ಆಸ್ಟ್ರೇಲಿಯ ವಿರುದ್ಧ 1-0 ಅಂತರದ ಐತಿಹಾಸಿಕ ಗೆಲುವು
ಟೋಕಿಯೋ, ಆ. 2 – ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ದಿಟ್ಟ ಹಾಗೂ ದೃಢ ಪ್ರದರ್ಶನ ನೀಡಿರುವ ಭಾರತೀಯ ಮಹಿಳಾ ಹಾಕಿ ತಂಡ, 1-0 ಅಂತರದ ಗೆಲುವು ಸಾಧಿಸುವುದರೊಂದಿಗೆ, ಒಲಿಂಪಿಕ್ಸ್ನಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ಹಂತ ತಲುಪಿದೆ.
ಸೋಮವಾರ ನಡೆದ ಬಿರುಸಿನ ಪಂದ್ಯದಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಹಾಗೂ ವಿಶ್ವದ 2ನೇ ಶ್ರೇಯಾಂಕದಲ್ಲಿರುವ ಆಸ್ಟ್ರೇಲಿಯಾಗೆ ಭಾರತೀಯ ತಂಡ ಆಘಾತಕಾರಿ ಸೋಲುಣಿಸಿ ಇತಿಹಾಸ ಬರೆದಿದೆ. ನಿನ್ನೆಯಷ್ಟೇ ಭಾರತೀಯ ಹಾಕಿ ಪುರುಷರ ತಂಡ 49 ವರ್ಷಗಳ ನಂತರ ಸೆಮಿಫೈನಲ್ ಹಂತಕ್ಕೆ ತಲುಪಿತ್ತು.
ಡ್ರಾಗ್ – ಫ್ಲಿಕರ್ ಗುರ್ಜಿತ್ ಕೌರ್ ಅವರು ಸಮಯೋಚಿತವಾಗಿ ಆಟವಾಡಿ ಭಾರತಕ್ಕೆ ದೊರೆತ ಏಕೈಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು 22ನೇ ನಿಮಿಷದಲ್ಲಿ ಗೋಲ್ ಆಗಿ ಪರಿವರ್ತಿಸಿದರು.
ಇಡೀ ಸರಣಿಯಲ್ಲಿ ಸೋಲನ್ನೇ ಕಾಣದ ಆಸ್ಟ್ರೇಲಿಯಾ ವಿರುದ್ಧ ಭಾರತೀಯ ಮಹಿಳೆಯರು ಕಠಿಣ ಸವಾಲು ಹೊಂದಿದ್ದರು. ಆದರೆ, ಬಿರುಸಿನ ಹೋರಾಟದಲ್ಲಿ ಮಹಿಳಾ ತಂಡ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.
ಸುದೀರ್ಘ ಕಾಲದ ಕಠಿಣ ಪರಿಶ್ರಮ ಫಲ ನೀಡಿರುವುದು ಸಂತೋಷ ತಂದಿದೆ. 1980ರಲ್ಲಿ ನಾವು ಪಂದ್ಯಾವಳಿಯಲ್ಲಿ ಅರ್ಹತೆ ಪಡೆದಿದ್ದೆವು. ಆದರೆ, ಈ ಬಾರಿ ಸೆಮಿಫೈನಲ್ ಹಂತಕ್ಕೆ ಬಂದಿರುವುದು ನಮಗೆಲ್ಲ ಹೆಮ್ಮೆ ಎಂದು ಪಂದ್ಯದ ನಂತರ ಗುರ್ಜೀತ್ ಹೇಳಿದ್ದಾರೆ.
ರಾಣಿ ರಾಮಪಾಲ್ ನೇತೃತ್ವದ ತಂಡ ಅರ್ಜೆಂಟಿನಾ ವಿರುದ್ಧ ಬುಧವಾರ ಸೆಮಿಫೈನಲ್ ಹಂತದ ಸೆಣಸಾಟ ನಡೆಸಲಿದೆ. ಭಾರತೀಯ ಮಹಿಳೆಯರ ಆರಂಭಿಕ ಆಟ ಮಂದಗತಿಯಲ್ಲಿತ್ತು. ಆಸ್ಟ್ರೇಲಿಯಾ ಗೋಲ್ ಗಳಿಸುವ ಮೊದಲ ಪ್ರಯತ್ನ ನಡೆಸಿದ್ದನ್ನು ಗೋಲ್ಕೀಪರ್ ಅಮ್ರೋಸಿಯ ಮಲೊನೆ ತಡೆದರು.
ನಂತರ ಭಾರತೀಯ ಆಟಗಾರ್ತಿಯರು ಬಿರುಸಿನ ದಾಳಿಗಿಳಿದರು. ಇದು ಆಸ್ಟ್ರೇಲಿಯಾದ ರಕ್ಷಣಾ ಆಟಗಾರರಿಗೆ ಅಚ್ಚರಿ ತಂದಿತು. 22ನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ದೊರೆಯಿತು. ಇದುವರೆಗೂ ನಿರಾಸೆಯನ್ನೇ ಕಾಣುತ್ತಾ ಬಂದಿದ್ದ ಗುರ್ಜಿತ್, ಸಮಯೋಚಿತವಾಗಿ ಗೋಲ್ ಗಳಿಸುವಲ್ಲಿ ಯಶಸ್ವಿಯಾದರು. ಒಂದು ಗೋಲ್ನಿಂದ ಹಿಂದೆ ಬಿದ್ದ ಆಸ್ಟ್ರೇಲಿಯಾ, ನಂತರದಲ್ಲಿ ಹಲವು ಬಾರಿ ದಾಳಿ ನಡೆಸಿತು. ಆದರೆ, ಸವಿತಾ ಗೋಲ್ ಅವಕಾಶಗಳನ್ನು ತಡೆಯುವಲ್ಲಿ ಯಶಸ್ವಿಯಾದರು. ಸತತ ಮೂರು ಬಾರಿ ಪೆನಾಲ್ಟಿ ಕಾರ್ನರ್ ಪಡೆದ ಆಸ್ಟ್ರೇಲಿಯಾವನ್ನು ಸವಿತ ಹಾಗೂ ದೀಪ್ ಗ್ರೇಸ್ ಎಕ್ಕಾ ನೇತೃತ್ವದ ರಕ್ಷಣಾ ತಂಡ ತಡೆಯಿತು.
ನಂತರ ಬಹುತೇಕ ಆಟ ಭಾರತದ ವೃತ್ತದಲ್ಲೇ ನಡೆಯಿತು. ತೀವ್ರ ಒತ್ತಡವನ್ನು ಎದುರಿಸಿದ ಭಾರತೀಯ ಆಟಗಾರ್ತಿಯರು, ಯಾವುದೇ ಗೋಲ್ ಗಳಿಸುವ ಅವಕಾಶ ನೀಡಲಿಲ್ಲ.
ಆಟದ ಕೊನೆಯ ಎಂಟು ನಿಮಿಷಗಳಲ್ಲಿ ಆಸ್ಟ್ರೇಲಿಯಾ ನಾಲ್ಕು ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಆದರೆ, ಭಾರತದ ರಕ್ಷಣಾ ಕೋಟೆ ಬೇಧಿಸಲು ಸಾಧ್ಯವಾಗಲಿಲ್ಲ.