ಹರಪನಹಳ್ಳಿ ಡಿವೈಎಸ್‌ಪಿ ಹಾಲಮೂರ್ತಿ ರಾವ್ ಹಿತನುಡಿ
ಹರಪನಹಳ್ಳಿ, ಆ.3- ವಿದ್ಯಾರ್ಥಿಗಳು ಬರೀ ಪುಸ್ತಕವನ್ನು ಓದಿದರೆ ಸಾಲದು, ಪುಸ್ತಕದ ಜೊತೆ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಲು ದಿನಪತ್ರಿಕೆ ಹಾಗೂ ಸಾಹಿತ್ಯ ಪುರವಣಿಗಳನ್ನು ಓದುವ ಮೂಲಕ ಉನ್ನತ ವ್ಯಾಸಂಗಕ್ಕೆ ಜ್ಞಾನ ಸಂಪಾದಿಸಿರಿ ಎಂದು ಡಿವೈಎಸ್‌ಪಿ ಹಾಲಮೂರ್ತಿ ರಾವ್ ಹಿತ ನುಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾಲ್ಲೂಕು ಘಟಕದ ವತಿಯಿಂದ ಮೊನ್ನೆ ಹಮ್ಮಿಕೊಂಡಿದ್ದ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಮಾನಗಳಲ್ಲಿ ಓದುವ ಮನೋಭಾವನೆ ಕಡಿಮೆಯಾಗುತ್ತಿರುವುದು ಚಿಂತಿಸುವ ವಿಷಯವಾಗಿದೆ. ಈ ಸನ್ಮಾನ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ. ಪತ್ರಿಕಾ ದಿನಾಚರಣೆ ಬರೀ ಹಾರ ತುರಾಯಿಗಳಿಗೆ ಸೀಮಿತವಾಗದೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆದ್ಯತೆ ನೀಡಿ ಸನ್ಮಾನ ಮಾಡುತ್ತಿರುವುದು ಉತ್ತಮ ಕೆಲಸವಾಗಿದೆ. ಈಗಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಸಾಕಷ್ಟು ಸೌಲಭ್ಯಗಳಿದ್ದು, ಅವುಗಳನ್ನು ಬಳಕೆ ಮಾಡಿಕೊಳ್ಳುವುದರ ಮೂಲಕ ಉನ್ನತ ಶಿಕ್ಷಣ ಪಡೆದುಕೊಳ್ಳುವ ಸಲಹೆ ನೀಡಿದರು.
ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಬರೀ ಅಂಕ ಗಳಿಕೆಗೆ ಸೀಮಿತವಾಗಿದ್ದಾರೆ. ಆದರೆ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವ ದಿನಮಾನಗಳಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡುವ ಹೊಣೆ ಪೋಷಕರ ಮೇಲಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತಳವಾರ ಚಂದ್ರಪ್ಪ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಪಿಯುಸಿ ದಿಕ್ಕನ್ನೇ ಬದಲಾಯಿಸುವ ಹಂತವಾಗಿದ್ದು, ಈ ಹಂತದಲ್ಲಿ ಉತ್ತಮ ಶಿಕ್ಷಣ ಕಲಿತು ಸಾಮಾ ಜಿಕ ಜಾಲತಾಣದಿಂದ ವಿದ್ಯಾರ್ಥಿಗಳು ಕೆಟ್ಟ ದಾರಿ ಹಿಡಿಯದೇ ಉತ್ತಮ ಅಂಶಗಳನ್ನು ತೆಗೆದುಕೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ರಾಮ ಪ್ರಸಾದ್ ಗಾಂಧಿ ಮಾತನಾಡಿ, ಕಳೆದ 2 ದಶಕಗಳ ಹಿಂದಿನ ಪತ್ರಿಕೆ ರಂಗಕ್ಕೂ ಈಗಿನ ಪತ್ರಿಕಾ ರಂಗಕ್ಕೂ ಸಾಕಷ್ಟು ಬದಲಾವಣೆಗಳಾಗಿದ್ದು, ವಿದ್ಯಾರ್ಥಿಗಳು ಕಾಲ ಬದಲಾವಣೆಯಾದಂತೆ ತಾವು ಕೂಡ ಬದಲಾವಣೆಯಾಗಬೇಕು ಎಂದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸುರೇಶ್ ಮಂಡಕ್ಕಿ, ಪ್ರಧಾನ ಕಾರ್ಯದರ್ಶಿ ಟಿ.ಬಿ. ರಾಜು, ಕಾರ್ಯದರ್ಶಿ ಸಿ. ನಾಗರಾಜ್ ನಾಯ್ಕ್, ಖಜಾಂಚಿ ಬಿ. ಮಾಧವರಾವ್, ಸದಸ್ಯರುಗ ಳಾದ ಹೆಚ್. ದೇವೇಂದ್ರಪ್ಪ, ಎಸ್. ರಾಘ ವೇಂದ್ರ, ಎಸ್. ಬಸವರಾಜ್ ಇನ್ನಿತರರಿದ್ದರು.