು ತಮ್ಮ ಹತ್ತಿರದ ಯಾವುದಾದರೂ ಕೇಂದ್ರಕ್ಕೆ ಮಾರಾಟ ಮಾಡುವ ಕುರಿತು ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪೂಜಾರ್ ಪ್ರಕಾಶ್, ಎಪಿಎಂಸಿ ನಿರ್ದೇಶಕ ಬೂದಾಳ್ ಉಮೇಶ್, ಎ.ಎಚ್. ಪಂಪಣ್ಣ, ಕೃಷಿ ಪಂಡಿತ ಕೊಟ್ರೇಶ್, ಕೃಷಿ ಇಲಾಖೆ ಬಣಸವಾಡಿ, ಅಜ್ಜಪ್ಪ, ಕಾರ್ಯ ನಿರ್ವಹಣಾ ಅಧಿಕಾರಿ ಶ್ರೀನಿವಾಸ, ಆಹಾರ ಇಲಾಖೆ ಅಧಿಕಾರಿ ಸಂಜಯ್ ಬಾಗೇವಾಡಿ, ವಾಸುದೇವಪ್ಪ, ವೆಂಕಟ ಶೆಟ್ಟಿ, ಹಾಲಪ್ಪ, ಪರಶುರಾಮಪ್ಪ ಉಪಸ್ಥಿತರಿದ್ದರು.