ಅರಣ್ಯ ಪ್ರದೇಶದಲ್ಲಿ 1000 ಮಳೆ ನೀರು ಗುಂಡಿಗಳ ನಿರ್ಮಾಣ

ಅರಣ್ಯಾಧಿಕಾರಿಗಳ ವೃತ್ತಿ ಧರ್ಮಕ್ಕೆ ಪರಿಸರ ಪ್ರಿಯರ ಶ್ಲ್ಯಾಘನೆ

ಕೂಡ್ಲಿಗಿ, ಜೂ. 7 –  ತಾಲ್ಲೂಕಿನ ಗುಡೇಕೋಟೆ ಕರಡಿಧಾಮ ಅರಣ್ಯ ಪ್ರದೇಶದಲ್ಲಿ  ಅರಣ್ಯಾಧಿಕಾರಿಗಳ ನೇತೃತ್ವ ದಲ್ಲಿ   ನೀರು ಹರಿಯುವ ಸ್ಥಳಗಳಲ್ಲಿ ಗುಂಡಿಗಳನ್ನು ನಿರ್ಮಿಸುವ ಮೂಲಕ ಉದ್ಯೋಗ ಖಾತ್ರಿ ಯೋಜನೆಯನ್ನು ಸದುಪಯೋಗಪಡಿಸಿಕೊಂಡಿದ್ದು, ವಿಶ್ವ ಪರಿಸರ ದಿನಾಚರಣೆಯ 3 ದಿನದ ಮುಂಚೆ  ಉತ್ತಮ ಮಳೆಯಾಗಿದ್ದರಿಂದ  ಈ ಗುಂಡಿಗಳು ತುಂಬಿಕೊಂಡು  ಅರಣ್ಯ ಮತ್ತು ವನ್ಯಜೀವಿಗಳಿಗೆ ಆಸರೆಯಾಗಿವೆ. 

ಗುಡೇಕೋಟೆ, ಅಪ್ಪೇನಹಳ್ಳಿ, ಸಿಡೇಗಲ್ಲು, ರಾಮದುರ್ಗ ಅರಣ್ಯಪ್ರದೇಶಗಳಲ್ಲಿ ಇಂತಹ ನೀರು ಸಂಗ್ರಹಿಸುವ  ಟ್ರೆಂಚ್‌ಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ್ದು, ಅರಣ್ಯದ ಗಿಡಮರಗಳಿಗೆ ಹಾಗೂ ವನ್ಯಜೀವಿಗಳಿಗೆ ಆ ಗುಂಡಿಗಳು ಆಸರೆಯಾಗುವುದಲ್ಲದೇ ಸ್ಥಳೀಯ ಕೂಲಿ ಕಾರ್ಮಿಕರಿಗೆ, ರೈತರಿಗೆ ಲಾಕ್‌ಡೌನ್‌ ಸಮಯದಲ್ಲಿ ಸಹಸ್ರಾರು ಮಾನವ ದಿನಗಳ ಕೂಲಿಯನ್ನು ಒದಗಿಸಿದಂತಾಗಿದೆ. ಮಳೆ ನೀರನ್ನು ಸಹ ಅಲ್ಲಲ್ಲೇ ಇಂಗಿಸಿದಂತಾಗುವುದಲ್ಲದೇ ಪ್ರಾಣಿ, ಪಕ್ಷಿಗಳಿಗೆ ಮಳೆಗಾಲದಲ್ಲಿ ಕುಡಿಯುವ ನೀರು ಎಲ್ಲಾ ಪ್ರದೇಶಗಳಲ್ಲಿ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. 

ಸಾವಿರಕ್ಕೂ ಹೆಚ್ಚು ಗುಂಡಿಗಳು: ಗುಡೇಕೋಟೆ ಕರಡಿಧಾಮ ಪ್ರದೇಶದಲ್ಲಿ 1,000 ಕ್ಕೂ ಹೆಚ್ಚು ಮಳೆ ನೀರು ಸಂಗ್ರಹಿಸುವ ಗುಂಡಿಗಳನ್ನು ನಿರ್ಮಿಸಲಾಗಿದ್ದು, ನೀರಿನ ಹರಿವಿನ ಪ್ರಮಾಣ ನೋಡಿ  ಗುಂಡಿಗಳ ಅಳತೆಯನ್ನು ಮಾಡಲಾಗಿದೆ.

ನೀರು ಹೆಚ್ಚು ಹರಿಯುವ ಪ್ರದೇಶದಲ್ಲಿ 5 ಮೀಟರ್  ಉದ್ದ, 2 ರಿಂದ 3 ಮೀಟರ್  ಅಗಲ, 1 ಮೀಟರ್ ಆಳದ ಗುಂಡಿಗಳನ್ನು ತೆಗೆಯಲಾಗಿದೆ.

ನೀರು ಕಡಿಮೆ ಹರಿಯುವ ಪ್ರದೇಶದಲ್ಲಿ 3 ಮೀ. ಉದ್ದ, 1 ಮೀಟರ್ ಅಗಲ, 1 ಮೀಟರ್ ಆಳದ ಗುಂಡಿಗಳನ್ನು ತೆಗೆಸಲಾಗಿದೆ. ಈ ಎಲ್ಲಾ ಟ್ರೆಂಚ್‌ಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರು ತೆಗೆದಿದ್ದು , 23,605 ಮಾನವ ದಿನಗಳನ್ನು ಬಳಸಿ ಕೊಂಡು ಖಾತ್ರಿ ಯೋಜನೆಯನ್ನು ಅರಣ್ಯಾಧಿಕಾರಿಗಳು ಸದುಪಯೋಗಪಡಿಸಿ ಕೊಂಡಿರುವುದು ಶ್ಲಾಘನೀಯ.

error: Content is protected !!